ಕೆನರಾ ವೆಲ್ಫೇರ್ ಟ್ರಸ್ಟಿನ ಪಿ.ಎಂ.ಹೈಸ್ಕೂಲ್ ಎನ್.ಸಿ.ಸಿ. ಘಟಕ ಮತ್ತು ಇಕೋ ಕ್ಲಬ್ ಹಾಗೂ ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿ ವತಿಯಿಂದ "ಸ್ವಭಾವ ಸ್ವಚ್ಛತೆ- ಸಂಸ್ಕಾರ ಸ್ವಚ್ಛತೆ"ಎಂಬ ಘೋಷವಾಕ್ಯದಡಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಎನ್.ಸಿ.ಸಿ. ಕೆಡೆಟ್ ಗಳು ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಸ್ವಚ್ಛತಾ ಅಭಿಯಾನಕ್ಕೆ ಕಡಲ ಜೀವ ವಿಜ್ಞಾನಿ ಕೆನರಾ ವೆಲ್ಫೇರ್ ಟ್ರಸ್ಟಿನ ಧರ್ಮದರ್ಶಿಗಳು ಡಾ. ವಿ.ಎನ್.ನಾಯಕರವರು ಚಾಲನೆ ನೀಡಿದರು. ಡಾ. ವಿ.ಎನ್.ನಾಯಕ ಅವರು ಮಾತನಾಡಿ ಪ್ರತಿಯೊಬ್ಬರು ಸ್ವಚ್ಛ ಸ್ವಭಾವವನ್ನು ಹೊಂದಿದ್ದರೆ, ಊರು-ಕೇರಿಗಳನ್ನು ಸ್ವಚ್ಛವಾಗಿಡುವಲ್ಲಿ ಯಾವುದೇ ಸಂದೇಹವಿಲ್ಲ. ಜೊತೆ ಬಗ್ಗೆ ಪ್ರತಿಯೊಬ್ಬರು ಅರಿವು ಮೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳೂ ಸಹ ಸ್ವಚ್ಛ ಸಂಸ್ಕಾರ ಹೊಂದಿ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕೆಂದರು.
ನಂತರ ವಿದ್ಯಾರ್ಥಿಗಳು ಅಂಕೋಲಾದ ಹೊನ್ನೆಗುಡಿ ಬೀಚಿಗೆ ತೆರಳಿ ಸ್ವಚ್ಛತೆಯನ್ನು ಕೈಗೊಂಡರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿ ವತಿಯಿಂದ ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕ ಚಂದ್ರಶೇಖರ ಕಡೆಮನಿ ಮತ್ತು ಲಾಯನ್ಸ್ ಅಧ್ಯಕ್ಷ ಲಾ.ದೇವಾನಂದ ಗಾಂವಕರ ಉಪಸ್ಥಿತರಿದ್ದರು. ಶಿಕ್ಷಕ ಎನ್.ಸಿ.ಸಿ. ಕಮಾಂಡರ್ ಜಿ.ಆರ್.ತಾಂಡೇಲ ಅವರು ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಶಿಕ್ಷಕ ಜಿ. ಎಸ್.ನಾಯ್ಕ ಅವರು ವಂದಿಸಿದರು. ಸ್ವಚ್ಛತಾ ಅಭಿಯಾನದಲ್ಲಿ ಎನ್. ಸಿ. ಸಿ. ಕೆಡೆಟಗಳು ಮತ್ತು ಇಕೋ ಕ್ಲಬ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಕಾಸ ವಾಹಿನಿ ವರದಿ