ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾರಿದೀಪ ಅಳವಡಿಸುವ ವಿಚಾರವನ್ನು ಮುಂದಿಟ್ಟುಕೊಂಡು ಕರ್ತವ್ಯದಲ್ಲಿದ್ದ ಸಿಬ್ಬಂದಿಯೋರ್ವರ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಲ್ಲೆಗೊಳಗಾದ ತಳಮಟ್ಟದ ಸಿಬ್ಬಂದಿಯ ಬೆಂಬಲಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಪ್ರಮುಖರು ದೃಢವಾಗಿ ನಿಲ್ಲುವ ಮೂಲಕ ಇಲಾಖೆಯಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಬೆಳಸೆ ಗ್ರಾಮ ಪಂಚಾಯತದಲ್ಲಿ ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿರುವ ಮಂಜುನಾಥ ವಿಷ್ಣು ನಾಯ್ಕ (50) ಹಲ್ಲೆಗೊಳಗಾದವರು. ಶುಕ್ರವಾರ ಸಂಜೆ 4:15ರ ಸುಮಾರಿಗೆ ಕಚೇರಿಗೆ ಬಂದ ಶಿರೂರು ನಿವಾಸಿಗಳಾದ ಮನೋಜ ಬಾಬು ಗೌಡ, ನಾಗೇಶ ಸಣ್ಣು ಗೌಡ, ಜಯಂತ ರಾಕು ಗೌಡ ಹಾಗೂ ರವಿ ಪುತ್ತು ಗೌಡ ಎಂಬುವವರು, ರೈಲ್ವೆ ಬ್ರಿಡ್ಜ್ ಬಳಿಯ ರವಿ ಗೌಡ ಅವರ ಅಂಗಡಿ ಹತ್ತಿರ ದಾರಿದೀಪ ಹಾಕಿಕೊಡುವಂತೆ ಆಗ್ರಹಿಸಿದ್ದಾರೆ. ಅಲ್ಲಿ ಅನಧಿಕೃತವಾಗಿ ದಾರಿದೀಪ ಹಾಕಲು ಅವಕಾಶವಿಲ್ಲ, ಕೆ.ಇ.ಬಿ ಯವರು ದಂಡ ಹಾಕುತ್ತಾರೆ ಎಂದು ಮಂಜುನಾಥ್ ಅವರು ನಿಯಮವನ್ನು ವಿವರಿಸಿದ್ದಾರೆ. ಇದರಿಂದ ಏಕಾಏಕಿ ಆಕ್ರೋಶಗೊಂಡ ಆರೋಪಿಗಳು, ಮಂಜುನಾಥ್ ಅವರನ್ನು ಕಚೇರಿಯಿಂದ ಹೊರಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಆರೋಪಿಗಳ ಪೈಕಿ ಮನೋಜ ಎಂಬಾತ ಮಂಜುನಾಥ್ ಅವರ ಕೆನ್ನೆ ಹಾಗೂ ಎದೆಯ ಮೇಲೆ ಮನಬಂದಂತೆ ಹೊಡೆದು, ಶರ್ಟನ್ನು ಹರಿದು ಹಾಕಿ ದೌರ್ಜನ್ಯವೆಸಗಿದ್ದಾನೆ. ಅಲ್ಲದೇ, “ಇನ್ನು ಮುಂದೆ ನಮ್ಮ ವಿಷಯದಲ್ಲಿ ಮಧ್ಯೆ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇವೆ” ಎಂದು ಎಲ್ಲಾ ಆರೋಪಿಗಳು ಸೇರಿ ಪ್ರಾಣಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಗಾಯಗೊಂಡ ಮಂಜುನಾಥ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಅಂಕೋಲಾ ಠಾಣೆಗೆ ದೂರು ನೀಡಿದ್ದಾರೆ. ಈಗಲೂ ಎದೆ ನೋವು ಬಂದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ (BNS) 2023ರ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ನೊಂದ ಸಿಬ್ಬಂದಿಯ ಬೆಂಬಲಕ್ಕೆ ನಿಂತ ಅಧಿಕಾರಿಗಳ ಪಡೆ: ಸರ್ಕಾರಿ ಕಚೇರಿಯಲ್ಲಿಯೇ ಕರ್ತವ್ಯನಿರತ ಸಿಬ್ಬಂದಿ ಮೇಲೆ ನಡೆದ ಈ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಅಧಿಕಾರಿಗಳ ವಲಯ, ನೊಂದ ಸಿಬ್ಬಂದಿಯ ಪರವಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಗಿರೀಶ್ ನಾಯಕ್, ಸಂಘದ ತಾಲೂಕು ಅಧ್ಯಕ್ಷರಾದ ಮಾದೇವ ಗೌಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಗಿರೀಶ್ ತಳವಾರ ಹಾಗೂ ಬೆಳಸೆ ಗ್ರಾಮ ಪಂಚಾಯಿತಿ ಪಿಡಿಓ ಹಸ್ಮತ್ ಖಾನ್ ಅವರು ಉಪಸ್ಥಿತರಿದ್ದು, ನೊಂದ ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬಿದರು.
ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಕೆಳಹಂತದ ಸಿಬ್ಬಂದಿ ಅನಾಥರಾಗುವ ಸನ್ನಿವೇಶಗಳೇ ಹೆಚ್ಚು. ಆದರೆ, ಈ ಪ್ರಕರಣದಲ್ಲಿ ಹಲ್ಲೆಗೊಳಗಾದ ಸಿಬ್ಬಂದಿಯ ಪರವಾಗಿ ಮೇಲಧಿಕಾರಿಗಳು ಮತ್ತು ಸಂಘದ ಮುಖಂಡರು ಒಗ್ಗಟ್ಟಾಗಿ, ಅತ್ಯಂತ ಕಾಳಜಿಯಿಂದ ಬೆಂಬಲಕ್ಕೆ ನಿಂತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಅಧಿಕಾರಿಗಳ ಈ ನಡೆ ಪಂಚಾಯತ್ ಸಿಬ್ಬಂದಿ ವಲಯದಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವಂತೆ ಮಾಡಿದೆ.


