ಅಪರಾಧ ತನಿಖೆಗೆ ವೈಜ್ಞಾನಿಕ ಸ್ಪರ್ಶ: ಉತ್ತರ ಕನ್ನಡ ಜಿಲ್ಲಾ ಪೊಲೀಸರ ‘ಸೊಕೊ’ ವಾಹನಕ್ಕೆ ಕಾರವಾರದಲ್ಲಿ ನ್ಯಾಯಾಧೀಶರಿಂದ ಚಾಲನೆ..

News Desk
1 Min Read

ಕಾರವಾರ: ಅಪರಾಧ ಕೃತ್ಯಗಳ ತ್ವರಿತ, ನಿಖರ ಹಾಗೂ ವೈಜ್ಞಾನಿಕ ತನಿಖೆಗೆ ನೆರವಾಗುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಗೆ ಹೊಸದಾಗಿ ಹಂಚಿಕೆಯಾಗಿರುವ ಅತ್ಯಾಧುನಿಕ ‘ಸೊಕೊ’ (SOCO – Scenes of Crime Officer) ಮೊಬೈಲ್ ಫೊರೆನ್ಸಿಕ್ ವಾಹನವನ್ನು ಇಂದು ಅಧಿಕೃತವಾಗಿ ಸೇವೆಗೆ ಮುಕ್ತಗೊಳಿಸಲಾಯಿತು. ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಪರಮೇಶ್ವರ ಪ್ರಸನ್ನ ಬಿ. ಅವರು ಈ ನೂತನ ವಾಹನಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ ಎನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ , ಅಧಿಕಾರಿಗಳು ಮತ್ತು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಈ ‘ಸೊಕೊ’ ಮೊಬೈಲ್ ಫೊರೆನ್ಸಿಕ್ ವಾಹನವು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಒಳಗೊಂಡಿದ್ದು, ಅಪರಾಧ ನಡೆದ ಸ್ಥಳದಲ್ಲಿಯೇ ಯಾವುದೇ ಸಾಕ್ಷ್ಯಾಧಾರಗಳು ನಾಶವಾಗದಂತೆ ಬೆರಳಚ್ಚು, ರಕ್ತದ ಕಲೆ ಹಾಗೂ ಇತರ ವೈಜ್ಞಾನಿಕ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಕಲೆಹಾಕಲು ಫೊರೆನ್ಸಿಕ್ ತಜ್ಞರಿಗೆ ಮತ್ತು ತನಿಖಾಧಿಕಾರಿಗಳಿಗೆ ಬಹುದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಇದರಿಂದ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ತನಿಖೆಯ ವೇಗ ಮತ್ತು ಗುಣಮಟ್ಟ ಹೆಚ್ಚುವುದರ ಜೊತೆಗೆ, ನ್ಯಾಯಾಲಯದಲ್ಲಿ ಸಾಕ್ಷ್ಯಗಳನ್ನು ದೃಢವಾಗಿ ಮಂಡಿಸಿ ಅಪರಾಧಿಗಳಿಗೆ ತ್ವರಿತವಾಗಿ ಶಿಕ್ಷೆ ಒದಗಿಸುವ ನಿಟ್ಟಿನಲ್ಲಿ ಈ ವಾಹನದ ಸೇರ್ಪಡೆ ಜಿಲ್ಲಾ ಪೊಲೀಸ್ ಇಲಾಖೆಗೆ ಆನೆಬಲ ತಂದುಕೊಟ್ಟಿದೆ.

Share This Article