ಅಂಕೋಲಾದಲ್ಲಿ ಅತ್ಯಂತ ಅದ್ದೂರಿಯಾಗಿ ಸಂಭ್ರಮದಿಂದ ನಡೆದ 70ನೇ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಚಿಕ್ಕಪ್ಪ ನಾಯಕ್ ಅವರ ಪ್ರೇರಣಾದಾಯಕ ಮಾತು, ವಿದ್ಯಾರ್ಥಿಗಳ ವೇಷಭೂಷಣ ಜನಮನ ಗೆದ್ದಿತು..

News Desk
3 Min Read

ಅಂಕೋಲಾ : ತಾಲೂಕಿನಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಇಂದು ಶನಿವಾರ ದಿನಾಂಕ 1-11-2025 ರಂದು ಅದ್ದೂರಿಯಾಗಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದಲ್ಲಿ ನಡೆದ ಆಕರ್ಷಕ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಶಾಲೆ. ಕಾಲೇಜುಗಳ ವಿದ್ಯಾರ್ಥಿಗಳು ಇತರರು ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿವಿಧ ವೇಷ ಭೂಷಣಗಳು ರೂಪಕಗಳೊಂದಿಗೆ ಪಾಲ್ಗೊಂಡ ವಿದ್ಯಾರ್ಥಿಗಳು ತಾಲೂಕಿನಲ್ಲಿ 70ನೇ ಕನ್ನಡ ರಾಜ್ಯೋತ್ಸವದ ವೈಭವವನ್ನು ಹೆಚ್ಚಿಸಿದ್ದವು, ವಿದ್ಯಾರ್ಥಿಗಳ ಕನ್ನಡದ ರಾಜ್ಯೋತ್ಸವಕ್ಕಾಗಿ ತೊಟ್ಟಿರುವ ವೇಷ ಭೂಷಣಗಳು ನೆರೆದಿದ್ದ ಜನರನ್ನು ಮಂತ್ರ ಮುಗ್ಧರನ್ನಾಗಿಸಿ ಮಾಡಿತು. ಈ ಮೆರವಣಿಗೆ 2025ನೇ ಸಾಲಿನಲ್ಲಿ ಅತ್ಯಂತ ಸುಂದರವಾಗಿ ತಾಲೂಕಿನ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಶನಿವಾರ ಬೆಳಗ್ಗೆ 8 ಗಂಟೆಗೆ ಅಂಕೋಲಾದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ತಾಲೂಕು ದಂಡಾಧಿಕಾರಿಗಳಾದ ಡಾ ಚಿಕಪ್ಪ ನಾಯಕ ಹಾಗೂ ಅಂಕೋಲಾ ಪುರಸಭೆಯ ಅಧ್ಯಕ್ಷರು ಸದಸ್ಯರು. ಸಾಹಿತಿಗಳು. ಶಿಕ್ಷಣ ಇಲಾಖೆ. ತಾಲೂಕು ಪಂಚಾಯಿತಿ ಅಧಿಕಾರಿಗಳು ಮತ್ತಿತರ ಪ್ರಮುಖ ಇಲಾಖೆಯ ಗಣ್ಯರು ಹಾಜರಿದ್ದರು.

ತಾಲೂಕು ದಂಡಾಧಿಕಾರಿ ಡಾ. ಚಿಕ್ಕಪ್ಪ ನಾಯಕರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ನನ್ನ ಕನ್ನಡ ನುಡಿ ಶ್ರೀಗಂಧದಂತಿದೆ. ಸಹ್ಯಾದ್ರಿಯೊಂದು ಕಡೆ, ಕಡಲೊಂದು ಕಡೆ, ನಡು ಮಧ್ಯ ಅಡಿಕೆ-ತೆಂಗಿನ ಮಡಿಲು — ಇಂತಹ ಸಿರಿಯ ನಾಡಿನಲ್ಲಿ ಹುಟ್ಟಿರುವ ನಾವು ಅದೃಷ್ಟವಂತರು. ಅಂಕೋಲೆಯ ನಾಡು ದಿನಕರ ದೇಸಾಯಿ ಅವರಂತಹ ಕವಿ ಸಾಹಿತಿಗಳನ್ನು ನೀಡಿದೆ. ಇಂದಿನ ಮಕ್ಕಳ ಉತ್ಸಾಹ ನೋಡಿ ಕನ್ನಡದ ಭವಿಷ್ಯ ಬಲವಾಗಿದೆ,” ಎಂದು ಹೇಳಿದರು. ಕರ್ನಾಟಕ ಏಕೀಕರಣ ಚಳುವಳಿಯ ಸಮಯದಲ್ಲಿ ಆಲೂರು ವೆಂಕಟರಾಯರು, ಕೆಂಗಲ್ ಹನುಮಂತಯ್ಯರು, ನಿಜಲಿಂಗಪ್ಪರು ಹೀಗೆ ಅನೇಕ ಮಹನೀಯರು ಹೋರಾಟದ ಮೂಲಕ ಕರ್ನಾಟಕವನ್ನು ಒಂದೆಡೆ ತಂದಿದ್ದಾರೆಂದು ಸ್ಮರಿಸಿದ ಅವರು, “ಅವರ ತ್ಯಾಗದಿಂದಲೇ ನಾವು ಇಂದು ಒಂದೇ ಕರ್ನಾಟಕದಲ್ಲಿ ಬದುಕುತ್ತಿದ್ದೇವೆ. ಎಲ್ಲಾದರೂ ಇರು, ಎಂತಾದರೂ ಇರು — ಕನ್ನಡದವರಾಗಿರು,” ಎಂದು ಕರೆ ನೀಡಿದರು.

ಮೆರವಣಿಗೆಯಲ್ಲಿ ಹುಲಿವೇಷ. ಬೇಡರ ವೇಷ, ಡೋಲು ವಾದ್ಯ, ಅನುಭವ ಮಂಟಪ. ಸಾಲುಮರದ ತಿಮ್ಮಕ್ಕ. ತುಳಸಿ ಗೌಡ ಸ್ತಬ್ಧ ಚಿತ್ರ., ಅಕ್ಕಮಹಾದೇವಿ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ, ಭುವನೇಶ್ವರಿ ದೇವಿಯ ವೇಷಭೂಷಣ, ಅಕ್ಕಮಹಾದೇವಿ, ಕುಂಭಮೇಳ. ಡೊಳ್ಳು ಕುಣಿತ. ವಿವಿಧ ಸಂದೇಶ ಸಾರುವ ಬೊಂಬೆ ಕಲಾಕೃತಿ ಇನ್ನಿತರ ಹತ್ತು ಹಲವು ವಿದ್ಯಾರ್ಥಿಗಳ ವೇಷ ಭೂಷಣ. ರೂಪಕಗಳು ಎಲ್ಲರ ಗಮನ ಸೆಳೆಯಿತು.

ಬಹುಮಾನ ವಿತರಣೆ: ಇಂದು ನಡೆದ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಆಕರ್ಷಕವಾಗಿ ವೇಷ ಭೂಷಣ ಧರಿಸಿದ ಶಿಸ್ತುಬದ್ಧವಾಗಿ ಮೆರವಣಿಗೆ ಸಾಗಿದ ಪ್ರೌಢಶಾಲೆ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು.

ಪ್ರೌಢಶಾಲಾ ವಿಭಾಗದಲ್ಲಿ : ಜೈಹಿಂದ್ ಹೈ ಸ್ಕೂಲ್ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಥಮ ಸ್ಥಾನ ಗಳಿಸಿದರೆ, ಪಿ ಎಮ್ ಹೈಸ್ಕೂಲ್ ಅಂಕೋಲಾ ಕನ್ನಡ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಸ್ಥಾನವನ್ನು ಪಡೆಯಿತು. ಪಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆ ತ್ರತೀಯ ಸ್ಥಾನವನ್ನು ಪಡೆಯಿತು ಹಾಗೂ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸ್ಥಾನ ದಿನಕರ ದೇಸಾಯಿ ಪ್ರಾಥಮಿಕ ಶಾಲೆ ಅಂಕೋಲ ಪಡೆದುಕೊಂಡರೆ. ದ್ವಿತೀಯ ಸ್ಥಾನವನ್ನು ಹಿಮಾಲಯ ಕಿರಿಯ ಪ್ರಾಥಮಿಕ ಶಾಲೆ ಅಂಕೋಲ.ಹಾಗೂ ತೃತೀಯ ಸ್ಥಾನವನ್ನು ಸರ್ಕಾರಿ ಹಿರಿಯ ಉರ್ದು. ಪ್ರಾಥಮಿಕ ಶಾಲೆ ಸ್ಥಾನವನ್ನು ಪಡೆದ ಶಾಲೆಗಳಿಗೆ ಬಹುಮಾನವನ್ನು ನೀಡಲಾಯಿತು.

ಬಿಸಿಲಿನ ಬೇಗೆಯಿಂದ ಬಳಲಿದ ಮಕ್ಕಳಿಗೆ ಸಿಹಿ ತಿಂಡಿಯನ್ನು ಕಂದಾಯ ಇಲಾಖೆಯ ಸಿಬ್ಬಂದಿಗಳು ವಿತರಿಸಿದರು. ಪುರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಂಚಾರ ವನ್ನು ಅತ್ಯಂತ ಸುಗಮವಾಗಿ ನಡೆಸಿದರು.ಯಾವುದೇ ಅಹಿತಕರ ಘಟನೆ ಯಾಗದಂತೆ ತಾಲೂಕಿನಲ್ಲಿ ಪೋಲಿಸ್ ಇಲಾಖೆ ಬಿಗಿ ಬಂದೋಬಸ್ತ ಮಾಡಲಾಗಿತ್ತು.

ಇಂದಿನ ಮೆರವಣಿಗೆಯಲ್ಲಿ ಪುರಸಭೆಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ,ವಿವಿಧ ಇಲಾಖೆ ಗಣ್ಯರು, ತಾಲೂಕು ಪಂಚಾಯತ, ಗ್ರಾಮ ಪಂಚಾಯಿತಿ ಅಧಿಕಾರಿವರ್ಗ, ಸಾಹಿತಿಗಳು, ಸಮಾಜ ಸೇವಕರು, ಇನ್ನು ಸಾಕಷ್ಟು ಜನರು ಇವತ್ತಿನ ಕಾರ್ಯಕ್ರಮದಲ್ಲಿ ಹಾಜರಿದ್ದು. ಕನ್ನಡ ರಾಜ್ಯೋತ್ಸವವು ಅಂಕೋಲ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯಿತು…

Share This Article