ಅಂಕೋಲಾದಲ್ಲಿ ವೃದ್ಧ ಮಹಿಳೆಯ ಮೇಲೆ ಹಲ್ಲೆ ಆರೋಪ: ಕೇಣಿಯ ರಾಘು ಅಶೋಕ ನಾಯ್ಕ ವಿರುದ್ಧ ಪ್ರಕರಣ ದಾಖಲು..

News Desk
1 Min Read

ಅಂಕೋಲಾ: ಅಂಕೋಲಾ ತಾಲೂಕಿನ ಹೊನ್ನಿಕೇರಿ ಗ್ರಾಮದ ವೃದ್ಧ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಹಲ್ಲೆಗೆ ಒಳಗಾದವರು ರೋಹಿಣಿ ಗಂಗಾಧರ ನಾಯ್ಕ (62) ಆಗಿದ್ದು, ದಿನಾಂಕ 15-12-2025 ರಂದು ಬೆಳಿಗ್ಗೆ ಸುಮಾರು 9.50 ಗಂಟೆಯ ವೇಳೆಗೆ ತಮ್ಮ ಮನೆಯ ಸಮೀಪದ ಕುಡಿಯುವ ನೀರಿನ ಬಾವಿಯ ಬಳಿ ನೀರು ತರಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಪೊಲೀಸರಿಗೆ ನೀಡಿದ ದೂರಿನಲ್ಲಿ, ಆ ವೇಳೆ ಅಲ್ಲಿಗೆ ಬಂದ ರಾಘು ಅಶೋಕ ನಾಯ್ಕ, ಸಾ|| ಕೇಣಿ, ಅಂಕೋಲಾ ತಾಲೂಕ ಇವರು ವೃದ್ಧ ಮಹಿಳೆಯೊಂದಿಗೆ ಅಸಭ್ಯ ಹಾಗೂ ಅವಾಚ್ಯ ಪದಗಳನ್ನು ಬಳಸಿ ಮಾತಿನ ಚಕಮಕಿ ನಡೆಸಿದ್ದು, ನಂತರ ಹಲ್ಲೆಗೆ ಮುಂದಾದರು ಎಂದು ಆರೋಪಿಸಲಾಗಿದೆ. ದೂರಿನ ಪ್ರಕಾರ, ಆರೋಪಿತ ವ್ಯಕ್ತಿ ವೃದ್ಧ ಮಹಿಳೆಯ ಕೂದಲು ಹಿಡಿದು ಎಳೆದಿದ್ದು, ಸೀರೆಯನ್ನು ಎಳೆದು ಅವಮಾನಗೊಳಿಸಿದ್ದು, ಕೈಯಿಂದ ಹಾಗೂ ಕಾಲಿನಿಂದ ಹಲ್ಲೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಜೊತೆಗೆ ಜೀವ ಬೆದರಿಕೆ ಹಾಕಿದರೆಂದು ಕೂಡ ದೂರಿನಲ್ಲಿ ಹೇಳಲಾಗಿದೆ.

ಘಟನೆಯ ಸಂದರ್ಭದಲ್ಲಿ ಸ್ಥಳೀಯರು ಸೇರಿರುವುದನ್ನು ಗಮನಿಸಿದ ನಂತರ ಆರೋಪಿತ ವ್ಯಕ್ತಿ ಸ್ಥಳದಿಂದ ತೆರಳಿದ್ದು, ಬಳಿಕ ಗಾಯಗೊಂಡ ಮಹಿಳೆಯನ್ನು ಕುಟುಂಬಸ್ಥರು ಅಂಕೋಲಾ ತಾಲೂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು FIR ನಲ್ಲಿ ಉಲ್ಲೇಖವಾಗಿದೆ.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಿನಾಂಕ 15-12-2025 ರಂದು ಅಪರಾಧ ಸಂಖ್ಯೆ 0234/2025 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು,ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 111(2), 329(3), 352, 74 ಮತ್ತು 351(2) ಅಡಿಯಲ್ಲಿ ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಸಾಕ್ಷ್ಯ ಸಂಗ್ರಹ ಹಾಗೂ ಸಂಬಂಧಪಟ್ಟವರ ಹೇಳಿಕೆಗಳನ್ನು ಪಡೆಯಲಾಗುತ್ತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

Share This Article