ಅಂಕೋಲಾ: ಅಂಕೋಲಾದ ಯುವ ಕ್ರೀಡಾಪಟುಗಳು ಬಿಲ್ಲುಗಾರಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ ರಾಜ್ಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದಾರೆ. ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥೆಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಇವರ ಸಾಧನೆಗೆ ಬೆನ್ನೆಲುಬಾಗಿದೆ.
ಸೆಪ್ಟೆಂಬರ್ 14ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಅಮಿತ ಜಯಂತ ಗೌಡ ಮತ್ತು ಯುಕ್ತಾ ಸತೀಶ ಗೌಡ ಬಂಗಾರದ ಪದಕಗಳನ್ನು ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ಇದೇ ವೇಳೆ ಮನೋಜ ಮೋಹನದಾಸ ಗೌಡ ನಾಲ್ಕನೇ ಹಾಗೂ ಶ್ರೀಧರ ನಾಗೇಶ ಗೌಡ ಐದನೇ ಸ್ಥಾನ ಪಡೆದು ಗಮನ ಸೆಳೆದರು.
ಮುಂದುವರಿದು ಸೆಪ್ಟೆಂಬರ್ 22ರಿಂದ 25ರವರೆಗೆ ಮೈಸೂರಿನ ದಸರಾ ಸಿಎಂ ಕಪ್–2025 ರಾಜ್ಯಮಟ್ಟದ ಬಿಲ್ಲುಗಾರಿಕಾ ಸ್ಪರ್ಧೆಯಲ್ಲಿ ಅಮಿತ ಜಯಂತ ಗೌಡ ಪುರುಷರ ವಿಭಾಗದ ಇಂಡಿಯನ್ ರೌಂಡ್ ಎಲಿಮಿನೇಷನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನು ಗಿಟ್ಟಿಸಿಕೊಂಡರು. ಕುಮಾರಿ ಯುಕ್ತಾ ಸತೀಶ ಗೌಡ 50 ಮೀಟರ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ಗೆದ್ದು ಅಂಕೋಲದ ಕೀರ್ತಿಗೆ ಹೊಸ ಹೊಳಪು ತಂದರು.

ಈ ಸಾಧನೆಗೆ ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥೆಯ ಹಿರಿಯರು ಹಾಗೂ ಅಧಿಕಾರಿಗಳು, ಊರಿನ ನಾಗರಿಕರು, ಹಾಲಕ್ಕಿ ಸಮುದಾಯದ ಹಿರಿಯರು, ಸಮಾಜದ ಗಣ್ಯರು, ಕರ್ನಾಟಕ ರಣಧೀರರ ವೇದಿಕೆಯ ಉದಯ ಗೌಡ, ಕಿರಣ್ ಗಾಂವಕರ ಮತ್ತು ಕರ್ನಾಟಕ ಕೋಚ್ ಅನಿಲ್ ಕುಮಾರ್ ಸೇರಿದಂತೆ ಅನೇಕರಿಂದ ಹಾರ್ದಿಕ ಅಭಿನಂದನೆ ವ್ಯಕ್ತವಾಯಿತು.
ಅಂಕೋಲದ ಯುವ ಕ್ರೀಡಾಪಟುಗಳ ಈ ಸಾಧನೆ ಭವಿಷ್ಯದಲ್ಲೂ ಇನ್ನಷ್ಟು ಉನ್ನತ ಮಟ್ಟದ ಯಶಸ್ಸಿಗೆ ದಾರಿ ತೋರಲಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಕಿರಣ ಗಾಂವಕರ

