ಅಂಕೋಲಾ ತಾಲೂಕು ಸರ್ವೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ನೇಹಾ ಆನಂದ ನಾಯ್ಕ.ಅವರು ತಮ್ಮ ಶ್ರಮ, ತಾಳ್ಮೆ ಮತ್ತು ನಿಷ್ಠೆಯಿಂದ ಎಲ್ಲರ ಮನ ಗೆದ್ದಿದ್ದಾರೆ. ಅವರು ತಮ್ಮ ವೃತ್ತಿಜೀವನವನ್ನು ಧಾರವಾಡದಲ್ಲಿ ಪ್ರಾರಂಭಿಸಿ ಅಲ್ಲಿಗೆ ಐದು ವರ್ಷಗಳ ಸೇವೆಯ ಬಳಿಕ, ಕಳೆದ ಎರಡು ವರ್ಷಗಳಿಂದ ಅಂಕೋಲಾ ಸರ್ವೆ ಕಚೇರಿಯಲ್ಲಿ ಭೂಮಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸರ್ವೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಕಡತ ನೀಡುವ ಅಭಿಲೇಖಾಲಯದ ಹೊಣೆಗಾರಿಕೆಯನ್ನು ಸಹ ಅವರು ತಮ್ಮ ಮೇಲೆ ಹೊತ್ತುಕೊಂಡಿದ್ದಾರೆ. ಲಕ್ಷಾಂತರ ದಾಖಲೆಗಳನ್ನು ಹೊಂದಿರುವ ಕಚೇರಿಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಕಡತಗಳು ನೆಲದ ಮೇಲೆ ಇಡಲಾಗುತ್ತಿದ್ದು, ತೇವಾಂಶದಿಂದ ಅವು ಹಾಳಾಗುವ ಸಾಧ್ಯತೆಯಿತ್ತು.

ಸರ್ಕಾರದ ಅನುದಾನ ಯಾವಾಗ ಲಭ್ಯವಾಗುತ್ತದೆ ಎಂಬುದೇ ಗೊತ್ತಿಲ್ಲದ ಸಂದರ್ಭದಲ್ಲೂ, ಸ್ನೇಹಾ ನಾಯ್ಕ ಅವರು ತಮ್ಮ ಒಂದು ತಿಂಗಳ ವೇತನದಲ್ಲಿ ₹30,000 ಖರ್ಚು ಮಾಡಿ ಕಬ್ಬಿಣದ ರ್ಯಾಕ್‌ಗಳನ್ನು ಖರೀದಿಸಿ ದಾಖಲಾತಿಗಳ ಶಿಸ್ತಿನ ವ್ಯವಸ್ಥೆ ನಿರ್ಮಿಸಿದ್ದಾರೆ.
ಈ ಮಾಹಿತಿಯನ್ನು ಬಾಂಧ ಸೇವೆಯ ವಿನಾಯಕ್ ಆಗೇರ್ ಅವರು ಬಹಿರಂಗ ಪಡಿಸಿದ್ದು, ಈ ಕೆಲಸ ಅವರು ಯಾರಿಗೂ ತಿಳಿಯದಂತೆ ಮಾಡಿದ್ದರು ಎಂಬುದೇ ಅವರ ನಿಷ್ಠೆಯ ಸಾಕ್ಷಿ. ಸ್ನೇಹಾ ನಾಯ್ಕ ಎತ್ತರದಲ್ಲಿ ಹೆಚ್ಚಾಗಿ ಕಾಣಿಸದವ ರಾಗಿದ್ದರೂ, ಅವರು ತಮ್ಮ ನಗುಮುಖದ ಸ್ಪಂದನೆ, ತಾಳ್ಮೆ, ಹಾಗೂ ಪ್ರಾಮಾಣಿಕ ಕಾರ್ಯದ ಮೂಲಕ ಸಾರ್ವಜನಿಕರ ನೆಚ್ಚಿನ ಸಹೋದರಿಯಾಗಿ ರೂಪುಗೊಂಡಿದ್ದಾರೆ.
ಅವರು ಸದಾ “ಅಣ್ಣ, ದಾಖಲೆಗಳನ್ನು ಹುಡುಕಿ ಕೊಡುತ್ತೀನಿ, ಸ್ವಲ್ಪ ಕಾಯಿರಿ” ಎಂಬ ಸೌಮ್ಯ ಧಾಟಿಯಲ್ಲಿ ಮಾತನಾಡುತ್ತಾ, ಕುಗ್ಗದ ಶ್ರದ್ಧೆ ಮತ್ತು ಶಕ್ತಿಯಿಂದ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ದೊಡ್ಡ ಧ್ವನಿಯಲ್ಲಿ ಯಾವುದೇ ಸಾರ್ವಜನಿಕರು ಬೇಡಿಕೆ ಇಟ್ಟರೂ ಸಹ ಅವರು ತಾಳ್ಮೆಯಿಂದ ಸ್ಪಂದಿಸುತ್ತಾರೆ.ಅವರ ಈ ನಿಷ್ಠೆಯ ಸೇವೆಗೆ ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರು ಕಾರವಾರ, ಸಹಾಯಕ ನಿರ್ದೇಶಕರು ಅಂಕೋಲಾ, ಸೂಪರ್ವೈಸರ್ ರೋಷನ್ ಕೇಣಿ ಹಾಗೂ ಕಚೇರಿಯ ಹಿರಿಯ-ಕಿರಿಯ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಧ್ಯಮ ಕುಟುಂಬದ ಹಿನ್ನಲೆಯಲ್ಲಿ ಬೆಳೆದ ಸ್ನೇಹಾ ನಾಯ್ಕ, ಸರ್ಕಾರದ ಅನುದಾನವಿಲ್ಲದ ಸಂದರ್ಭದಲ್ಲೂ ತಮ್ಮ ಕರ್ತವ್ಯನಿಷ್ಠೆ ತೋರಿ ಇತರ ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದಾರೆ.
ಇವಳ ದುಡಿಮೆ ಮತ್ತು ನಿಷ್ಠೆ ರಾಜ್ಯಕ್ಕೆ ಹೆಮ್ಮೆತರುವ ಸಂಗತಿ. ಹೀಗಾಗಿ, ಕರ್ನಾಟಕ ಸರ್ಕಾರ ಇವಳ ಸೇವೆಯನ್ನು ಗುರುತಿಸಿ “ಅತ್ಯುತ್ತಮ ಸೇವಾ ಪ್ರಶಸ್ತಿ” ನೀಡಿ ಸನ್ಮಾನಿಸಬೇಕು ಎಂಬುದು ಸಾರ್ವಜನಿಕರ ಹಾಗೂ ಸಹೋದ್ಯೋಗಿಗಳ ಏಕಮತ ಅಭಿಪ್ರಾಯವಾಗಿದೆ..
ವರದಿ: ಕಿರಣ ಚಂದ್ರಹಾಸ ಗಾಂವಕರ

