ಅಂಕೋಲಾ ತಾಲೂಕಿನ ರೈತರಿಗೆ 2026ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಮರುರಚಿಸಲಾದ ಬೆಳೆವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ನಿಗದಿತ ದಿನಾಂಕದೊಳಗೆ ರೈತರು ಈ ವಿಮಾ ಯೋಜನೆಗೆ ನೋಂದಾಯಿಸಿಕೊಂಡು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಇಲಾಖೆಯು ಪ್ರಕಟಣೆಯಲ್ಲಿ ಕೋರಿದೆ.
ಈ ಯೋಜನೆಯಡಿ ವಿವಿಧ ತೋಟಗಾರಿಕಾ ಬೆಳೆಗಳಿಗೆ ಪ್ರತಿ ಎಕ್ಕರೆಗೆ ವಿಮಾ ಮೊತ್ತ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತನ್ನು ನಿಗದಿಪಡಿಸಲಾಗಿದೆ. ಅಡಿಕೆ ಬೆಳೆಗೆ ಪ್ರತಿ ಎಕರೆಗೆ 51,200 ರೂ. ವಿಮಾ ಮೊತ್ತ ನಿಗದಿಪಡಿಸಿದ್ದು, ರೈತರು 2,560 ರೂ. ಕಂತು ಪಾವತಿಸಬೇಕಾಗುತ್ತದೆ. ಅಂತೆಯೇ, ಕಾಳುಮೆಣಸು ಬೆಳೆಗೆ ಪ್ರತಿ ಎಕರೆಗೆ 18,800 ರೂ. ವಿಮಾ ಮೊತ್ತವಿದ್ದು, ರೈತರು 940 ರೂ. ಕಂತನ್ನು ಕಟ್ಟಬೇಕು. ಇನ್ನು ಮಾವು ಬೆಳೆಗೆ 32,000 ರೂ. ವಿಮಾ ಮೊತ್ತವನ್ನು ನಿಗದಿಪಡಿಸಲಾಗಿದ್ದು, ಇದಕ್ಕಾಗಿ ರೈತರು 5,440 ರೂ. ವಿಮಾ ಕಂತನ್ನು ಪಾವತಿಸಬೇಕಿರುತ್ತದೆ.

ಅಂಕೋಲಾ ತಾಲೂಕಿಗೆ ‘ಇಂಡಸ್‌ಇಂಡ್ ಜನರಲ್ ಇನ್ಶೂರೆನ್ಸ್’ (IndusInd General Insurance – ಈ ಹಿಂದೆ ರಿಲಯನ್ಸ್ ಜನರಲ್ ಇನ್ಶೂರೆನ್ಸ್) ಕಂಪನಿಯು ಅಧಿಸೂಚಿತ ವಿಮಾ ಅನುಷ್ಠಾನ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಬೆಳೆ ಸಾಲ ಪಡೆದ ರೈತರು ತಮ್ಮ ಸಂಬಂಧಿತ ಬ್ಯಾಂಕುಗಳ ಮೂಲಕ ಹಾಗೂ ಬೆಳೆಸಾಲ ಪಡೆಯದ ರೈತರು ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳ ಮೂಲಕ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ರೈತರು ‘FID’ ಹೊಂದುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ, ಅವರು ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತ ರೂಪದಲ್ಲಿ ಮುಚ್ಚಳಿಕೆ ಪತ್ರವನ್ನು ಕಡ್ಡಾಯವಾಗಿ ನೀಡಬೇಕಿರುತ್ತದೆ.


