ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ: 617 ಅಂಕಗಳೊಂದಿಗೆ ಅಂಕೋಲಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶಿರೂರಿನ “ಸ್ವೀಕಾರ ನಾಯ್ಕ”..

News Desk
2 Min Read

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೌಲಭ್ಯಗಳ ಕೊರತೆಯ ನಡುವೆಯೂ ತಮ್ಮ ಕಠಿಣ ಪರಿಶ್ರಮ ಹಾಗೂ ಅಚಲ ಆತ್ಮವಿಶ್ವಾಸದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬಲ್ಲರು ಎಂಬುದಕ್ಕೆ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಸ್ವೀಕಾರ ಅರುಣ ನಾಯ್ಕ ಅತ್ಯುತ್ತಮ ನಿದರ್ಶನವಾಗಿದ್ದಾರೆ.

ಪಟ್ಟಣದ ಪ್ರತಿಷ್ಠಿತ ‘ನಿರ್ಮಲ ಹೃದಯ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಈತ, ಇತ್ತೀಚೆಗೆ ಪ್ರಕಟವಾದ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಒಟ್ಟು 625ಕ್ಕೆ ಬರೋಬ್ಬರಿ 617 ಅಂಕಗಳನ್ನು ( 98.72%) ಗಳಿಸುವ ಮೂಲಕ ಇಡೀ ಅಂಕೋಲಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡು, ತಮ್ಮ ಶಾಲೆ ಹಾಗೂ ಶಿರೂರು ಗ್ರಾಮದ ಕೀರ್ತಿಯನ್ನು ತಾಲೂಕಿನಾದ್ಯಂತ ಎತ್ತಿ ಹಿಡಿದಿದ್ದಾನೆ.

ತನ್ನ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಈ ವಿದ್ಯಾರ್ಥಿಯ ಸಾಧನೆಯ ಹಾದಿ ನಿಜಕ್ಕೂ ಇತರರಿಗೆ ಸ್ಫೂರ್ತಿದಾಯಕವಾಗಿದೆ. ಆರಂಭದಲ್ಲಿ ಪ್ರಕಟವಾದ ಫಲಿತಾಂಶದಲ್ಲಿ625 ಕ್ಕೆ 610 ಅಂಕಗಳನ್ನು ಗಳಿಸಿ ಅತ್ಯುತ್ತಮ ಶ್ರೇಣಿಯಲ್ಲಿಯೇ ಉತ್ತೀರ್ಣರಾಗಿದ್ದರೂ, ಸ್ವೀಕಾರ ಅವರಿಗೆ ತಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ, ತಾನು ಇನ್ನು ಹೆಚ್ಚಿನ ಅಂಕ ಗಳಿಸಬಲ್ಲೆ ಎಂಬ ದೃಢವಾದ ಆತ್ಮವಿಶ್ವಾಸವಿತ್ತು. ತನ್ನ ಅಂಕಗಳನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಮತ್ತೆ ಪರೀಕ್ಷೆಯನ್ನು ಎದುರಿಸುವ ದಿಟ್ಟ ನಿರ್ಧಾರ ಕೈಗೊಂಡರು.

ವಿದ್ಯಾರ್ಥಿಯ ಈ ಅಚಲ ವಿಶ್ವಾಸ ಮತ್ತು ಬದ್ಧತೆಗೆ ಇದೀಗ ಅದ್ಭುತವಾದ ಜಯ ಸಿಕ್ಕಿದ್ದು, ಅಂಕಗಳಿಕೆಯ ಪ್ರಮಾಣ 617ಕ್ಕೆ ಏರಿಕೆಯಾಗುವ ಮೂಲಕ ಇಡೀ ತಾಲೂಕಿಗೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಸತತ ಅಧ್ಯಯನ, ಏಕಾಗ್ರತೆ ಹಾಗೂ ಗುರಿಯೆಡೆಗಿನ ಸ್ಪಷ್ಟ ದೃಷ್ಟಿಕೋನವಿದ್ದರೆ ಎಂಥದ್ದೇ ಮೈಲಿಗಲ್ಲನ್ನೂ ತಲುಪಬಹುದು ಎಂಬುದನ್ನು ನಿರ್ಮಲ ಹೃದಯ ಶಾಲೆಯ ಈ ವಿದ್ಯಾರ್ಥಿ ಸಾಬೀತುಪಡಿಸಿದ್ದಾರೆ. ಕೇವಲ ಅಂಕಗಳಿಕೆಯ ಉದ್ದೇಶ ಮಾತ್ರವಲ್ಲದೆ, ತನ್ನ ನೈಜ ಸಾಮರ್ಥ್ಯವನ್ನು ಒರೆಗೆ ಹಚ್ಚಿ ನೋಡುವ ಅವರ ಈ ಗುಣ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿನ ಯುವ ಸಮುದಾಯಕ್ಕೆ ಒಂದು ಉತ್ತಮ ಪಾಠವಾಗಿದೆ. ಯಾವುದೇ ಅಂಜಿಕೆಯಿಲ್ಲದೆ, ತನ್ನ ಮೇಲಿನ ನಂಬಿಕೆಯಿಂದ ಹೆಜ್ಜೆ ಮುಂದಿಟ್ಟ ಅವರ ಈ ಶೈಕ್ಷಣಿಕ ಉತ್ಕೃಷ್ಟತೆಗೆ ಇಡೀ ತಾಲೂಕು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

ನಾಗವೇಣಿ ಮತ್ತು ಅರುಣ ನಾಯ್ಕ ದಂಪತಿಗಳ ಮಗನಾಗಿರುವ ಸ್ವೀಕಾರ ಅವರ ಈ ಮಹತ್ವದ ಸಾಧನೆಯು ಪೋಷಕರ ಮುಖದಲ್ಲಿ ಹೆಮ್ಮೆಯ ಮಂದಹಾಸ ಮೂಡಿಸಿದೆ. ಗ್ರಾಮೀಣ ಪ್ರತಿಭೆಯೊಂದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದು ಶಿರೂರು ಗ್ರಾಮಸ್ಥರಲ್ಲಿ ಅತೀವ ಸಂತಸ ತಂದಿದ್ದು, ಊರಿನ ಗಣ್ಯರು, ನಿರ್ಮಲ ಹೃದಯ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸಹಪಾಠಿಗಳು ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಸ್ವೀಕಾರ ನಾಯ್ಕ ಅವರು ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ, ಸಮಾಜಕ್ಕೆ ಮಾದರಿಯಾಗಲಿ ಎಂದು ಎಲ್ಲರೂ ತುಂಬು ಹೃದಯದಿಂದ ಶುಭ ಹಾರೈಸಿದ್ದಾರೆ.

Share This Article
Leave a Comment