ನಕಲಿ ಫೇಸಬುಕ್ ಖಾತೆ ಸೃಷ್ಟಿಸಿ ಆರ್ಥಿಕ ನೆರವು ಯಾಚನೆ : ಪೊಲೀಸರ ಹೆಸರಿನಲ್ಲಿ ವಂಚನೆ.


06 Aug 2024, 11:15 pm, 404 reads


ಕಾರವಾರ : ಕಳೆದ ಒಂದು ವಾರದಿಂದ ನಿರಂತರವಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರಿನಲ್ಲಿ ಫೇಸ್ಬುಕ್ ನಲ್ಲಿ ನಕಲಿ ಖಾತೆಯನ್ನು ರಚಿಸಿ ಜನರಿಂದ ಆರ್ಥಿಕ ನೆರವು ಯಾಚಿಸಿ ವಂಚನೆ ನಡೆಸುತ್ತಿದ್ದು. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಎಸ್.ಪಿ ಸಾಹೇಬರು ತಮ್ಮ ಒರಿಜಿನಲ್ ಫೇಸ್ಬುಕ್ ಖಾತೆಯಲ್ಲಿ ಸಾರ್ವಜನಿಕರಿಗೆ ಸಂದೇಶ ರವಾನಿಸಿದ್ದಾರೆ.


SP Karwar ಫೇಸ್ಬುಕ್ ನ ಮೂಲ ಡಿಪಿ ಫೋಟೋವನ್ನು ನಕಲು ಮಾಡಿ ಖಾತೆ ತೆರೆದು ಸಂಪರ್ಕದಲ್ಲಿರುವ ಗೆಳೆಯರಿಗೆ ಫ್ರೆಂಡ್ ರಿಕ್ವೆಸ್ಟ್, ಭಾವನಾತ್ಮಕ ಸಂದೇಶ ಕಳುಹಿಸಿ ಹಣ ವರ್ಗಾಯಿಸುವಂತೆ ಕೋರುತ್ತಿರುವ ಪ್ರಕರಣಗಳು ನಡೆಯುತ್ತಿದೆ. ಇಂತಹ ಸೈಬರ್ ವಂಚಕರ ಬಗ್ಗೆ ಸಾರ್ವಜನಿಕರು ಜಾಗೂರುಕರಾಗಿರಬೇಕು. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಪ್ರಕರಣ ದಾಖಲಿಸುವ ಕ್ರಮ ಜಾರಿಯಲ್ಲಿದೆ ಎಂದು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಶ್ರೀ ನಾರಾಯಣ ಎಂ. ಐ.ಪಿ.ಎಸ್ ಪೊಲೀಸ್ ವರಿಷ್ಠಾಧಿಕಾರಿಗಳು ಉತ್ತರ ಕನ್ನಡ ಕಾರವಾರ ರವರು ಪ್ರಕಟಿಸಿದ್ದಾರೆ.



ನಿರಂತರ ವಂಚನೆಗೆ ಯತ್ನ..!

ಆನ್ಲೈನ್ ವಂಚಕರು ನಿರಂತರವಾಗಿ SP Karwar ಹೆಸರಿನಲ್ಲಿ ಸಿದ್ದಪಡಿಸಿದ ನಕಲಿ ಫೇಸ್ಬುಕ್ ಖಾತೆಯ ಮೆಸೆಂಜರ್ ನ ಮೂಲಕ ಪರಿಚಯಸ್ತರು ಗೆಳೆಯರೊಂದಿಗೆ ಕನ್ನಡದಲ್ಲಿ ಚಾಟಿಂಗ್ ಆರಂಭಿಸಿ ಅನಂತರ ಹಣ ಕಳಿಸಿಕೊಡಲು ಕೇಳಿಕೊಂಡಿರುವುದು ಗೊತ್ತಾಗಿದೆ. ರಾಘವೇಂದ್ರ ನಾಯ್ಕ ಎಂಬುವರಿಗೆ ಬರೋಬ್ಬರಿ 75000 ಹಣಕ್ಕೆ ಎಸ್.ಪಿ ಸಾಹೇಬರ ನಕಲಿ ಅಕೌಂಟಿನಿಂದ ಡಿಮ್ಯಾಂಡ್ ಮಾಡಿದ್ದಾರೆ. ನಿರಂತರವಾಗಿ ನಕಲಿ ಖಾತೆ ಸೃಷ್ಟಿಸಿ ಮೆಸೇಜ್ ಮಾಡುತ್ತಿದ್ದ ಸೈಬರ್ ವಂಚಕರೊಂದಿಗೆ ರಾಘವೇಂದ್ರ ನಾಯ್ಕ ಚಾಟಿಂಗ್ ಮಾಡುತ್ತಲೇ ಸೈಬರ್ ವಂಚಕರ ಬಲೆಗೆ ಬೀಳದೆ ಸರಿಯಾಗಿ ಚಳ್ಳೆಹಣ್ಣು ತಿನಿಸಿದ್ದಾರೆ. ರಾಘವೇಂದ್ರ ಅವರು ಸೈಬರ್ ವಂಚಕರೊಂದಿಗೆ ಚಾಟಿಂಗ್ ಮಾಡಿದ ಸ್ಕ್ರೀನ್ ಶಾಟ್ ನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇವರಷ್ಟೇ ಅಲ್ಲದೆ ನಾಗೇಶ್ ಗೌಡ,ವಿಶಿ ಶೇಟ್ ಮುಂತಾದವರು ಕೂಡ ತಮಗೂ ಇತರ ಎಸ್.ಪಿ ಅವರ ಫೇಸ್ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ ಹಣಕ್ಕೂ ಬೇಡಿಕೆ ಇಟ್ಟಿದ್ದಾರೆ. ಹಾಗೂ ಚಾಟಿಂಗ್ ಮಾಡಿರುವ ಮೆಸೇಜನ್ನು ಫೇಸ್ಬುಕ್ ಕಾಮೆಂಟ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ಮಧ್ಯೆ ರಾಘವ ನಾಯ್ಕ ಎಂಬುವರು ಕಾಮೆಂಟ್ ಮಾಡಿ, "ಎಸ್.ಪಿ ಸಾಹೇಬರ ಹೆಸರಲ್ಲಿ ಫೇಕ್ ಅಕೌಂಟ್ ಆಗಿದೆ ಎಂದರೆ ಜನಸಾಮಾನ್ಯರ ಪಾಡು ಏನು? ಸೈಬರ್ ವಂಚಕರ ಹುಡುಕಿ ತಂದು ಶಿಕ್ಷೆ ನೀಡಿ ಆಡಳಿತದ ಮೇಲೆ ವಿಶ್ವಾಸ ಇರುವಂತೆ ನೋಡಿಕೊಳ್ಳಿ" ಎಂದು ಕಳವಳಪಟ್ಟಿದ್ದಾರೆ.


 ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಡುವುದು, ಮೊನ್ನೆ ಶಾಲಾ ಕಾಲೇಜುಗಳಿಗೆ ರಜೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶವನ್ನು ತಿದ್ದುಪಡಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವುದು, ನಕಲಿ ಫೇಸ್ಬುಕ್ ಖಾತೆಗಳನ್ನು ಸೃಷ್ಟಿಸುವುದು, ಹಾಗೂ ಹಣಕ್ಕಾಗಿ ಬೇಡಿಕೆ ಇಡುವುದು ಮುಂದುವರೆದಿದ್ದು ಕೂಡಲೇ ಸಮಾಜಘಾತಕ ಶಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಶೀಘ್ರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.


ವರದಿ: 

ಕಿರಣ ಚಂದ್ರಹಾಸ ಗಾಂವಕರ

ಅಂಕೋಲಾ

ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: