ಅಂಕೋಲಾ ತಾಲೂಕು ಪಂಚಾಯತ್‌ನ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಇ.ಒ) ರಾಮು ಜಿ. ಅಗ್ನಿ ಅವರು ಅಧಿಕೃತವಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ತಾಲೂಕಿನ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಬದಲಾವಣೆ ಮಹತ್ವ ಪಡೆದುಕೊಂಡಿದ್ದು, ಇದುವರೆಗೆ ಅಂಕೋಲಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ರಾಮು ಗುನಗಿ ಅವರು ನೂತನ ಅಧಿಕಾರಿಗೆ ಕಡತಗಳನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.
ರಾಮು ಜಿ. ಅಗ್ನಿ ಅವರು ಈ ಹಿಂದೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಪಾರ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ. ಸಿಂದಗಿಯಲ್ಲಿ ತಮ್ಮ ಆಡಳಿತದ ಮೂಲಕ ಗಮನ ಸೆಳೆದಿದ್ದ ಅವರು, ಇದೀಗ ಅಂಕೋಲಾ ತಾಲೂಕಿನ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಯೋಜನೆಗಳ ಅನುಷ್ಠಾನ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.

ನೂತನ ಅಧಿಕಾರಿಗಳ ಆಗಮನದಿಂದ ತಾಲೂಕು ಆಡಳಿತ ಯಂತ್ರಕ್ಕೆ ಮತ್ತಷ್ಟು ವೇಗ ಮತ್ತು ಹೊಸ ಚೈತನ್ಯ ಸಿಗುವ ನಿರೀಕ್ಷೆಯಿದೆ.
ನೂತನವಾಗಿ ಆಡಳಿತದ ಜವಾಬ್ದಾರಿ ಸ್ವೀಕರಿಸಿದ ರಾಮು ಜಿ. ಅಗ್ನಿ ಅವರನ್ನು ಕರ್ನಾಟಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಗಿರೀಶ್ ನಾಯಕ್ ಅವರು ನೂತನ ಇ.ಒ ಅವರನ್ನು ಖುದ್ದಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ, ತಾಲೂಕಿನ ಪಂಚಾಯತ್ ಮಟ್ಟದ ಅಭಿವೃದ್ಧಿ ಕಾರ್ಯಗಳಲ್ಲಿ ಹಾಗೂ ಮುಂದಿನ ಆಡಳಿತಾತ್ಮಕ ಯೋಜನೆಗಳಿಗೆ ಸಂಘದ ವತಿಯಿಂದ ಸಂಪೂರ್ಣ ಸಹಕಾರ ಇರಲಿದೆ ಎಂದು ಭರವಸೆ ನೀಡಿ ಶುಭ ಕೋರಿದರು.

ಈ ಸೌಹಾರ್ದಯುತ ಭೇಟಿಯ ಸಂದರ್ಭದಲ್ಲಿ ಪಿಡಿಒ ಸಂಘದ ಅಂಕೋಲಾ ತಾಲೂಕು ಅಧ್ಯಕ್ಷರಾದ ಮಹದೇವ್ ಗೌಡ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಗಿರೀಶ ತಳವಾರ ಅವರು ಕೂಡ ಉಪಸ್ಥಿತರಿದ್ದರು. ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಅತ್ಯಂತ ಸುಗಮವಾಗಿ ನೆರವೇರಿದ್ದು, ತಾಲೂಕಿನ ಪ್ರಗತಿಯತ್ತ ಹೊಸ ಹೆಜ್ಜೆ ಇಡಲಾಗಿದೆ.


