ಅಂಕೋಲಾ ತಾಲೂಕಿನ ಪ್ರಸಿದ್ಧ ಬೆಳಂಬಾರ ಕಡಲ ತೀರದಲ್ಲಿ ಶನಿವಾರ ಬೃಹತ್ ಗಾತ್ರದ ಡಾಲ್ಫಿನ್ ವೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಮುದ್ರ ತೀರದತ್ತ ತೆರಳಿದಾಗ ಸ್ಥಳೀಯ ನಿವಾಸಿ ನಂದನ ಖಾರ್ವಿ ಹಾಗೂ ಸ್ಥಳೀಯ ಮೀನುಗಾರರು ಈ ದೈತ್ಯ ಜಲಚರವನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ಸುತ್ತಮುತ್ತಲಿನ ಊರಿನವರಿಗೆ ಮಾಹಿತಿಯನ್ನು ಮುಟ್ಟಿಸಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಕಡಲ ತೀರದಲ್ಲಿ ಸ್ಥಳೀಯರು ಜಮಾಯಿಸಿ ಅಂದಾಜು 8 ಅಡಿಗೂ ಹೆಚ್ಚು ಉದ್ದವಿದ್ದ ಅಪರೂಪದ ಡಾಲ್ಫಿನ್‌ನ ಕರುಣಾಜನಕ ಅಂತ್ಯವನ್ನು ಕಂಡು ವಿಷಾದ ವ್ಯಕ್ತಪಡಿಸಿದ್ದಾರೆ.

ಡಾಲ್ಫಿನ್ ಸಾವಿಗೆ ನಿಖರವಾದ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಸಮುದ್ರದಲ್ಲಿ ಉಂಟಾಗಿರುವ ಅಲೆಗಳ ತೀವ್ರ ಆರ್ಭಟಕ್ಕೆ ಸಿಲುಕಿ ದಾರಿ ತಪ್ಪಿ ಅಥವಾ ದಣಿದು ದಡಕ್ಕೆ ಬಂದು ಮೃತಪಟ್ಟಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸಮುದ್ರದಲ್ಲಿನ ಹವಾಮಾನ ವೈಪರೀತ್ಯ, ವಯೋಸಹಜ ಸಾವು, ಯಾವುದಾದರೂ ಅನಾರೋಗ್ಯ ಅಥವಾ ಸಮುದ್ರದಲ್ಲಿ ಬಂಡೆಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದೈತ್ಯ ಜಲಚರ ಪ್ರಾಣ ಕಳೆದುಕೊಂಡಿರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.
ಡಾಲ್ಫಿನ್‌ಗಳು ಭಾರತದಲ್ಲಿ ಸಂರಕ್ಷಿತ ಜಲಚರಗಳ ಪಟ್ಟಿಗೆ ಸೇರುವುದರಿಂದ, ಈ ಘಟನೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿದ ನಂತರ ನಿಖರ ಕಾರಣ ತಿಳಿಯಬೇಕಿದೆ..


