ಅಂಕೋಲಾ ಜುಲೈ 31, 2025: ಅಂಕೋಲಾ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಶ್ಯಾಮಲಾ ವೆಂಕಣ್ಣ ನಾಯಕ ಅವರ ನಿವೃತ್ತಿ ಸಮಾರಂಭವು ಜುಲೈ 31ರಂದು ತಹಶೀಲ್ದಾರ್ ಕಚೇರಿಯಲ್ಲಿ ಸರಳವಾಗಿ ಭಾವನಾತ್ಮಕವಾಗಿ ನಡೆಯಿತು.
1995ರಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಸರ್ಕಾರಿ ಸೇವೆಗೆ ಕಾಲಿಟ್ಟ ಶ್ಯಾಮಲಾ ನಾಯಕ್ ಅವರು, 2015ರಲ್ಲಿ ಪ್ರಥಮ ದರ್ಜೆ ಸಹಾಯಕಿ ಯಾಗಿ ಪದನ್ನೊತಿಹೊಂದಿ, ನಂತರ ಶಿರಸ್ತೇದಾರರಾಗಿ ಅಂಕೋಲಾ ತಾಲೂಕಿನಲ್ಲಿ ಸೇವೆ ಸಲ್ಲಿಸಿದರು. ಅವರು ಮೂರು ವರ್ಷ ಕಾಲ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಎರಡು ವರ್ಷ ಕುಮಟಾ ತಹಶೀಲ್ದಾರ್ ಕಚೇರಿಯಲ್ಲಿ ಹಾಗೂ ಬಹುಮಾನ್ಯ ಕಾಲ ಅಂಕೋಲಾ ಕಚೇರಿಯಲ್ಲಿಯೇ ಸೇವೆ ಸಲ್ಲಿಸಿ, ನಿಷ್ಕಳಂಕವಾಗಿ ನಿವೃತ್ತರಾದರು.

ಸ್ವಚ್ಛ ಹಾಗೂ ಸಮರ್ಪಿತ ಸೇವೆಯ ದೃಷ್ಠಿಯಿಂದ, ಅವರ ಮೇಲೆ ಯಾವುದೇ ಸಾರ್ವಜನಿಕರ ದೂರಿಲ್ಲದಂತೆಯೂ, ಯಾವುದೇ ವಿಚಾರಣೆಗೆ ಒಳಪಟ್ಟಿಲ್ಲದಂತೆಯೂ, ನಿರಂತರ ಶಿಸ್ತಿನ ಕೆಲಸದಿಂದ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಶ್ರೀಮತಿ ಶ್ಯಾಮಲಾ ನಾಯಕ್ ಅವರು ತಮ್ಮ ಭಾವನಾತ್ಮಕ ಪ್ರತಿಕ್ರಿಯೆಯಲ್ಲಿ ಹೇಳಿದರು: “ನಾನೇನೂ ಅಪರೂಪದ ಕೆಲಸ ಮಾಡಿಲ್ಲ; ನಾನು ಮಾಡಿದ್ದು ಕರ್ತವ್ಯ. ಆದರೆ, ಸೇವಾ ಅವಧಿಯಲ್ಲಿ ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡಿದ ತೃಪ್ತಿ ನನಗಿದೆ.”
ಮಾಹಿತಿ ಹಕ್ಕು ಕಾರ್ಯಕರ್ತ ಗಜಾನನ ಶೆಟ್ಟಿ ಅಲಗೇರಿ ಮಾತನಾಡಿ ಹೇಳಿದರು: “ಶ್ಯಾಮಲಾ ನಾಯಕ್ ಅವರು ಬಹಳ ಸರಳ ಸ್ವಭಾವದ, ಸತ್ಯಸಂಧ ಹಾಗೂ ನಿಷ್ಠಾವಂತ ಅಧಿಕಾರಿ. ಸಾರ್ವಜನಿಕರು ಅವರ ಬಳಿ ಯಾವುದೇ ಕೆಲಸಕ್ಕಾಗಿ ಹೋದಾಗ, ವಿಳಂಬ ಮಾಡುತ್ತಿರುವ ಎನ್ನುವುದಾಗಿರಲಿಲ್ಲ. ಕಡತಗಳನ್ನು ತಕ್ಷಣ ಪರಿಶೀಲಿಸಿ, ಸಮಯಮಿತಿಯಲ್ಲಿ ವಿಲೇವಾರಿ ಮಾಡುವದೇ ಅವರ ಕೆಲಸದ ಶೈಲಿ. ಅವರು ಯಾವುದೇ ರಾಜಕೀಯ ಒತ್ತಡ ಅಥವಾ ಪಾರದರ್ಶಕತೆಯ ಕೊರತೆಯಿಲ್ಲದೆ, ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದರು. ಇಂತಹ ಅಧಿಕಾರಿಗಳು ಇಂದಿನ ಕಾಲದಲ್ಲಿ ಅಪರೂಪ – ಅವರು ಜನಪರ ಆಡಳಿತಕ್ಕೆ ಒಂದು ಆದರ್ಶ ಮಾದರಿಯಾಗಿದ್ದರು.”

ಈ ಸಮಾರಂಭದಲ್ಲಿ ಅಂಕೋಲಾ ನೂತನ ತಹಶೀಲ್ದಾರ ಡಾ. ಚಿಕ್ಕಪ್ಪ ನಾಯಕ್, ಉಪ ತಹಶೀಲ್ದಾರ ಗಿರೀಶ ಜಾಂಬವಳೇಕರ್, ತಾಲೂಕು ದಂಡಾಧಿಕಾರಿಗಳ ಕಚೇರಿಯ ಎಲ್ಲ ಹಿರಿಯ ಕಿರಿಯ ನೌಕರರು, ಹಾಗೂ ಅಂಕೋಲಾ ತಾಲೂಕಿನ ಖ್ಯಾತ ವಕೀಲರಾದ ನಾಗಾನಂದ ಬಂಟ, ಉಮೇಶ್ ನಾಯ್ಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಭಾಗವಾಗಿ, ಶ್ಯಾಮಲಾ ನಾಯಕ್ ಅವರಿಗೆ ಶಾಲು ಹೊದಿಸಿ, ಹಣ್ಣು-ಹಂಪಲು, ಸ್ಮರಣಿಕೆ ಹಾಗೂ ಹೂಗುಚ್ಛ ನೀಡಿ ನಮನ ಸಲ್ಲಿಸಲಾಯಿತು. ಹೃದಯ ಪೂರ್ವಕವಾಗಿ ನಿವೃತ್ತಿ ಜೀವನಕ್ಕೆ ಶುಭಕೋರಲಾಯಿತು.
ವರದಿ: ಕಿರಣ ಚಂದ್ರಹಾಸ ಗಾಂವಕರ್

