ಅಂಕೋಲಾ: ಟೋಲ್ ವಸೂಲಾತಿಯಲ್ಲಿ ಇರೋ ಆತುರ, ಹೈವೇ ಕೆಲಸ ಮುಗಿಸುವಲ್ಲಿ ಇಲ್ಲ ; ಈ ಅಡ್ಡಾದಿಡ್ಡಿ ರಸ್ತೆಗೆ ಇನ್ನೆಷ್ಟು ಜೀವ ಬಲಿ ಬೇಕು?

News Desk
2 Min Read

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರ ಅಕೌಂಟ್‌ನಿಂದ ಫಾಸ್ಟ್‌ಟ್ಯಾಗ್ ಮೂಲಕ ದುಡ್ಡು ಕತ್ತರಿಸಿಕೊಳ್ಳುವ ವ್ಯವಸ್ಥೆ ಎಷ್ಟು “ಸೂಪರ್ ಫಾಸ್ಟ್” ಆಗಿ ಕೆಲಸ ಮಾಡುತ್ತಿದೆಯೋ, ಅದೇ ಹೆದ್ದಾರಿಯ ಕಾಮಗಾರಿ ಮಾತ್ರ ಅಷ್ಟೇ “ಸೂಪರ್ ಸ್ಲೋ” ಆಗಿ ಸಾಗುತ್ತಿದೆ! ದಶಕ ಕಳೆದರೂ ಮುಗಿಯದ ಅಂಕೋಲಾ ವ್ಯಾಪ್ತಿಯ ಚತುಷ್ಪಥ ಹೆದ್ದಾರಿ ಕಾಮಗಾರಿ ಹಾಗೂ ಹೆಜ್ಜೆಗೊಂದಿರುವ ಅವೈಜ್ಞಾನಿಕ ಡೈವರ್ಷನ್‌ಗಳು ವಾಹನ ಸವಾರರ ಪಾಲಿಗೆ ಅಕ್ಷರಶಃ ಮರಣಶಾಸನವಾಗಿ ಪರಿಣಮಿಸಿವೆ.

ಫಾಸ್ಟ್‌ಟ್ಯಾಗ್‌ಗೆ ಇರುವ ಬೆಲೆ ಪ್ರಾಣಕ್ಕಿಲ್ಲ!

ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರ ಖಾತೆಯಲ್ಲಿ ಒಂದು ರೂಪಾಯಿ ಕಡಿಮೆಯಿದ್ದರೂ ಗೇಟ್ ಮೇಲೇಳುವುದಿಲ್ಲ. ಈ ವಿಷಯಗಳಲ್ಲಿ ಅಧಿಕಾರಿಗಳ ದಕ್ಷತೆ ನಿಜಕ್ಕೂ ಮೆಚ್ಚುವಂತಹುದು! ಆದರೆ ಟೋಲ್ ಕಟ್ಟಿದ ಅದೇ ವಾಹನ ಸವಾರರಿಗೆ ಒಂದು ಗುಂಡಿ ಇಲ್ಲದ, ಸುರಕ್ಷಿತ ರಸ್ತೆ ಒದಗಿಸಬೇಕು ಎಂಬ ಕನಿಷ್ಠ ಜ್ಞಾನ ಈ “ಪುಣ್ಯಾತ್ಮ” ಗುತ್ತಿಗೆ ಕಂಪನಿ ಹಾಗೂ ಪ್ರಾಧಿಕಾರಕ್ಕೆ ಇಲ್ಲದಿರುವುದು ವಿಪರ್ಯಾಸ. ದುಡ್ಡು ಎಣಿಸುವ ಮಷಿನ್‌ಗಳು ಹಗಲಿರುಳು ಸದ್ದು ಮಾಡುತ್ತಿದ್ದರೆ, ರಸ್ತೆ ನಿರ್ಮಿಸಬೇಕಾದ ಯಂತ್ರಗಳು ಮಾತ್ರ ಮೂಲೆಗುಂಪಾಗಿವೆ.

ಯಮರಾಜನಿಗೂ ಕನ್ಫ್ಯೂಸ್ ಆಗುವಂತಹ ಡೈವರ್ಷನ್‌ಗಳು: ರಸ್ತೆ ಕಾಮಗಾರಿ ನೆಪದಲ್ಲಿ ಅಂಕೋಲಾ ವ್ಯಾಪ್ತಿಯ ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ಡೈವರ್ಷನ್‌ಗಳನ್ನು ನೀಡಲಾಗಿದೆ. ಈ ಡೈವರ್ಷನ್‌ಗಳು ಎಷ್ಟೊಂದು ಅವೈಜ್ಞಾನಿಕವಾಗಿವೆ ಎಂದರೆ, ಸ್ವತಃ ಯಮಧರ್ಮರಾಜನೇ ಇಲ್ಲಿ ವಾಹನ ಓಡಿಸಿಕೊಂಡು ಬಂದರೂ ದಾರಿ ತಪ್ಪಿ ಅಪಘಾತಕ್ಕೀಡಾಗುವುದು ಗ್ಯಾರಂಟಿ! ದಿಢೀರ್ ಅಂತ ಎದುರಾಗುವ ತಿರುವುಗಳಿಂದಾಗಿ ಪ್ರತಿದಿನ ವಾಹನ ಸವಾರರು ನಿಯಂತ್ರಣ ತಪ್ಪಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಸಾರ್ವಜನಿಕರ ನುಡಿಗಳು: “ನಾವು ಟೋಲ್ ಕಟ್ಟುವುದು ರಸ್ತೆಯಲ್ಲಿ ಹಾಯಾಗಿ, ಸುರಕ್ಷಿತವಾಗಿ ಹೋಗಲಿ ಅಂತಲೋ ಅಥವಾ ದುಡ್ಡು ಕೊಟ್ಟು ನರಕಯಾತನೆ ಅನುಭವಿಸಲಿ ಅಂತಲೋ?” ಎಂಬುದು ವಾಹನ ಸವಾರರ ಆಕ್ರೋಶದ ಪ್ರಶ್ನೆ. ಅಪಘಾತವಾದಾಗಲೆಲ್ಲ ಬಂದು ಅಳತೆ ಟೇಪ್ ಹಿಡಿದು ನಿಲ್ಲುವ ಗುತ್ತಿಗೆ ಕಂಪನಿಯ ಹಾಗೂ ಪ್ರಾಧಿಕಾರದ ಅಧಿಕಾರಿಗಳು, ಅಪಘಾತ ಆಗುವ ಮುನ್ನ ಈ ಯಮಸ್ವರೂಪಿ ತಿರುವುಗಳನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಸೇವೆ ನೀಡದೆ ಸುಂಕ ಕೀಳುವ ನೈತಿಕ ಹಕ್ಕು ಯಾರಿಗೂ ಇಲ್ಲ. ಇನ್ನಾದರೂ ಪ್ರಾಧಿಕಾರದ ನಿದ್ದೆ ಮಂಪರು ಬಿಡಬೇಕಾಗಿದೆ. ಕೇವಲ ಟೋಲ್ ವಸೂಲಿಯಲ್ಲಿ ತೋರುವ ಉತ್ಸಾಹವನ್ನು ರಸ್ತೆ ನಿರ್ಮಾಣದಲ್ಲೂ ತೋರಿಸಿ, ಅಪಾಯಕಾರಿ ಡೈವರ್ಷನ್‌ಗಳನ್ನು ತಕ್ಷಣವೇ ಸರಿಪಡಿಸಬೇಕು. ಇಲ್ಲವಾದಲ್ಲಿ, ದುಡ್ಡು ಕೊಟ್ಟು ಪ್ರಾಣ ಕಳೆದುಕೊಳ್ಳಲು ಸಿದ್ಧರಿಲ್ಲದ ಜನಸಾಮಾನ್ಯರು ಇದರ ಬಗ್ಗೆ ಮಾತನಾಡುವ ದಿನ ಹತ್ತಿರ ಇದೆ.

Share This Article