ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ 8ರಂದು ನಡೆದ ಕಾರ್ಯಾಚರಣೆಯಲ್ಲಿ ಶಿರಸಿಯ ಅರೇಕೊಪ್ಪ ನಿವಾಸಿ ಖಾಲಿದ ತಂದೆ ಶರೀಫ್ ಸಾಬ್ ಕನವಳ್ಳಿ (33) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 35,000 ರೂ. ಮೌಲ್ಯದ ಕದ್ದ ಬಾಬ್ತು ಎಕ್ಷಿವ ಕಂಪನಿ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಅಂಕೋಲಾದ ಕಾಕರಮಠದ ಜೈಹಿಂದ್ ಹೋಟೆಲ್ ಹಿಂದುಗಡೆ ನಿವಾಸಿಯಾಗಿರುವ ಪೈರೋಜ್ ತಂದೆ ಸತ್ತಾರ ಖಾನ (58) ಎಂಬುವವರು ಜೂನ್ 26ರಂದು ಬೆಳಿಗ್ಗೆ 07:10 ರಿಂದ 07:25ರ ಸುಮಾರಿಗೆ ತಮ್ಮ ಎಕ್ಷಿವ್ (ಕೆಎ 30/ಇಇ-2938) ಬೈಕನ್ನು ಅಂಕೋಲಾ ಬಸ್ ನಿಲ್ದಾಣದ ನೀರಿನ ಟ್ಯಾಂಕ್ ಹತ್ತಿರ ನಿಲ್ಲಿಸಿದ್ದರು. ಆ ಸಮಯದಲ್ಲಿ ಯಾರೋ ಕಳ್ಳರು ಬೈಕ್ ಕದ್ದೊಯ್ದಿದ್ದರು. ಈ ಕುರಿತು ಜೂನ್ 28ರಂದು ಪೈರೋಜ್ ಅವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ (ಗುನ್ನೆ ನಂಬರ್ 129/2026, ಕಲಂ: 303 (2) ಬಿ.ಎನ್.ಎಸ್, 2023) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಭೇದನೆಗಾಗಿ ಅಂಕೋಲಾ ಪೊಲೀಸ್ ಠಾಣೆಯಿಂದ ಒಂದು ಪತ್ತೆ ತಂಡವನ್ನು ನೇಮಿಸಲಾಗಿತ್ತು. ಸತತವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಜುಲೈ 08ರಂದು ಆರೋಪಿಯನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಆತ ಜೂನ್ 26ರಂದು ಅಂಕೋಲಾ ಬಸ್ ನಿಲ್ದಾಣದಲ್ಲಿ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆತನನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಲವು ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು: ಬಂಧಿತ ಆರೋಪಿ ಖಾಲಿದ ಈ ಹಿಂದೆಯೂ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ಶಿರಸಿ ಗ್ರಾಮೀಣ ಠಾಣೆಯಲ್ಲಿ 03, ಶಿರಸಿ ಹೊಸ ಮಾರುಕಟ್ಟೆಯಲ್ಲಿ 03, ಬನವಾಸಿ ಠಾಣೆಯಲ್ಲಿ 01, ಯಲ್ಲಾಪುರ ಠಾಣೆಯಲ್ಲಿ 01, ಕಾರವಾರ ಶಹರ ಠಾಣೆಯಲ್ಲಿ 01, ಕುಮಟಾ ಠಾಣೆಯಲ್ಲಿ 01, ಹಳಿಯಾಳ ಠಾಣೆಯಲ್ಲಿ 01 ಹಾಗೂ ತಡಸ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ ಸೇರಿದಂತೆ ಒಟ್ಟಾರೆಯಾಗಿ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ದೀಪನ್ ಎಮ್ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಶ್ರೀ ಕೃಷ್ಣಮೂರ್ತಿ ಜಿ, ಹಾಗೂ ಕಾರವಾರ ಉಪವಿಭಾಗದ ಡಿವೈಎಸ್‌ಪಿ ಶ್ರೀ ಗಿರೀಶ ಎಸ್.ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಂಕೋಲಾ ಪೊಲೀಸ್ ನಿರೀಕ್ಷಕರಾದ ಶ್ರೀ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ, ತನಿಖಾಧಿಕಾರಿಗಳಾದ ಪಿ.ಎಸ್.ಐ (ತನಿಖೆ-01) ಶ್ರೀ ವಿಶ್ವನಾಥ ನಿಂಗೋಳ್ಳಿ ಮತ್ತು ಪಿ.ಎಸ್.ಐ (ತನಿಖೆ-02) ಶ್ರೀಮತಿ ಲಲಿತಾ ರಜಪೂತ, ಹಾಗೂ ಸಿಬ್ಬಂದಿಗಳಾದ ಪ್ರಶಾಂತ ನಾಯ್ಕ, ಮಹಾದೇವ ಸಿದ್ದಿ, ಆಸಿಫ್ ಆರ್ ಕೆ, ಗಿರೀಶ ಲಮಾಣಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದು, ಸಾರ್ವಜನಿಕ ವಲಯದಲ್ಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


