ಸಮಾಜದಲ್ಲಿ ಜೀವ ರಕ್ಷಕರಾಗಿ ಹಗಲಿರುಳು ಶ್ರಮಿಸುವ ವೈದ್ಯರ ಸೇವೆ ಅನನ್ಯವಾದದ್ದು. “ವೈದ್ಯೋ ನಾರಾಯಣೋ ಹರಿ” ಎಂಬ ಉಕ್ತಿಯಂತೆ ದೇವರ ಸ್ವರೂಪರಾಗಿರುವ ವೈದ್ಯರನ್ನು ಸ್ಮರಿಸುವ ಮತ್ತು ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವ ‘ವೈದ್ಯರ ದಿನಾಚರಣೆ’ಯ ಅಂಗವಾಗಿ, ಅಂಕೋಲಾ ತಾಲೂಕು ವೈದ್ಯಾಧಿಕಾರಿಗಳಾದ ಶ್ರೀ ಜಗದೀಶ ನಾಯಕ ಅವರನ್ನು ವಕೀಲರ ಬಳಗದ ವತಿಯಿಂದ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾಜದ ಸ್ವಾಸ್ಥ್ಯ ಕಾಪಾಡುವ ವೈದ್ಯಕೀಯ ಕ್ಷೇತ್ರ ಹಾಗೂ ಜನರಿಗೆ ನ್ಯಾಯ ದೊರಕಿಸಿಕೊಡುವ ಕಾನೂನು ವಲಯದ ನಡುವಿನ ಪರಸ್ಪರ ಗೌರವ ಮತ್ತು ಬಾಂಧವ್ಯಕ್ಕೆ ಈ ಸರಳ ಹಾಗೂ ಅರ್ಥಪೂರ್ಣ ಸಮಾರಂಭ ಸಾಕ್ಷಿಯಾಯಿತು.

ತಾಲೂಕು ವೈದ್ಯಾಧಿಕಾರಿಯಾಗಿ ಡಾ. ಜಗದೀಶ ನಾಯಕ ಅವರು ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ಜನಪರ ಸೇವೆ, ವೃತ್ತಿಪರತೆ ಹಾಗೂ ಬದ್ಧತೆಯನ್ನು ವಕೀಲರ ಬಳಗ ಈ ಸಂದರ್ಭದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿತು. ಈ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಕಾನೂನು ವಲಯದ ಪ್ರಮುಖರು ಭಾಗವಹಿಸಿ ವೈದ್ಯಕೀಯ ಸಮುದಾಯದ ಸೇವಾ ಮನೋಭಾವವನ್ನು ಸ್ಮರಿಸಿದರು.
ಸಮಾರಂಭದಲ್ಲಿ ಹಿರಿಯ ವಕೀಲರಾದ ಉಮೇಶ್ ನಾಯ್ಕ, ಉತ್ತರ ಕನ್ನಡ ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷರಾದ ನಾಗಾನಂದ ಬಂಟ, ಅಂಕೋಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷೆ ಪ್ರತಿಭಾ ನಾಯ್ಕ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಮಮತಾ ಕೆರೆಮನೆ ಅವರು ಉಪಸ್ಥಿತರಿದ್ದು, ವೈದ್ಯರ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ಇವರೊಂದಿಗೆ ಸರಕಾರಿ ಆಸ್ಪತ್ರೆಯ ಇತರ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಕೂಡ ಹಾಜರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು. ವಿಪತ್ಕಾಲದಲ್ಲಿ ಸಾರ್ವಜನಿಕರ ಬೆನ್ನೆಲುಬಾಗಿ ನಿಲ್ಲುವ ವೈದ್ಯಕೀಯ ಸಮುದಾಯದ ಶ್ರಮವನ್ನು ಈ ವೇದಿಕೆಯ ಮೂಲಕ ಕೃತಜ್ಞತೆಯಿಂದ ನೆನಪಿಸಿಕೊಳ್ಳಲಾಯಿತು.


