ಬಿನ್ ಶೇತ್ಕಿ ಪರಿವರ್ತಿಸಲು ಅಧಿಕಾರಿಗಳಿಂದಲೇ ಅಡ್ಡಿ: ಸಕಾರಣವಿಲ್ಲದೆ ಅರ್ಜಿಯನ್ನು ವಿಲೇ ಗೊಳಿಸುತ್ತಿರುವ ಕುಮಟಾ ಸಹಾಯಕ ಆಯುಕ್ತರ ವಿರುದ್ಧ ಕೇಳಿ ಬಂದ ಆರೋಪ....! ಸೂಕ್ತ ಕ್ರಮ ಕೈಗೊಳ್ಳಲು ಶಾಸಕರಿಗೆ ಮತ್ತು ಸಚಿವರಿಗೆ ಆಗ್ರಹಿಸಿದ ಖ್ಯಾತ ನ್ಯಾಯವಾದಿ - ನಾಗಾನಂದ ಬಂಟ್ ಅಂಕೋಲಾ.


19 Sep 2024, 09:12 am, 356 reads

ಸಾರ್ವಜನಿಕರು ಒಂದು ಸೂರನ್ನು ಕಟ್ಟಿಕೊಳ್ಳುವ ಕನಸಿಗಾಗಿಯೋ ಅಥವಾ ಮನೆ ಕಟ್ಟುವ ಉದ್ದೇಶದಿಂದ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಲೋ ಅಥವಾ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಯಾಗಲು ತಮ್ಮ ಶೇತ್ಕಿ ಜಮೀನುಗಳನ್ನು ಬಿನ್ ಶೇತ್ಕಿಯಾಗಿ ಪರಿವರ್ತಿಸಲು ಬಯಸಿ ಅಪಾರ ಹಣವನ್ನು ಖರ್ಚು ಮಾಡಿ ಅನೇಕ ದಾಖಲೆಗಳನ್ನು ಕೂಡಿಸಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಅಲ್ಲದೇ ಅರ್ಜಿಯೊಂದಿಗೆ ಅವಶ್ಯಕ ಧಾಖಲೆಗಳನ್ನೂ ಇಟ್ಟು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸುತ್ತಾರೆ. 

ಅಂತಹ ಅರ್ಜಿಗಳು ಆನ್ ಲೈನ್ ನಲ್ಲಿಯೇ ವಿವಿಧ ಇಲಾಖೆಗಳಾದ ಸಿಆರ್ ಝೆಡ್, ನಗರ ಯೋಜನಾ ಇಲಾಖೆ, ಸಹಾಯಕ ಕಮೀಷ್ನರ್ ಮುಂತಾದ ಇಲಾಖೆಗಳ ಅಭಿಪ್ರಾಯ ಕೋರಿ ಕಳುಹಿಸಲಾಗುತ್ತದೆ. ಇಲಾಖೆಗಳು ನಿಗದಿತ ಅವಧಿಯಲ್ಲಿಯೇ ತಮ್ಮ ಅಭಿಪ್ರಾಯ ಸಲ್ಲಿಸಬೇಕಾಗುತ್ತದೆ. ಅನೇಕ ಇಲಾಖೆಗಳು ಸ್ಥಳ ಪರಿಶೀಲಿಸಿ ತಮ್ಮ ವರದಿಯನ್ನು ನೀಡುತ್ತವೆ. ಅಂತೆಯೇ ಆಯಾ ಕಂದಾಯ ನಿರೀಕ್ಷಕರು, ತಹಶೀಲ್ದಾರರು, ಸಿ ಆರ್ ಝೆಢ್, ನಗರ ಯೋಜನೆ ಇಲಾಖೆ ಅಧಿಕಾರಿಗಳು ಬಿನ್ ಶೇತ್ಕಿ ಪರಿವರ್ತಿಸುವ ಜಮೀನಿಗೆ ಖುದ್ದಾಗಿ ಭೇಟಿ ನೀಡಿ ಸಂಪರ್ಕ ರಸ್ತೆ ಇರುವ ಬಗ್ಗೆ ಪರಿಶೀಲಿಸಿ ತಮ್ಮ ವರದಿಯನ್ನು ಸಲ್ಲಿಸುತ್ತಾರೆ. 


ಆದರೆ ಸಹಾಯಕ ಕಮೀಷನರ್ ಇಲಾಖೆಯವರು ಯಾವುದೇ ಸ್ಥಳ ತಪಾಸಣೆ ನಡೆಸದೇ ಕೇವಲ ನಾಮಕಾವಾಸ್ತೇ ವರದಿ ನೀಡಿ ಸಕಾರಣವಿಲ್ಲದೇ ಬಿನ್ ಶೇತ್ಕಿ ಅರ್ಜಿಯನ್ನು ವಿಲೇಗೊಳಿಸುತ್ತಿರುವುದು ಸಾರ್ವಜನಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಾರ್ವಜನಿಕರು ಸರಕಾರದ ಕಾನೂನು ಪಾಲಿಸುವ ಸಲುವಾಗಿ ಇಲ್ಲವೇ ವಿವಿಧ ಕಾರಣಗಳಿಗಾಗಿ ಜಮೀನನ್ನು ಬಿನ್ ಶೇತ್ಕಿ ಪರಿವರ್ತಿಸಲು ಬಯಸಿದರೆ ಅಧಿಕಾರಿಗಳ ಅಸಡ್ಡೆಯಿಂದ ತೊಂದರೆಗೆ ಒಳಗಾಗಬೇಕಾಗಿದೆ. ಅಲ್ಲದೇ ಅರ್ಜಿಯನ್ನು ವಿಲೇ ಮಾಡುವಾಗ ಬಿನ್ ಶೇತ್ಕಿ ಅರ್ಜಿಯೊಂದಿಗೆ ರಸ್ತೆ ದೃಢೀಕರಣ ಪ್ರಮಾಣಪತ್ರ ಲಗತ್ತಿಸಬೇಕು ಎಂಬ ಹೊಸ ಕಾನೂನು ಜಾರಿಗೆ ತಂದಿರುವುದು ಆಶ್ಚರ್ಯಕರವಾಗಿದೆ. ಏಕೆಂದರೆ ಸ್ಥಳ ಪರಿಶೀಲನೆ ನಡೆಸುವ ಆಯಾ ತಹಸೀಲ್ದಾರರು ತಮ್ಮ ವರದಿಯಲ್ಲಿ ಸಂಪರ್ಕ ರಸ್ತೆ ಇರುವ ಬಗ್ಗೆ ಪೋಟೋಗಳೊಂದಿಗೆ ಎಲ್ಲಾ ಅಂಶಗಳನ್ನು ನಮೂದಿಸಿದ್ದರೂ ಸಹ ಕೇವಲ ಸಾರ್ವಜನಿಕರಿಗೆ ತೊಂದರೆ‌ ಕೊಡಲು ಅರ್ಜಿಯನ್ನು ವಿಲೆಗೊಳಿಸುತ್ತಿರುವುದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ. 

ಈ ಬಗ್ಗೆ ಆಕ್ಷೇಪ ಎತ್ತಿರುವ ಅಂಕೋಲಾದ ನ್ಯಾಯವಾದಿ ನಾಗಾನಂದ ಐ. ಬಂಟ ಈ ಬಗ್ಗೆ ಕಾರವಾರ ಅಂಕೋಲಾ ಶಾಸಕರಾದ ಸತೀಶ ಸೈಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜನರು ತಮ್ಮ ಅಮೂಲ್ಯ ಸಮಯ ಹಾಗೂ ಹಣವನ್ನು ವ್ಯಯಿಸಿ ಅರ್ಜಿಯನ್ನು ದಾಖಲಿಸಿದರೆ ಅಧಿಕಾರಿಗಳ ಅಸಡ್ಡೆಯಿಂದ ತೊಂದರೆಗೆ ಒಳಗಾಗಬೇಕಾಗಿದೆ ಎಂದು ತಿಳಿಸಿ ಶಾಸಕರು ಮತ್ತು ಉಸ್ತುವಾರಿ ಸಚಿವರು ಸಾರ್ವಜನಿಕರಿಗೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.


ವರದಿ: ಕಿರಣ ಚಂದ್ರಹಾಸ ಗಾಂವಕರ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: