ಅಂಕೋಲಾ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಪತ್ರಿಕಾ ದಿನಾಚರಣೆ: ಸಮಾಜದಲ್ಲಿ ಆಗುವ ಅನೇಕ ತಪ್ಪುಗಳನ್ನು ತಿದ್ದುವಲ್ಲಿ ಪತ್ರ ಕರ್ತರ ಪಾತ್ರ ಪ್ರಮುಖವಾಗಿದೆ- ಗಿರೀಶ್ ನಾಯಕ..

News Desk
2 Min Read

ಅಂಕೋಲಾ: ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಎತ್ತಿತೋರಿಸುವ ಜೊತೆಗೆ ಉತ್ತಮ ಕೆಲಸಗಳನ್ನು ಬೆಳಕಿಗೆ ತಂದು ಪ್ರೋತ್ಸಾಹ ನೀಡುವ ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ ಪ್ರತಿದಿನ ಹಲವಾರು ಸವಾಲುಗಳನ್ನು ಎದುರಿಸಿ ವರದಿಗಳನ್ನು ಮಾಡುವ ಪತ್ರಕರ್ತರ ಕೆಲಸ ಸುಲಭವಲ್ಲ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಗಿರೀಶ ನಾಯಕ ಹೇಳಿದರು.

ಕಾರ್ಯನಿರತ ಪತ್ರಕರ್ತರ ಧ್ವನಿ ಅಂಕೋಲಾ ಇವರ ವತಿಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪತ್ರಿಕಾ ವರದಿಗಳು ಸಮಾಜದಲ್ಲಿ ಅಸಹಾಯಕರಿಗೆ ಸಹಾಯ ಹಸ್ತ ದೊರಕುವಲ್ಲಿ, ಸೌಲಭ್ಯ ವಂಚಿತರಿಗೆ ಸೌಲಭ್ಯಗಳನ್ನು ಒದಗಿಸಲು ಅನುಕೂಲ ಆಗುತ್ತಿರುವುದು ಉತ್ತಮ ವಿಚಾರ ಎಂದರು.ಸರ್ಕಾರದ ಸೌಲಭ್ಯಗಳು, ಯೋಜನೆಗಳ ಕುರಿತಂತೆ ಸಮಾಜದ ಕಟ್ಟಕಡೆಯ ವ್ಯಕ್ತಿ ಸಹ ಪತ್ರಿಕೆಗಳ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ ಎಂದ ಅವರು ಅಂಕೋಲಾ ತಾಲೂಕಿನಲ್ಲಿ ಪತ್ರಕರ್ತರು ನಿಷ್ಪಕ್ಷಪಾತ ವರದಿಗಾರಿಕೆಯ ಮೂಲಕ ಗುರುತಿಸಿಕೊಂಡಿದ್ದಾರೆ ಎಂದರು.

ಹೆಣ್ಣು ಮಕ್ಕಳ ಕಾಳಜಿಯಲ್ಲಿ ಮಾಧ್ಯಮಗಳ ಪಾತ್ರ ವಿಷಯದ ಕುರಿತಂತೆ ಉಪನ್ಯಾಸ ನೀಡಿದ ಕಾರ್ಯನಿರತ ಪತ್ರಕರ್ತರ ಧ್ವನಿ ಅಂಕೋಲಾ ತಾಲೂಕು ಘಟಕದ ಅಧ್ಯಕ್ಷ ಮಾರುತಿ ಹರಿಕಂತ್ರ ಮಾತನಾಡಿ ಪತ್ರಿಕೆಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣ,ಆರೋಗ್ಯ, ಕಾನೂನು ಸಲಹೆಗಳು ಸೇರಿದಂತೆಹಲವಾರು ವಿಷಯಗಳ ಕುರಿತಂತೆ ವಿಶೇಷ ಅಂಕಣಗಳು,ತಜ್ಞರ ಸಲಹೆ ನಿಯಮಿತವಾಗಿ ಪ್ರಕಟವಾಗುತ್ತವೆ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವುದನ್ನು ರೂಡಿಸಿಕೊಳ್ಳಬೇಕು ಎಂದರು. ಹೆಣ್ಣುಮಕ್ಕಳ ಸುರಕ್ಷತೆಗೆ ಸಂವಿಧಾನ, ಭಾರತೀಯ ದಂಡ ಸಂಹಿತೆ,ಆರಕ್ಷಕ ಕಾಯ್ದೆಗಳ ಅಡಿಯಲ್ಲಿ ಅವಕಾಶಗಳಿದ್ದು ದೈಹಿಕ ಮಾನಸಿಕ ಕಿರುಕುಳಗಳ ವಿರುದ್ಧ ಪ್ರತಿಭಟಿಸುವ ಹಕ್ಕು ಹೆಣ್ಣುಮಕ್ಕಳಿಗಿವೆ ಎಂದು ಅವರು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ನಿಲಯ ಪಾಲಕ ಶಿವಾನಂದ ನಾಯ್ಕ ಮಾತನಾಡಿ ಸಮಾಜದಲ್ಲಿ ಪರಿವರ್ತನೆ ತರುವಂತ ಶಕ್ತಿ ಪತ್ರಕರ್ತರ ಲೇಖನಿಗಿದ್ದು ವಿದ್ಯಾರ್ಥಿ ಯುವಜನರು ಸಾಮಾಜಿಕ ಜಾಲತಾಣಗಳ ಒಲವನ್ನು ಕಡಿಮೆ ಮಾಡಿ ಪತ್ರಿಕೆಗಳನ್ನು ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು ಇಲಾಖೆಯ ಸುತ್ತೋಲೆಯಂತೆ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರತಿದಿನ ಓದಲು ಪತ್ರಿಕೆಗಳನ್ನು ನೀಡಲಾಗುತ್ತದೆ ಎಂದರು.

ಸನ್ಮಾನ ಸ್ವೀಕರಿಸಿದ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಮಾತನಾಡಿ ಪತ್ರಿಕೆಗಳಲ್ಲಿ ಸಿಗುವ ಜ್ಞಾನ ಭಂಡಾರ ಬೇರೆ ಎಲ್ಲೂ ಸಿಗಲು ಸಾಧ್ಯವಿಲ್ಲ ಇಂದು ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ,ವಿಶೇಷವಾಗಿ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದಲು ಗಮನ ಹರಿಸಬೇಕು ಎಂದರು

ವಿದ್ಯಾರ್ಥಿ ಸಾಗರ ಗೌಡ ವಿನಾಯಕ ಸ್ತೋತ್ರ ಹಾಡುವಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ಪತ್ರಕರ್ತ ವಿಲಾಸ ನಾಯಕ ಸ್ವಾಗತಿಸಿದರು, ನಾಗರಾಜ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು, ಕಿರಣ ಗಾಂವಕರ, ವಿದ್ಯಾಧರ ಮೊರಬಾ ಪರಿಚಯಿಸಿದರು, ಸುಪ್ರಿಯಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು, ನಾಗರಾಜ ರಾಯ್ಕರ ವಂದಿಸಿದರು.

Share This Article