ಅಂಕೋಲಾದ ರೇಣುಕಾ ಹೊನ್ನಪ್ಪ ನಾಯಕ ಅವರಿಗೆ ಒಲಿದು ಬಂತು ಉತ್ತರ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ... ಬಹುಮುಖಿ ವ್ಯಕ್ತಿತ್ವಕ್ಕೆ ಸಂದ ಗೌರವ.


04 Sep 2024, 01:22 pm, 926 reads

ಅಂಕೋಲಾ: ಈ ಬಾರಿಯ ಉತ್ತರ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದವರಲ್ಲಿ ಒಬ್ಬರಾದ ಅಂಕೋಲಾ ತಾಲೂಕಿನ ಬೆಳಸೆ ನಂ ೨ ಶಾಲೆಯ ಶಿಕ್ಷಕಿ ಶ್ರೀಮತಿ ರೇಣುಕಾ ಹೊನ್ನಪ್ಪ ನಾಯಕ ಇವರು ಈಗಾಗಲೇ ಉತ್ತಮ ಕವಿ, ಲೇಖಕಿಯಾಗಿ ರೇಣುಕಾ ರಮಾನಂದ ಎಂಬ ಹೆಸರಿನಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಿತ ಇನ್ನೂ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

ಇವರ ಮೂರು ಕವಿತೆ ಮತ್ತು ಒಂದು ಲೇಖನ ಬೆಂಗಳೂರು ಮಂಗಳೂರು ಮೈಸೂರು ಹಾಗೂ ಧಾರವಾಡ ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿವೆ. ಇಟಲಿಯ ಪಿಯಾಸೆಂಜಾ ಮ್ಯೂಸಿಯಂನಲ್ಲಿ ಇವರ ಕನ್ನಡ ಕವಿತೆ ದಾಖಲಾಗಿದೆ. ಹಾಲಕ್ಕಿಗಳ ಭಾಷೆಯಲ್ಲಿ ಬರೆದ ಅವರದೇ ಜೀವನದ ಇವರ ಕವಿತೆ ಎರಡು ಕಾಲೇಜುಗಳಿಗೆ ಪಠ್ಯವಾಗಿದೆ.. 


ಓರ್ವ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಇಷ್ಟೆಲ್ಲ ಸಾಧನೆ ಮಾಡಿರುವ ರೇಣುಕಾರು ತನ್ನ ವೃತ್ತಿಯಾದ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಅಪರೂಪದ ಸಾಧಕಿಯಾಗಿದ್ದಾರೆ.. ಹೊಸ ಹೊಸ ಕಲಿಕಾ ವಿಧಾನಗಳ ಮೂಲಕ ವಿದ್ಯಾರ್ಥಿಸ್ನೇಹಿ ಕಲಿಕಾ ವಾತಾವರಣ ರೂಪಿಸಿ ಮಾದರಿ ಶಿಕ್ಷಕಿಯಾಗಿದ್ದಾರೆ.. ಮೂವತ್ತು ವರ್ಷ ಸಿ ವಲಯದ ಹಳ್ಳಿ ಶಾಲೆಗಳಲ್ಲಿ ಕೆಲಸ ಮಾಡಿರುವ ರೇಣುಕಾರು ಹಲವು ಪತ್ರಿಕೆಗಳಿಗೆ ಶೈಕ್ಷಣಿಕ ಲೇಖನಗಳನ್ನೂ ಬರೆದಿದ್ದಾರೆ.. ಹಿಂದಿನ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರು ರೇಣುಕಾ ಅವರು ಕೊರೋನಾ ಕಾಲದಲ್ಲಿ ಮಕ್ಕಳಿಗೆ ನೀಡಿದ ವಿಶೇಷ ಕಾಳಜಿ ಹಾಗೂ ಶಿಕ್ಷಣದ ಕುರಿತು ಅವರಿಗೆ ಫೋನ್ ಮಾಡಿ ಅಭಿನಂದಿಸಿದ್ದಾರೆ. ಹಾಗೂ ತಮ್ಮ ಟ್ವಿಟರ್ ಹಾಗೂ ಪೇಸಬುಕ್ ಖಾತೆಯಲ್ಲಿ ರೇಣುಕಾರ ಬಗ್ಗೆ ಬರೆದಿದ್ದಾರೆ.

ಶಾಲೆಯ ಭೌತಿಕ ಹಾಗೂ ಶೈಕ್ಷಣಿಕ ಸುಧಾರಣೆ ರೇಣುಕಾರ ಗುರಿಯಾಗಿದ್ದು ಪ್ರತಿವರ್ಷ ಮಕ್ಕಳಿಗೆ ಸ್ಕೂಲಬ್ಯಾಗ್, ಛತ್ರಿ, ನೋಟಬುಕ್ ಮುಂತಾವುಗಳನ್ನು ಹಲವು ವರ್ಷಗಳಿಂದ ದಾನಿಗಳಿಂದ ಕೊಡಿಸುತ್ತಾ ಬಂದಿದ್ದಾರೆ.. ಶಾಲೆಗೆ ಕಪಾಟುಗಳು, ಪೇಂಟಿಂಗ್, ನಕಾಶೆ,ಪೀಠೋಪಕರಣಗಳು ಮುಂತಾದ ಸೌಲಭ್ಯವನ್ನೂ ಸಮುದಾಯದಿಂದ ಪಡೆದಿರುವ ರೇಣುಕಾರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿರುವುದು ಅವರ ಬಹುಮುಖಿ ವ್ಯಕ್ತಿತ್ವಕ್ಕೆ ಕೊಟ್ಟ ಒಂದು ಗೌರವವಾಗಿದೆ.


ವಿಕಾಸ ವಾಹಿನಿ ವರದಿ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: