ಪ್ರೇಮ ವೈಫಲ್ಯದ ಶಂಕೆ: ಯುವತಿಯ ಮೇಲೆ ಹಲ್ಲೆ ನಡೆಸಿ, ಕಾರು ಸ್ಫೋಟದಲ್ಲಿ ಅಂತ್ಯಕಂಡ ಅಂಕೋಲಾ ಯುವಕ..!!

News Desk
1 Min Read

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಪ್ರೇಯಸಿಗೆ ಚಾಕು ಇರಿದು ಬಳಿಕ ಕಾರು ಸ್ಫೋಟಗೊಂಡು ಪ್ರಿಯಕರ ಸಜೀವ ದಹನವಾಗಿದ್ದಾನೆ. ಮೃತ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಬ್ಬುಲು ಗ್ರಾಮದ ನಾಗೇಂದ್ರ (30) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ರಮ್ಯಾ ಸದ್ಯ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ನಾಗೇಂದ್ರ ಹಾಗೂ ರಮ್ಯಾ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ರಮ್ಯಾ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಅಲ್ಲಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ‘ಓಟಿ ಟೆಕ್ನಿಷಿಯನ್’ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ರಮ್ಯಾ, ನಾಗೇಂದ್ರನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು ಎನ್ನಲಾಗಿದೆ.

ಶನಿವಾರ ಬೆಳಿಗ್ಗೆ ರಮ್ಯಾ ವಾಸವಿರುವ ಮನೆಗೆ ಹೋಗಿ ಅಂಕೋಲಾಕ್ಕೆ ಹೋಗಿಬರೋಣ ಎಂದು ನಂಬಿಸಿ ಕಾರಿನಲ್ಲಿ ರಮ್ಯಾಳನ್ನು ಕರೆದುಕೊಂಡು ನಾಗೇಂದ್ರ ಹೊರಟಿದ್ದಾನೆ. ಬೆಂಗಳೂರಿನಿಂದ ಅಂಕೋಲಾದತ್ತ ಪ್ರಯಾಣಿಸುವಾಗ ಕಾರಿನಲ್ಲಿ ಇಬ್ಬರ ನಡುವೆ ಮತ್ತೆ ತೀವ್ರ ವಾಗ್ವಾದ ನಡೆದಿದೆ. ನಾಗೇಂದ್ರ ಬೆದರಿಕೆ ಹಾಕಿದ್ದಲ್ಲದೇ, ಪೆಟ್ರೋಲ್ ಬಾಂಬ್ ಅಥವಾ ನಾಡಬಾಂಬ್ ಮಾದರಿಯ ವಸ್ತುವನ್ನು ತೋರಿಸಿ ಕಾರು ಸ್ಫೋಟಿಸುವುದಾಗಿ ಹೆದರಿಸಿದ್ದಾನೆ. ಕಾರು ಶಿರಾ ತಾಲೂಕಿನ ಜೋಗಿಹಳ್ಳಿ ಸಮೀಪ ಬರುತ್ತಿದ್ದಂತೆ ನಾಗೇಂದ್ರ, ರಮ್ಯಾಳ ಕೈಗೆ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.

ಪ್ರಾಣಾಪಾಯದ ಅರಿವಾದ ತಕ್ಷಣ ರಮ್ಯಾ ಧೈರ್ಯ ಮಾಡಿ ಚಲಿಸುತ್ತಿದ್ದ ಕಾರಿನ ಬಾಗಿಲು ತೆಗೆದು ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆಕೆ ಕಾರಿನಿಂದ ಕೆಳಗೆ ಬೀಳುತ್ತಿದ್ದಂತೆಯೇ, ಕಾರಿನಲ್ಲಿ ಭಾರೀ ಸ್ಫೋಟ ಸಂಭವಿಸಿ ನಾಗೇಂದ್ರ ಒಳಗಡೆಯೇ ಸಜೀವ ದಹನವಾಗಿದ್ದಾನೆ. ಕಾರು ಸ್ಫೋಟಕ್ಕೆ ನಾಡಬಾಂಬ್ ಅಥವಾ ಪೆಟ್ರೋಲ್ ಬಾಂಬ್ ಬಳಸಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಗಾಯಾಳು ರಮ್ಯಾ ಅವರಿಗೆ ತುಮಕೂರು ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article
Leave a Comment