ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾಂಧಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ : ಪೊಲೀಸರ ತ್ವರಿತ ಕಾರ್ಯಾಚರಣೆಗೆ ಪಿಡಿಒ ಸಂಘದ ಮೆಚ್ಚುಗೆ..

News Desk
2 Min Read

ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾರಿದೀಪ ಅಳವಡಿಸುವ ವಿಚಾರವಾಗಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಇಲಾಖೆಯ ಈ ಕ್ಷಿಪ್ರ ಕಾರ್ಯಾಚರಣೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ತಂಡ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ.

ಘಟನೆಯ ಹಿನ್ನೆಲೆ: ಶುಕ್ರವಾರ (ಸೆಪ್ಟೆಂಬರ್ 11, 2026) ಸಂಜೆ 4:15ರ ಸುಮಾರಿಗೆ ಕಚೇರಿಗೆ ಬಂದ ಶಿರೂರು ನಿವಾಸಿಗಳಾದ ಮನೋಜ ಬಾಬು ಗೌಡ, ನಾಗೇಶ ಸಣ್ಣು ಗೌಡ, ಜಯಂತ ರಾಕು ಗೌಡ ಹಾಗೂ ರವಿ ಪುತ್ತು ಗೌಡ ಎಂಬುವವರು ದಾರಿದೀಪ ಅಳವಡಿಸಲು ಆಗ್ರಹಿಸಿದ್ದರು. ಅಲ್ಲಿ ಅನಧಿಕೃತವಾಗಿ ದಾರಿದೀಪ ಹಾಕಲು ಅವಕಾಶವಿಲ್ಲ, ಕೆ.ಇ.ಬಿ ದಂಡ ವಿಧಿಸುತ್ತದೆ ಎಂದು ವಿವರಿಸಿದ ಸ್ವಚ್ಛತಾಗಾರ ಮಂಜುನಾಥ ವಿಷ್ಣು ನಾಯ್ಕ (50) ಅವರ ಮೇಲೆ ಆರೋಪಿಗಳು ಏಕಾಏಕಿ ಹಲ್ಲೆ ನಡೆಸಿದ್ದರು. ಶರ್ಟ್ ಹರಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಹಾಕಿದ್ದರ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು.

ದೂರು ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು, ಪ್ರಕರಣದ ಮೂಲ ಆರೋಪಿ ಮನೋಜ ಗೌಡ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ಕಾರಿ ಕಚೇರಿಯಲ್ಲಿಯೇ ಸಿಬ್ಬಂದಿ ಮೇಲಾದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು, ನೊಂದ ಸಿಬ್ಬಂದಿಯ ಪರವಾಗಿ ದೃಢವಾಗಿ ನಿಂತಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸಂಘದ ಜಿಲ್ಲಾಧ್ಯಕ್ಷರಾದ ಗಿರೀಶ್ ನಾಯಕ್ ಅವರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರು. ಇದನ್ನು ಗಂಭೀರವಾಗಿ ಪರಿಗಣಿಸದ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್ಪಿ) ಜೊತೆ ದೂರವಾಣಿ ಮೂಲಕ ಮಾತನಾಡಿ, ಘಟನೆಯ ಗಂಭೀರತೆಯನ್ನು ವಿವರಿಸಿದರು. ಮೇಲಾಧಿಕಾರಿಗಳು ಕೂಡಲೇ ಉತ್ತಮವಾಗಿ ಸ್ಪಂದಿಸಿ, ಸೂಕ್ತ ಕ್ರಮದ ಭರವಸೆ ನೀಡಿದ್ದಕ್ಕೆ ಸಂಘವು ಹರ್ಷ ವ್ಯಕ್ತಪಡಿಸಿದೆ.

ಒಗ್ಗಟ್ಟಿನ ಪ್ರದರ್ಶನ: ಹಲ್ಲೆಗೊಳಗಾದ ತಳಮಟ್ಟದ ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬುವ ಈ ಕಾರ್ಯದಲ್ಲಿ ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಗಿರೀಶ್ ನಾಯಕ್, ತಾಲೂಕು ಅಧ್ಯಕ್ಷರಾದ ಮಾದೇವ ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಗಿರೀಶ್ ತಳವಾರ್, ಹಾಗೂ ಬೆಳಸೆ ಗ್ರಾಮ ಪಂಚಾಯತ್ ಪಿಡಿಓ ಹಸ್ಮತ್ ಖಾನ್ ಸೇರಿದಂತೆ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಸಿಬ್ಬಂದಿಯ ಬೆನ್ನಿಗೆ ನಿಲ್ಲುವ ಮೂಲಕ ಇಲಾಖೆಯಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಕೆಳಹಂತದ ನೌಕರರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸಂಘವು ತೋರಿದ ಈ ಕಾಳಜಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Share This Article