ಅಂಕೋಲಾ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಆಸ್ತಿಪಾಸ್ತಿಗಳಿಗೆ ಹಾನಿಯಾದ ಘಟನೆಗಳು ವರದಿಯಾಗುತ್ತಿವೆ. ತಾಲೂಕಿನ ಶೇಡಗೇರಿ ಗ್ರಾಮದ ಹುಲಿದೇವರವಾಡದಲ್ಲಿ ವರುಣನ ಆರ್ಭಟಕ್ಕೆ ಮನೆಯೊಂದರ ಚಾವಣಿ ಹಾಗೂ ಗೋಡೆಗಳಿಗೆ ಹಾನಿಯಾಗಿದೆ.
ಹುಲಿದೇವರವಾಡ-ಶೇಡಗೇರಿ ನಿವಾಸಿ ತಾಹಿರಾಬಿ ಅಬ್ದುಲ್ ಮುನಾಪ ಶೇಖ್ (ಮನೆ ನಂಬರ್: 921/A) ಅವರ ಮನೆಗೆ ಜುಲೈ 5ರಂದು ಸುರಿದ ವಿಪರೀತ ಗಾಳಿ – ಮಳೆಯ ಪರಿಣಾಮವಾಗಿ ಈ ಹಾನಿ ಸಂಭವಿಸಿದೆ. ಗಾಳಿ ಮಳೆಯ ರಭಸಕ್ಕೆ ಮನೆಯ ಮಾಡು (ಮೇಲ್ಛಾವಣಿ) ಹಾನಿಗೀಡಾಗಿದ್ದು, ಗೋಡೆಗಳು ಬಿರುಕುಬಿಟ್ಟಿವೆ. ಇದರಿಂದಾಗಿ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ದುಸ್ತರವಾಗಿದ್ದು, ಕುಟುಂಬವು ಆತಂಕದಲ್ಲಿ ದಿನದೂಡು ವಂತಾಗಿದೆ.

ಮಳೆಯ ತೀವ್ರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಇನ್ನಷ್ಟು ಅನಾಹುತ ಸಂಭವಿಸುವ ಮುನ್ನವೇ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಈ ಕುರಿತು ಸಂತ್ರಸ್ತರು ದಿಕ್ಕು ತೋಚದಂತಾಗಿದ್ದಾರೆ. ಹಾಗು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಾಸ್ತವಿಕ ಸ್ಥಿತಿಗತಿಗಳ ಪರಿಶೀಲನೆ ನಡೆಸಬೇಕು. ತದನಂತರ ಆಗಿರುವ ಹಾನಿಯ ಬಗ್ಗೆ ಸಮಗ್ರ ಅಂದಾಜು ವರದಿ ಸಿದ್ಧಪಡಿಸಿ, ವಿಪತ್ತು ನಿರ್ವಹಣಾ ನಿಯಮಾವಳಿಗಳ ಅಡಿಯಲ್ಲಿ ಸರ್ಕಾರದಿಂದ ಸೂಕ್ತ ಹಾಗೂ ತ್ವರಿತ ಪರಿಹಾರ ಅನುದಾನ ಬಿಡುಗಡೆ ಮಾಡಿಸಿಕೊಡಬೇಕೆಂದು ಅವರು ಈ ಮೂಲಕ ಆಗ್ರಹಿಸಿದ್ದಾರೆ..


