ಮದುವೆಗೆ ಸಿದ್ಧತೆಯಲ್ಲಿದ್ದ ಪ್ರೇಮಿಗಳಿಬ್ಬರ ಮೊಬೈಲ್‌ನಲ್ಲಿದ್ದ ಅತ್ಯಂತ ಖಾಸಗಿ ಹಾಗೂ ವೈಯಕ್ತಿಕ ವಿಡಿಯೋಗಳನ್ನು ಅವರ ಅರಿವಿಲ್ಲದಂತೆ ಕಳವು ಮಾಡಿ, ಅಕ್ರಮವಾಗಿ ಬೇರೊಂದು ಮೊಬೈಲ್‌ಗೆ ವರ್ಗಾಯಿಸಿ ಕೊಳ್ಳಲಾಗಿದೆ ಎನ್ನಲಾದ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿವಾಹದ ಹೊಸ್ತಿಲಲ್ಲಿದ್ದ ಜೋಡಿಯ ಖಾಸಗಿತನಕ್ಕೆ ಕನ್ನ ಹಾಕಿರುವ ಈ ಗಂಭೀರ ಆರೋಪದ ಕುರಿತು ಇದೀಗ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವತಿ(ಪೂ* ನಾಯ್ಕ) ಹಾಗೂ ಯುವಕ (ನಾ*ರಾಜ ಪ್ರ* ನಾಯ್ಕ) ಅವರ ವಿವಾಹ ಇತ್ತೀಚೆಗಷ್ಟೇ ನಿಶ್ಚಯವಾಗಿತ್ತು. ಈ ಜೋಡಿಯು ಒಟ್ಟಿಗೆ ಹಲವು ಕಡೆ ಪ್ರವಾಸ ಮಾಡಿದ್ದ ವೇಳೆ ತಮ್ಮ ಮೊಬೈಲ್‌ನಲ್ಲಿ ಕೆಲವೊಂದು ವೈಯಕ್ತಿಕ ಖಾಸಗಿ ವಿಡಿಯೋಗಳನ್ನು ಸೆರೆಹಿಡಿದಿಟ್ಟು ಕೊಂಡಿದ್ದರು ಎನ್ನಲಾಗಿದೆ.

ಆದರೆ, ಈ ಜೋಡಿಗೆ ಕಿಂಚಿತ್ತೂ ಅನುಮಾನ ಬಾರದಂತೆ ಕತಗಲ್ ಆನೆಗುಂಡಿ ನಿವಾಸಿಯಾದ ಆರೋಪಿ ಸಂದೀಪ್ ಬಿ. ಮುಕ್ರಿ ಎಂಬಾತ, ಅವರ ಮೊಬೈಲ್‌ನಲ್ಲಿದ್ದ ಈ ಗೌಪ್ಯ ವಿಡಿಯೋಗಳನ್ನು ಕದ್ದು ಯಾರಿಗೂ ತಿಳಿಯದಂತೆ ತನ್ನ ಮೊಬೈಲ್‌ಗೆ ರವಾನಿಸಿಕೊಂಡಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಸೆಪ್ಟೆಂಬರ್ 15ರಂದು ಯುವತಿಯ ಸಂಬಂಧಿಯು ಆರೋಪಿ ಸಂದೀಪ್‌ನ ಮೊಬೈಲ್‌ನಲ್ಲಿ ಈ ಖಾಸಗಿ ವಿಡಿಯೋಗಳನ್ನು ಆಕಸ್ಮಿಕವಾಗಿ ನೋಡಿ, ತಕ್ಷಣವೇ ಯುವತಿಗೆ ಮಾಹಿತಿ ನೀಡಿದಾಗ ಈ ಆಘಾತಕಾರಿ ಘಟನೆ ಬಹಿರಂಗವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಈ ಕೃತ್ಯದಿಂದ ಕಂಗೆಟ್ಟ ಸಂತ್ರಸ್ತರು, ಕುಟುಂಬದವರೊಂದಿಗೆ ಕೂಲಂಕಷವಾಗಿ ಚರ್ಚಿಸಿ ಇದೀಗ ದಿನಾಂಕ 28/09/2026 ರಂದು ನ್ಯಾಯ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ಈ ದೂರಿನ ಅನ್ವಯ, ಪ್ರಮುಖ ಆರೋಪಿ ಸಂದೀಪ್ ಬಿ. ಮುಕ್ರಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 77 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 67(A) ಮತ್ತು 66(C) ರ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ತಮ್ಮ ವಿಡಿಯೋಗಳು ಆರೋಪಿಯಿಂದ ಬೇರೆ ಯಾರ್ಯಾರ ಮೊಬೈಲ್‌ಗೆ ರವಾನೆಯಾಗಿವೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೊಂದವರು ಪೊಲೀಸರನ್ನು ಆಗ್ರಹಿಸಿದ್ದಾರೆ.


