ಪಡಿತರ ಚೀಟಿ ಇ-ಕೆವೈಸಿ ಮರು-ನವೀಕರಣಕ್ಕೆ ಅಕ್ಟೋಬರ್ 20 ಅಂತಿಮ ಗಡುವು..

News Desk
1 Min Read

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಮರು-ನವೀಕರಿಸಿಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮಹತ್ವದ ಸೂಚನೆ ನೀಡಿದೆ. ಐದು ವರ್ಷಗಳ ಹಿಂದೆ ಇ-ಕೆವೈಸಿ ಮಾಡಿಸಿಕೊಂಡಿದ್ದ ಜಿಲ್ಲೆಯ ಒಟ್ಟು 5,69,044 ಪಡಿತರ ಸದಸ್ಯರು ಇದೀಗ ಮತ್ತೊಮ್ಮೆ ತಮ್ಮ ಬೆರಳಚ್ಚು ನೀಡಿ ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಇಲಾಖೆಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಇನ್ನೂ 3.24 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಇ-ಕೆವೈಸಿ ಕಾರ್ಯ ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ, ಬಾಕಿ ಇರುವ ಎಲ್ಲಾ ಸದಸ್ಯರು ಅಕ್ಟೋಬರ್ 20ರೊಳಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ (ರೇಷನ್ ಅಂಗಡಿ) ತೆರಳಿ ಈ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವಂತೆ ಇಲಾಖೆ ತಿಳಿಸಿದೆ.

ಒಂದು ವೇಳೆ ನಿಗದಿತ ಅವಧಿಯೊಳಗೆ ಇ-ಕೆವೈಸಿ ಅಪ್‌ಡೇಟ್ ಮಾಡಿಸದಿದ್ದರೆ, ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರದಿಂದ ಸಿಗುವ ರೇಷನ್ ಹಾಗೂ ಇತರ ಯೋಜನೆಗಳ ಸೌಲಭ್ಯಗಳು ಮುಂದಿನ ದಿನಗಳಲ್ಲಿ ರದ್ದಾಗುವ ಅಥವಾ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.

ಇನ್ನು, ಇ-ಕೆವೈಸಿ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಇದಕ್ಕಾಗಿ ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಒಂದು ವೇಳೆ ಯಾರಾದರೂ ಹಣಕ್ಕೆ ಬೇಡಿಕೆಯಿಟ್ಟರೆ ಸಾರ್ವಜನಿಕರು ತಕ್ಷಣವೇ ಇಲಾಖೆಯ ಸಹಾಯವಾಣಿ ಸಂಖ್ಯೆ 1967 ಗೆ ಕರೆ ಮಾಡಬಹುದು. ಅಥವಾ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರರು ಹಾಗೂ ಆಹಾರ ನಿರೀಕ್ಷಕರಿಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Share This Article