ಅಂಕೋಲಾ ತಾಲೂಕಿನ 7 ವರ್ಷದ ಬಾಲಕಿ ಐಶಾನಿ ಸಂತೋಷ್ ನಾಯ್ಕ್ ಎಳೆಯ ವಯಸ್ಸಿನಲ್ಲಿಯೇ “ಭರತನಾಟ್ಯ ಕಲಾ ಮಾಣಿಕ್ಯ” ರಾಜ್ಯ ಪ್ರಶಸ್ತಿಗೆ ಭಾಜನಳಾಗುವ ಮೂಲಕ ಜಿಲ್ಲೆ ಹಾಗೂ ತಾಲೂಕಿಗೆ ಅಪಾರ ಕೀರ್ತಿ ತಂದಿದ್ದಾಳೆ.
ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ ಪುರದಲ್ಲಿ ಇತ್ತೀಚೆಗೆ ‘ವಿಶ್ವ ದರ್ಶನ’ ದಿನಪತ್ರಿಕೆಯ ವತಿಯಿಂದ ಆಯೋಜಿಸಲಾಗಿದ್ದ 7ನೇ ರಾಜ್ಯಮಟ್ಟದ ಭಾವೈಕ್ಯತಾ ಸಮ್ಮೇಳನದಲ್ಲಿ ಈ ಪುಟ್ಟ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭರತನಾಟ್ಯದಲ್ಲಿ ಅತೀವ ಆಸಕ್ತಿ ಹೊಂದಿರುವ ಐಶಾನಿ, ಕರಾವಳಿ ಉತ್ಸವ, ಅಂಕೋಲಾ ಉತ್ಸವ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದಿದ್ದಾಳೆ.

ಅಷ್ಟೇ ಅಲ್ಲದೆ, ಅಂಕೋಲಾದ ಹಿಂದೂ ಉತ್ಸವ, ನಾಮಧಾರಿ ಗಣೇಶೋತ್ಸವ, ಭಜನೋತ್ಸವ ಮತ್ತು ಕೃಷ್ಣ ಜನ್ಮಾಷ್ಟಮಿ ಮುಂತಾದ ಅನೇಕ ಧಾರ್ಮಿಕ ಕಾರ್ಯಕ್ರಮಗಳ ಛದ್ಮವೇಷ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತನ್ನ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾಳೆ.
ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಐಶಾನಿಯ ಈ ಹೆಜ್ಜೆಗೆ ಸಮಸ್ತ ಅಂಕೋಲಾ ತಾಲೂಕಿನ ಕಲಾಭಿಮಾನಿಗಳು ಹಾಗೂ ಸಹೃದಯಿ ಬಂಧುಗಳು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.


