ಅಂಕೋಲಾ ಉಪನೊಂದಣಿ ಕಚೇರಿಯಲ್ಲಿ ಲೋಕಾಯುಕ್ತ ಸರ್ಚ್ – ಕಡತ ಅವ್ಯವಸ್ಥೆ, ಹಣ ಪತ್ತೆ ಎಂಬ ಸುದ್ದಿ; ಅಧಿಕೃತ ವರದಿ ಇನ್ನೂ ಬಾಕಿ!

News Desk
1 Min Read

ಅಂಕೋಲಾ, ಸೆಪ್ಟೆಂಬರ್ 26: ಅಂಕೋಲಾ ತಾಲೂಕಿನ ಉಪನೊಂದಣಿ ಕಚೇರಿಯಲ್ಲಿ ನಿನ್ನೆ (25-09-2025) ಸಂಜೆ ಲೋಕಾಯುಕ್ತ ಅಧಿಕಾರಿಗಳು ಸರ್ಚ್ ವಾರಂಟ್ ಸಹಿತ ದಾಳಿ ನಡೆಸಿದರು. ಉಪನೊಂದಣಿ ಕಚೇರಿಯಲ್ಲಿ ಏಜೆಂಟರ ಹಾವಳಿ, ದಾಖಲೆಗಳ ನೊಂದಣಿ ಕಾರ್ಯದಲ್ಲಿ ಅನಗತ್ಯ ವಿಳಂಬ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ.

ವಿನಾಯಕ ಬಿಲ್ಲವ ಹಾಗೂ ವಿಜಯ ಅವರ ನೇತೃತ್ವದಲ್ಲಿ ಏಳು ಜನರ ಲೋಕಾಯುಕ್ತ ತಂಡ ಆರೇಳು ಗಂಟೆಗಳ ಕಾಲ ಕಚೇರಿಯ ಕಡತ ಮತ್ತು ದಾಖಲೆಗಳನ್ನು ಪರಿಶೀಲಿಸಿತು. ದಾಳಿಯ ವೇಳೆ ಕಚೇರಿಗೆ ಸಂಬಂಧಿಸದ ಸ್ಥಳೀಯ ವ್ಯಕ್ತಿ ಹಾಜರಿದ್ದ ಹಿನ್ನೆಲೆಯಲ್ಲಿ ಅವನನ್ನು ವಿಚಾರಣೆಗೆ ಒಳಪಡಿಸಿದ್ದು, ಅವನ ಬಳಿ ಸುಮಾರು ರೂ.16,000 ನಗದು ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೊತೆಗೆ ಕಚೇರಿಯ ಲೆಕ್ಕದಲ್ಲಿ ಹೆಚ್ಚುವರಿ ರೂ.4,000 ಪತ್ತೆಯಾದ ವಿಷಯವೂ ಬೆಳಕಿಗೆ ಬಂದಿದೆ. ಆದರೆ, ಈ ಹಣದ ವಶಪಡಿಕೆ ಕುರಿತು ಲೋಕಾಯುಕ್ತ ಅಧಿಕಾರಿಗಳಿಂದ ಅಧಿಕೃತ ವರದಿ ಇನ್ನೂ ಹೊರಬಂದಿಲ್ಲ.

ಇದೇ ವೇಳೆ ಕಡತಗಳನ್ನು ಸರಿಯಾಗಿ ನಿರ್ವಹಿಸದೆ ಇರುವುದು, ಕಚೇರಿಯಲ್ಲಿ ಕುಡಿಯುವ ನೀರು ಹಾಗೂ ಸಿಸಿಟಿವಿ ವ್ಯವಸ್ಥೆಗಳ ಕೊರತೆ ಮುಂತಾದ ಅನೇಕ ಅಸಮರ್ಪಕತೆಗಳನ್ನು ಅಧಿಕಾರಿಗಳು ದಾಖಲಿಸಿದ್ದಾರೆ. ಈ ಕುರಿತು ಸಿದ್ಧಪಡಿಸಲಾದ ವರದಿಯನ್ನು ಶೀಘ್ರದಲ್ಲೇ ಬೆಂಗಳೂರಿನ ಮುಖ್ಯ ಲೋಕಾಯುಕ್ತ ಕಚೇರಿಗೆ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ. ಮುಂದಿನ ಕಾನೂನು ಕ್ರಮಗಳ ಬಗ್ಗೆ ಇನ್ನೂ ಸ್ಪಷ್ಟತೆ ಬರಬೇಕಿದೆ.

ಅಂಕೋಲಾದ ಉಪನೊಂದಣಿ ಕಚೇರಿಯಲ್ಲಿ ನಡೆದ ದಾಳಿ ಇನ್ನುಳಿದ ಸರ್ಕಾರಿ ಇಲಾಖೆಗಳಲ್ಲೂ ನಡುಕ ಉಂಟುಮಾಡಿದೆ. ಅಂಕೋಲಾದ ಅನೇಕ ಕಚೇರಿಗಳಲ್ಲಿ ದಿನನಿತ್ಯದ ಕ್ಯಾಶ್‌ ರಿಜಿಸ್ಟರ್‌ಗಳನ್ನು ಸರಿಯಾಗಿ ನಿರ್ವಹಿಸದಿರುವುದು, ಸಮಯಕ್ಕೆ ಕಚೇರಿಗೆ ಬಾರದಿರುವುದು ಹಾಗೂ ನಿಗದಿತ ಕೆಲಸ ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿರುವುದು ಸಾರ್ವಜನಿಕರ ಸಾಮಾನ್ಯ ಅಸಮಾಧಾನವಾಗಿದೆ. ಸರ್ಕಾರದಿಂದ ಹಲವು ಬಾರಿ ಕುಡಿಯುವ ನೀರು, ಆಸನ ವ್ಯವಸ್ಥೆ ಹಾಗೂ ಸಿಸಿಟಿವಿ ಅಳವಡಿಕೆ ಕುರಿತು ಆದೇಶ ಹೊರಡಿಸಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ತೊಂದರೆಗಳು ಮುಂದುವರಿದಿವೆ ಎಂದು ಸಾರ್ವಜನಿಕರ ಆರೋಪ..

Share This Article