ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದಲ್ಲದೆ, ದಲಿತ ಯುವತಿ ಮತ್ತು ಆಕೆಯ ತಾಯಿಯ ಮೇಲೆ ನಡುರಸ್ತೆಯಲ್ಲಿ ಹಲ್ಲೆ ಹಾಗೂ ಜಾತಿನಿಂದನೆ ಮಾಡಿರುವ ಗಂಭೀರ ಘಟನೆ ವರದಿಯಾಗಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ತಿಮ್ಮಪ್ಪ ಅಂಬಿಗ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಕುಮಟಾ ತಾಲೂಕಿನ ಮಿರ್ಜಾನ್ ಬಿಜಿಎಸ್ ಸ್ಕೂಲ್ ಬಳಿಯ ನಿವಾಸಿ ಜಯಶ್ರೀ ಸುಬ್ರಾಯ ಮುಕ್ರಿ (42 ವರ್ಷ ) ಎಂಬುವವರು ನೀಡಿದ ದೂರಿನನ್ವಯ ಈ ಎಫ್.ಐ.ಆರ್ ದಾಖಲಾಗಿದೆ. ಆರೋಪಿ ಪ್ರವೀಣ್, ದೂರುದಾರರ ಮಗಳಾದ ಚೈತ್ರಾಳನ್ನು (2೦) ಪ್ರೀತಿಸಿ ಮದುವೆಯಾಗುವುದಾಗಿ ಭರವಸೆ ನೀಡಿ, ದಿನಾಂಕ ನಿಗದಿಪಡಿಸಿದ ಬಳಿಕ ವಿವಾಹವಾಗದೇ ಹಾಗೂ ವಿವಾಹ ನೋಂದಣಿಯನ್ನೂ ಮಾಡಿಕೊಳ್ಳದೆ ವಂಚಿಸಿದ್ದನು. ಇದರಿಂದಾಗಿ ಯುವತಿಯು ಆತನಿಂದ ದೂರ ಉಳಿದಿದ್ದಳು. ಇದೇ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಯು ಈ ಕೃತ್ಯವೆಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ದಿನಾಂಕ 08-04-2026 ರಂದು ಸಂಜೆ 4:10 ರ ಸುಮಾರಿಗೆ ಯುವತಿ ಮತ್ತು ಆಕೆಯ ತಾಯಿ ಕುಮಟಾದಿಂದ ಬಸ್ಸಿನಲ್ಲಿ ಮರಳಿ ಮಿರ್ಜಾನ ಬಿಜಿಎಸ್ ಸ್ಕೂಲ್ ಬಳಿ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಸ್ಕೂಟರ್‌ನಲ್ಲಿ ಬಂದ ಆರೋಪಿ ಅವರಿಗೆ ಅಡ್ಡಗಟ್ಟಿದ್ದಾನೆ. ಈ ವೇಳೆ ಆರೋಪಿಯು ಯುವತಿಗೆ ಅಸಭ್ಯ ಪದಗಳಿಂದ ಬೈದು, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮಗಳನ್ನು ರಕ್ಷಿಸಲು ಹೋದ ತಾಯಿಗೂ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಲಗೈ ಹಿಡಿದು ತಿರುವಿ ಬಳೆ ಒಡೆದು ರಕ್ತಗಾಯ ಮಾಡಿದ್ದಾನೆ. ಅಲ್ಲದೆ, ನಾರಾಯಣ ವೆಂಕಟರಮಣ ಅಂಬಿಗ ಎಂಬುವವರ ಅಂಗಡಿ ಬಳಿಯೂ ಯುವತಿಗೆ ಹೊಡೆದು, ತಾಯಿಗೆ ಕಲ್ಲಿನಿಂದ ಹೊಡೆಯಲು ಮುಂದಾಗಿ, ಪೊಲೀಸ್ ಠಾಣೆಗೆ ದೂರು ನೀಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಘಟನೆಯ ಕುರಿತು ದೂರುದಾರರು ದಿನಾಂಕ 09/04/02026 ರಂದು ಮಧ್ಯಾಹ್ನ 1:30 ಕ್ಕೆ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದಾರೆ.
ಈ ಗಂಭೀರ ಸ್ವರೂಪದ ಅಪರಾಧಕ್ಕಾಗಿ ಕುಮಟಾ ಪೊಲೀಸರು ಆರೋಪಿಯ ವಿರುದ್ಧ ಹೊಸ ಅಪರಾಧ ಕಾನೂನಾದ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 126, 115(2), 352, 351(2), 74 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಜೊತೆಗೆ, ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಹಾಗೂ ದೌರ್ಜನ್ಯ ಎಸಗಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015 ರ ಸೆಕ್ಷನ್ 3(1)(r), 3(1)(s), 3(1)(w)(i), 3(2)(va) ಅಡಿಯಲ್ಲಿಯೂ ಎಫ್.ಐ.ಆರ್ (Crime No: 0064/2026) ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ವಿಕಾಸ ವಾಹಿನಿ ವರದಿ

