ಅಂಕೋಲಾ ಪುರಸಭೆ: ಆಡಳಿತಾಧಿಕಾರಿ ನೇಮಕಾತಿಗೆ ಹೈಕೋರ್ಟ್ ತಾತ್ಕಾಲಿಕ ತಡೆ — ಆದರೆ ಪುರಸಭೆ ಮಂಡಳಿಗೆ ದಿನನಿತ್ಯ ಕಾರ್ಯ ನಿರ್ವಹಣೆಯಷ್ಟೇ ಅಧಿಕಾರ; ಹೊಸ ಯೋಜನೆ, ನೀತಿ ನಿರ್ಣಯ ಅಥವಾ ಹಣಕಾಸು ಅನುಮೋದನೆಗೆ ಅಧಿಕಾರವಿಲ್ಲ..

News Desk
2 Min Read

ಕರ್ನಾಟಕ ಸರ್ಕಾರವು ನವೆಂಬರ್ 6, 2025 ರಂದು ಹೊರಡಿಸಿದ ಅಧಿಕೃತ ಗಜೆಟ್ ಪ್ರಕಟಣೆಯ ಮೂಲಕ ರಾಜ್ಯದ ಅನೇಕ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಆಯ್ಕೆಯಾದ ಮಂಡಳಿಗಳ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸುವ ಆದೇಶ ಹೊರಡಿಸಿತು. ಈ ಕ್ರಮವನ್ನು ಸರ್ಕಾರವು ಕರ್ನಾಟಕ ಪೌರಸಭೆಗಳ ಕಾಯ್ದೆ, 1964ರ ಕಲಂ 315 ಹಾಗೂ 389ರ ಅಡಿಯಲ್ಲಿ ಕೈಗೊಂಡಿದ್ದು, ಹೊಸ ಚುನಾಯಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೂ ಸ್ಥಳೀಯ ಸಂಸ್ಥೆಗಳ ದಿನನಿತ್ಯ ಆಡಳಿತ ನಿರ್ವಹಣೆ ಅಡಚಣೆಗೊಳಗಾಗದಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ಆದೇಶ ಪ್ರಕಟಿಸಲಾಯಿತು. ಅದರಂತೆ, ಉತ್ತರ ಕನ್ನಡ ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳಲ್ಲಿ — ಕಾರವಾರ, ಶಿರಸಿ, ದಾಂಡೇಲಿ, ಅಂಕೋಲಾ, ಕುಮಟಾ, ಭಟ್ಕಳ ಮತ್ತು ಹಳಿಯಾಳ — ಆಡಳಿತಾಧಿಕಾರಿಗಳನ್ನು ನೇಮಿಸಿ ಸರ್ಕಾರ ರಾಜ್ಯಪತ್ರ ಪ್ರಕಟಿಸಿದೆ.

ಆದರೆ ಇದೇ ವೇಳೆ ಧಾರವಾಡ ಪೀಠದಲ್ಲಿ W.P. No.108278/2025 ಎಂಬ ಪ್ರಕರಣದಲ್ಲಿ ಶ್ರೀ ಸೂರಜ್ ಮನೋಹರ ನಾಯ್ಕ ಅವರು ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಪ್ರಕರಣದ ಪ್ರಾಥಮಿಕ ವಿಚಾರಣೆಯಲ್ಲಿ ಮಾನ್ಯ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರು ನವೆಂಬರ್ 6, 2025ರಂದು ಮಧ್ಯಂತರ ಆದೇಶ ಹೊರಡಿಸಿ, “ಸರ್ಕಾರ ಆಡಳಿತಾಧಿ ಕಾರಿಯನ್ನು ನೇಮಿಸಲು ಮುಂದಾಗಿದೆ ಎಂದು ತಿಳಿದು ಬಂದಿರುವುದರಿಂದ, ಮುಂದಿನ ವಿಚಾರಣೆಗಿಂತ ಮುಂಚೆ ಯಾವುದೇ ಆಡಳಿತಾಧಿಕಾರಿ ನೇಮಕಾತಿ ಕ್ರಮ ಕೈಗೊಳ್ಳಬಾರದು” ಎಂದು ಸ್ಪಷ್ಟ ನಿರ್ದೇಶನ ನೀಡಿದರು.

ಜೊತೆಗೆ, “ಪುರಸಭೆಯ ಆಯ್ಕೆಯಾದ ಸದಸ್ಯರು ಯಾವುದೇ ನೀತಿ ಅಥವಾ ಹಣಕಾಸು ಸಂಬಂಧಿತ ನಿರ್ಣಯ ಕೈಗೊಳ್ಳಬಾರದು” ಎಂಬ ಸೂಚನೆಯನ್ನು ನೀಡಿದರು.ಈ ಆದೇಶವು ಕೇವಲ ಮಧ್ಯಂತರ ತಡೆ ಆಗಿದ್ದು, ಸರ್ಕಾರದ ಅಧಿಕಾರ ಅಥವಾ ಆದೇಶವನ್ನು ಶಾಶ್ವತವಾಗಿ ರದ್ದು ಗೊಳಿಸುವಂತಿಲ್ಲ.

ನ್ಯಾಯಾಲಯವು ಕಾನೂನುಪರ ವಿಚಾರಣೆ ಮುಂದುವರಿಸುವ ವೇಳೆ ಸರ್ಕಾರದ ಅಧಿಕಾರಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು “ತೆರೆದ” ಸ್ಥಿತಿಯಲ್ಲಿ ಇಟ್ಟಿದೆ. ಅಂದರೆ, ಸರ್ಕಾರವು ಹೈಕೋರ್ಟ್ ಮುಂದೆ ತನ್ನ ಪರ ವಾದವನ್ನು ಮಂಡಿಸಲು ಹಾಗೂ ಕಾನೂನುಬದ್ಧವಾಗಿ ಆಡಳಿತಾಧಿಕಾರಿ ನೇಮಕವನ್ನು ನ್ಯಾಯಾಲಯದ ಅನುಮೋದನೆಗೆ ಒಳಪಡಿಸಲು ಅವಕಾಶ ಹೊಂದಿದೆ.

ಹೀಗಾಗಿ ಪ್ರಸ್ತುತ ಹಂತದಲ್ಲಿ ಅಂಕೋಲಾ ಪುರಸಭೆಯ ಆಯ್ಕೆಯಾದ ಮಂಡಳಿ ತಮ್ಮ ಸ್ಥಾನದಲ್ಲಿ ತಾತ್ಕಾಲಿಕವಾಗಿ ಮುಂದುವರಿ ಯುತ್ತಿದ್ದರೂ, ಅವರಿಗೆ ಮಾತ್ರ ದಿನನಿತ್ಯ ನಿರ್ವಹಣಾ ಅಧಿಕಾರ ಮಾತ್ರವಿದೆ.

ಯಾವುದೇ ಹೊಸ ಯೋಜನೆ, ನೀತಿ ನಿರ್ಣಯ ಅಥವಾ ಹಣಕಾಸು ಸಂಬಂಧಿತ ನಿರ್ಧಾರ ಕೈಗೊಳ್ಳಲು ಅವರಿಗೆ ಕಾನೂನು ಪ್ರಕಾರ ಅಧಿಕಾರವಿಲ್ಲ. ಹೈಕೋರ್ಟ್‌ನ ಮಧ್ಯಂತರ ತಡೆ ಮುಂದುವರಿಯುವವರೆಗೆ ಆಡಳಿತಾಧಿಕಾರಿ ನೇಮಕ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ತಡೆ ತೆರವಾದ ನಂತರ ಸರ್ಕಾರದ ಗಜೆಟ್ ಆದೇಶದ ಪ್ರಕಾರ ಆಡಳಿತಾಧಿಕಾರಿ ನೇಮಕ ಖಚಿತವಾಗಿ ಜಾರಿಗೊಳ್ಳಲಿದೆ.

ಈ ಕಾರಣದಿಂದಾಗಿ ಅಂಕೋಲಾ ಪುರಸಭೆಯ ಪ್ರಸ್ತುತ ಸ್ಥಿತಿಯನ್ನು “ಆಡಳಿತಾವಧಿ ವಿಸ್ತರಣೆ” ಎಂದು ಕರೆಯುವುದು ತಾತ್ಕಾಲಿಕ ಸ್ಥಿತಿಯ ಅರ್ಥದಲ್ಲಿ ಮಾತ್ರ ಸೂಕ್ತವಾಗಿದೆ, ಅದು ಸರ್ಕಾರದ ಅಧಿಕೃತ ವಿಸ್ತರಣೆ ಅಲ್ಲ. ಸರ್ಕಾರದ ಆದೇಶ ಮಾನ್ಯವಾಗಿದ್ದು, ಹೈಕೋರ್ಟ್ ಮಧ್ಯಂತರ ಆದೇಶದ ಮಿತಿ ಒಳಗಡೆ ಅದರ ಜಾರಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಅಂತಿಮ ಸ್ಥಿತಿ ನಿರ್ಧಾರವಾಗಲಿದೆ.

………

Share This Article