ಅಂಕೋಲಾ ಉಪನೋಂದಣಾಧಿಕಾರಿ ಕಛೇರಿ ಸ್ಥಳಾಂತರ ವಿಳಂಬ: ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ ವಕೀಲ ‘ಉಮೇಶ ನಾಯ್ಕ’..

News Desk
1 Min Read

ಅಂಕೋಲಾ ತಾಲೂಕಿನ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಛೇರಿಯು ಹಳೆಯ ಪುರಸಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಈ ಕಟ್ಟಡವು ಸೋರುತ್ತಿದ್ದು, ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಆಗಾಗ್ಗೆ ವಿದ್ಯುತ್ ಕಡಿತಗೊಳ್ಳುವುದರಿಂದ ಕತ್ತಲೆಯಲ್ಲಿ ಕೆಲಸಕಾರ್ಯಗಳಿಗೆ ಪರದಾಡುವಂತಾಗಿದೆ. ಅಲ್ಲದೆ, ಕಛೇರಿಯನ್ನು ತಲುಪಲು ಸುಮಾರು 26 ಮೆಟ್ಟಿಲುಗಳನ್ನು ಹತ್ತಬೇಕಾಗಿರುವುದರಿಂದ ವಿಕಲಚೇತನರು ಹಾಗೂ ವಯೋವೃದ್ಧರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಜೊತೆಗೆ ಕಛೇರಿಗೆ ಮೇಲಾಧಿಕಾರಿಗಳು ಬೆಳಿಗ್ಗೆ 11 ಗಂಟೆಯ ನಂತರವೇ ಆಗಮಿಸುವುದರಿಂದ, ಕಛೇರಿ ಕೆಲಸಕ್ಕಾಗಿ ಬರುವ ಸಾರ್ವಜನಿಕರು ಕಾದು ಸುಸ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿನಲ್ಲಿ ಉಲ್ಲೆಖಿಸಿದ್ದಾರೆ.

ಸಾರ್ವಜನಿಕರ ಈ ಸಮಸ್ಯೆಗಳನ್ನು ಮನಗಂಡು, ಕಾರವಾರದ ಅಪರ ಜಿಲ್ಲಾಧಿಕಾರಿಗಳು ದಿನಾಂಕ 07-02-2026 ರಂದು ಆದೇಶ ಹೊರಡಿಸಿದ್ದರು ಮತ್ತು 13-03-2026 ರ ಒಳಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಜೊತೆಗೆ ಹೊಸ ಕಟ್ಟಡದಲ್ಲಿ ಯುಪಿಎಸ್ ಮತ್ತು ಬ್ಯಾಟರಿ ವ್ಯವಸ್ಥೆ, ಸಾರ್ವಜನಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಅಗ್ನಿ ಭದ್ರತಾ ಕ್ರಮಗಳು ಹಾಗೂ ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆಯೂ ನಿರ್ದೇಶನ ನೀಡಲಾಗಿತ್ತು.

ಆದರೆ, ಅಪರ ಜಿಲ್ಲಾಧಿಕಾರಿಗಳ ಆದೇಶ ಹೊರಬಿದ್ದು 4 ತಿಂಗಳು ಕಳೆದರೂ ಕಛೇರಿಯನ್ನು ಸ್ಥಳಾಂತರಿಸಿಲ್ಲ ಮತ್ತು ತಹಶೀಲ್ದಾರ್ ಕಛೇರಿಯ ಹೊಸ ಕಟ್ಟಡದಲ್ಲಿ ಯಾವುದೇ ಸೌಲಭ್ಯಗಳನ್ನು ಸಹ ಈವರೆಗೆ ಒದಗಿಸಿಲ್ಲ ಎಂಬುದು ಕಂಡುಬಂದಿದೆ.

ಈ ಕುರಿತು ಅಂಕೋಲಾದ ವಕೀಲರಾದ ಶ್ರೀ ಉಮೇಶ ಎನ್. ನಾಯ್ಕ ಅವರು ದಿನಾಂಕ 25-07-2026 ರಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಅಧಿಕೃತ ದೂರು ನೀಡಿದ್ದಾರೆ. ಅಪರ ಜಿಲ್ಲಾಧಿಕಾರಿಗಳ ಆದೇಶವನ್ನು ನಿರ್ಲಕ್ಷಿಸಿದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಅತಿ ಶೀಘ್ರದಲ್ಲಿ ಕಛೇರಿಯನ್ನು ತಹಸೀಲ್ದಾರ್ ಕಛೇರಿಗೆ ಸ್ಥಳಾಂತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

Share This Article