ಪರಿಸರ ಸ್ನೇಹಿ ಮಣ್ಣಿನ ಗಣಪತಿಗೆ ಹೆಚ್ಚಿದ ಬೇಡಿಕೆ: ಕಡವಾಡದ ಅಪ್ಪ-ಮಗನ ಕಲಾಕೃತಿಗಳಿಗೆ ಗೋವಾದಲ್ಲೂ ಮನ್ನಣೆ..

News Desk
2 Min Read

ಕಾರವಾರ: ಗೌರಿ-ಗಣೇಶ ಹಬ್ಬಕ್ಕೆ ಇನ್ನೇನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಕರಾವಳಿಯಾದ್ಯಂತ ಹಬ್ಬದ ಸಡಗರ ಮನೆಮಾಡಿದ್ದು, ಕಲಾಕಾರರು ಮಣ್ಣಿನ ಗಣಪತಿ ವಿಗ್ರಹಗಳಿಗೆ ಬಣ್ಣದ ಚಿತ್ತಾರಗಳ ಮೂಲಕ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಕಾರವಾರ ತಾಲೂಕಿನ ಕಡವಾಡ ಗ್ರಾಮದ ಗಣಪತಿ ಬಾಬನಿ ಮಾಂಜ್ರೇಕರ್ ಹಾಗೂ ಅವರ ಪುತ್ರ ರಜತ್ ಮಾಂಜ್ರೇಕರ್ ಅವರ ಕೈಯಲ್ಲಿ ಅರಳಿದ ಸುಂದರ ಮಣ್ಣಿನ ಗಣಪತಿ ವಿಗ್ರಹಗಳು ಇದೀಗ ಭಕ್ತರ ಮನೆ ಬೆಳಗಲು ಸಜ್ಜಾಗಿವೆ.

ತಂದೆಯಿಂದ ಒಲಿದ ಕಲೆಗಣಪತಿ ಮಾಂಜ್ರೇಕರ್ ಅವರು ಹಲವು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಮಗ ರಜತ್‌ಗೆ ಕೇವಲ 9 ವರ್ಷ ವಯಸ್ಸಿದ್ದಾಗಲೇ ಮಣ್ಣಿನ ವಿಗ್ರಹ ತಯಾರಿಸುವ ಕಲೆಯನ್ನು ಧಾರೆ ಎರೆದಿದ್ದಾರೆ. ಇಂದು ರಜತ್ ಅವರು ತಂದೆಯ ಜೊತೆಗೂಡಿ ಅತ್ಯಂತ ಆಕರ್ಷಕ ಹಾಗೂ ವಿವಿಧ ಶೈಲಿಯ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದಾರೆ. ಇವರ ವಿಗ್ರಹಗಳು ಕೇವಲ ಭಕ್ತಿ ಮಾತ್ರವಲ್ಲದೆ, ಕರಕುಶಲತೆಯ ಶ್ರೇಷ್ಠತೆಯನ್ನೂ ಪ್ರದರ್ಶಿಸುತ್ತವೆ.

ನೆರೆಯ ಗೋವಾದಿಂದಲೂ ಬೇಡಿಕೆಇವರು ತಯಾರಿಸುವ ಮಣ್ಣಿನ ಗಣಪತಿಗಳಿಗೆ ಕಾರವಾರ ತಾಲೂಕಿನಲ್ಲಿ ಮಾತ್ರವಲ್ಲದೆ, ನೆರೆಯ ಗೋವಾ ರಾಜ್ಯದಲ್ಲೂ ಭಾರಿ ಬೇಡಿಕೆಯಿದೆ. ಪ್ರತಿ ವರ್ಷ ಇವರ ವಿಗ್ರಹಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಈ ಬಾರಿ ಒಟ್ಟು 30 ಗಣಪತಿ ವಿಗ್ರಹಗಳನ್ನು ಇವರು ಸಿದ್ಧಪಡಿಸಿದ್ದಾರೆ. ವಿಶೇಷವೆಂದರೆ, ಇಂದು ಸಹ ಇವರು ನಿರ್ಮಿಸಿದ 5 ಸುಂದರ ವಿಗ್ರಹಗಳನ್ನು ಗೋವಾ ರಾಜ್ಯದ ಭಕ್ತರು ಅತ್ಯಂತ ಭಕ್ತಿ-ಭಾವದಿಂದ ತೆಗೆದುಕೊಂಡು ಹೋಗಿದ್ದಾರೆ.

ಸರ್ಕಾರದ ಪ್ರೋತ್ಸಾಹದ ಅಗತ್ಯ: ಒಂದು ಕಡೆ ಮಣ್ಣಿನ ಗಣಪತಿಗೆ ಬೇಡಿಕೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಇಂತಹ ವಿಗ್ರಹಗಳನ್ನು ನಿರ್ಮಿಸುವ ಕಲಾಕಾರರ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದೆ. ಇದರ ಹಿಂದಿನ ಪ್ರಮುಖ ಕಾರಣ ಆರ್ಥಿಕ ಹೊರೆ.

ದುಬಾರಿ ಜೀವನದಲ್ಲಿ ಕಚ್ಚಾ ವಸ್ತುಗಳ ಖರೀದಿ, ವಿಗ್ರಹ ನಿರ್ಮಾಣ ಹಾಗೂ ಅದನ್ನು ಸುರಕ್ಷಿತವಾಗಿ ಗ್ರಾಹಕರಿಗೆ ತಲುಪಿಸುವಷ್ಟರಲ್ಲಿ ಕಲಾಕಾರರಿಗೆ ಸಾಕಷ್ಟು ಖರ್ಚು ತಗುಲುತ್ತದೆ.

ಮಾಸಾಶನದ ಆಗ್ರಹ: ಕೇವಲ ಹಬ್ಬದ ಋತುವಿನಲ್ಲಿ ಮಾತ್ರವಲ್ಲದೆ, ವರ್ಷಪೂರ್ತಿ ಈ ಪಾರಂಪರಿಕ ಕಲೆಯನ್ನು ನಂಬಿ ಬದುಕುವ ಕಲಾಕಾರರನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದ್ದರಿಂದ, ಸರ್ಕಾರವು ಇಂತಹ ಕಲಾಕಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಆರ್ಥಿಕ ಧನಸಹಾಯ ಒದಗಿಸುವ ಜೊತೆಗೆ, ಅರ್ಹ ಕಲಾಕಾರರಿಗೆ ‘ಮಾಸಾಶನ’ ನೀಡಿ ಗೌರವಿಸಬೇಕು ಎಂಬುದು ಕಲಾಭಿಮಾನಿಗಳ ಆಗ್ರಹವಾಗಿದೆ.

Share This Article