ಪುರಲಕ್ಕಿಬೇಣದಲ್ಲಿ ಮಳೆಯ ಅಬ್ಬರ; ಮನೆಯ ಮೇಲೆ ಮುರಿದು ಬಿತ್ತು ಜೀವದಾತ ಮರ..!!

News Desk
2 Min Read

ಪ್ರಕೃತಿಯ ಮುನಿಸಿಗೆ ಎಂತಹ ಬಲಿಷ್ಠ ಜೀವವೂ ತಲೆಬಾಗಲೇಬೇಕು ಎಂಬುದಕ್ಕೆ ಅಂಕೋಲಾ ತಾಲೂಕಿನ ಪುರಲಕ್ಕಿ ಬೇಣದ ಆನಂದಗಿರಿ ಸಾಕ್ಷಿಯಾಗಿದೆ. ಭಾರಿ ಮಳೆ ಮತ್ತು ಬಿರುಗಾಳಿಯ ಅಬ್ಬರಕ್ಕೆ ದಶಕಗಳಿಂದ ಫಲ ನೀಡುತ್ತಾ ಬಂದಿದ್ದ ಬೃಹತ್ ತೆಂಗಿನ ಮರವೊಂದು ಮನೆಯ ಮೇಲೆ ಉರುಳಿದೆ. ಈ ಘಟನೆಯ ನಡುವೆಯೂ ಮನೆಯೊಳಗಿದ್ದ ಕಂದಮ್ಮನೊಂದು ಪವಾಡಸದೃಶ ರೀತಿಯಲ್ಲಿ ಪಾರಾಗಿದೆ.

ಪುರಲಕ್ಕಿ ಬೇಣದ ದಿವಂಗತ ಡೋಲು ನಾಯ್ಕ ರವರ ಜಾಗದಲ್ಲಿ ಹೆಮ್ಮರಾವಾಗಿ ಬೆಳೆದು ನಿಂತಿದ್ದ ತೆಂಗಿನ ಮರವು, ಗಾಳಿಯ ರಭಸಕ್ಕೆ ತಾಳಲಾರದೆ ಪಕ್ಕದಲ್ಲೇ ಇದ್ದ ವಿನಾಯಕ ಆಚಾರಿ ಅವರ ಮನೆಯ ಛಾವಣಿಯ ಮೇಲೆ ದಿಢೀರನೆ ಬುಡ ಸಮೇತ ಮುರಿದು ಬಿದ್ದಿದೆ. ಈ ಘಟನೆಯಿಂದ ಅವರ ಮನೆ ಹಾನಿಯಾದ ಆತಂಕ ಒಂದೆಡೆಯಾದರೆ, ಘಟನೆಯ ವೇಳೆ ಮನೆಯೊಳಗಿದ್ದ ಕಂದಮ್ಮನೊಂದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು ಎಲ್ಲರ ನಿಟ್ಟುಸಿರಿಗೆ ಕಾರಣವಾಗಿದೆ.

ಇನ್ನೊಂದೆಡೆ, ದಿವಂಗತ ಡೋಲು ನಾಯ್ಕ ಅವರ ಕುಟುಂಬಕ್ಕೆ ವರ್ಷಾನುಗಟ್ಟಲೆ ಆದಾಯದ ಮೂಲವಾಗಿ, ಇಳುವರಿ ನೀಡುತ್ತಿದ್ದ ಮೂಕಜೀವದಂತಹ ತೆಂಗಿನ ಮರವು ಅಸುನೀಗಿದ್ದು, ನೋಡುಗರ ಕರುಳು ಹಿಂಡುವಂತಿತ್ತು.

ಸ್ಥಳಕ್ಕೆ ಅಧಿಕಾರಿಗಳ ಭೇಟಿ – ಪರಿಹಾರದ ಭರವಸೆ: ಘಟನೆಯ ಭೀಕರತೆಯ ಮಾಹಿತಿ ಲಭ್ಯವಾದ ತಕ್ಷಣವೇ ಕಂದಾಯ ಇಲಾಖೆಯ ವಿಲೇಜ್ ಅಕೌಂಟೆಂಟ್ (ಗ್ರಾಮ ಆಡಳಿತಾಧಿಕಾರಿ) ಹೇಮಂತ್ ಕುಮಾರ್ ಹಾಗೂ ಗ್ರಾಮ ಸಹಾಯಕ ಅಶೋಕ್ ನಾಯ್ಕ ಅವರು ಸ್ಥಳಕ್ಕೆ ತ್ವರಿತವಾಗಿ ದೌಡಾಯಿಸಿ, ಹಾನಿಯ ಪ್ರಮಾಣವನ್ನು ಪರಿಶೀಲಿಸಿದರು. ಆತಂಕದಲ್ಲಿದ್ದ ಕುಟುಂಬಕ್ಕೆ ಸಾಂತ್ವನ ಹೇಳಿದ ಅಧಿಕಾರಿಗಳು, ನಿಯಮಾನುಸಾರ ಸ್ಥಳ ಮಹಜರು ನಡೆಸಿ ಮನೆ ಹಾನಿಗೆ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಜೊತೆಗೆ, ಮರ ಕಳೆದುಕೊಂಡ ಡೋಲು ನಾಯ್ಕ ಅವರ ಕುಟುಂಬಕ್ಕೂ ‘ತೋಟಗಾರಿಕಾ ಇಲಾಖೆ’ಯ ವತಿಯಿಂದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

ವಿಪತ್ತು ನಿರ್ವಹಣೆ ಕಾಯ್ದೆ-2005 ರ ಅಡಿ ಶಾಸನಬದ್ಧ ಪರಿಹಾರ:

ರಾಜ್ಯದಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ವಿತರಣೆಗಾಗಿ ‘ವಿಪತ್ತು ನಿರ್ವಹಣೆ ಕಾಯ್ದೆ-2005’ ಅಡಿಯಲ್ಲಿ ಸ್ಪಷ್ಟವಾದ ಕಾನೂನಾತ್ಮಕ ಅವಕಾಶಗಳಿವೆ. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ಸ್ಪಂದನಾ ನಿಧಿಯ ಮಾರ್ಗಸೂಚಿಗಳ ಅನ್ವಯ, ವಸತಿ ಹಾನಿಗೊಳಗಾದ ಸಂತ್ರಸ್ತರಿಗೆ ಕಂದಾಯ ಇಲಾಖೆಯಿಂದ ಹಾಗೂ ಮರಗಳ ಹಾನಿಗೆ ತೋಟಗಾರಿಕಾ ಇಲಾಖೆಯಿಂದ ಆರ್ಥಿಕ ಪರಿಹಾರ ಒದಗಿಸುವುದು ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ.

ಅಧಿಕಾರಿಗಳ ಈ ತ್ವರಿತ ಹಾಗೂ ಮಾನವೀಯ ಸ್ಪಂದನೆಯಿಂದಾಗಿ ಆತಂಕದಲ್ಲಿದ್ದ ಎರಡೂ ಕುಟುಂಬಗಳಿಗೆ ಕಾನೂನಾತ್ಮಕ ಪರಿಹಾರ ದೊರೆಯುವ ನಿರೀಕ್ಷೆ ಹುಟ್ಟಿಸಿದೆ. ಕಂದಾಯ ಇಲಾಖೆಯ ಈ ಜನಪರ ಕಾರ್ಯವೈಖರಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

Share This Article