ಅಂಕೋಲಾ: ಮಗುವಿನಂತೆ ಮುಗ್ದ ಸ್ವಭಾವದ ಹೃದಯವಂತ ರಾಜು ತಾಂಡೇಲ್ ಅವರ ಅಕಾಲಿಕ ನಿಧನ ಸಮಾಜಕ್ಕೆ ನೋವು ತಂದಿದೆ. ಅವರ ನೆನಪು ನೀರಿನಲ್ಲಿನ ಮೀನುಗಳ ರೂಪದಲ್ಲಿ ಲೀನವಾಗುವಂತೆ ಶ್ರದ್ಧಾಂಜಲಿ ಅರ್ಪಿಸತ್ತಿರುವುದು ಮಾದರಿಯಾಗಿದೆ ಎಂದು ಹಿರಿಯ ವಕೀಲ ಸಾಮಾಜಿಕ ಕಾರ್ಯಕರ್ತ ಉಮೇಶ್ ನಾಯ್ಕ ಹೇಳಿದರು. ಅವರು ಶುಕ್ರವಾರ ಸಂಜೆ ತಾಲ್ಲೂಕಿನ ವಂದಿಗೆ ಹನುಮಟ್ಟದಲ್ಲಿ ಮೀನುಗಾರ ಮುಖಂಡರು ಮತ್ತು ವಿವಿಧ ಸಮುದಾಯದವರು ಆಯೋಜಿಸಿದ್ದ ಕೆರೆಯ ನೀರಿನಲ್ಲಿ ಮೀನು ಬಿಡುವುದರ ಮೂಲಕ ರಾಜು ತಾಂಡೇಲರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
ಪುನೀತ್ ರಾಜಕುಮಾರ್ ಮಾದರಿಯಲ್ಲಿ ರಾಜಣ್ಣ ಜಿಲ್ಲೆಯಲ್ಲಿ ಕೊಡುಗೈ ದಾನಿ ಎಂದು ಹೆಸರಾಗಿದ್ದರು. ನನ್ನ ಬಳಿ ಎರಡು ದಾಂಪತ್ಯ ವಿವಾದ ಪ್ರಕರಣವನ್ನು ವಕಾಲತ್ತು ವಹಿಸಲು ನೀಡಿದ್ದರು ಆದರೆ ಯಾವುದೇ ಕಾರಣಕ್ಕೂ ಗಂಡ ಹೆಂಡತಿ ಬೇರ್ಪಡುವಂತಿಲ್ಲ ಎನ್ನುವ ಷರತ್ತು ವಿಧಿಸಿದ್ದರು. ಮಾನವೀಯ ಸಮಾಜಮುಖಿ ಚಿಂತನೆಗಳು ಮತ್ತು ಕಾರ್ಯಗಳ ಮೂಲಕ ಅವರು ಸದಾ ನೆನಪಿನಲ್ಲಿ ಇರುತ್ತಾರೆ. ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದ್ದು, ಉತ್ತಮ ಕಾರ್ಯಗಳಿಗೆ ಸಮಾಜ ಎಂದಿಗೂ ನಮ್ಮನ್ನು ನೆನಪಿಟ್ಟುಕೊಳ್ಳುತ್ತದೆ ಎಂದರು.
ಮೀನುಗಾರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹರಿಹರ ಹರಿಕಂತ್ರ ಮುಂದಾಳತ್ವದಲ್ಲಿ ವಿದ್ಯಾರ್ಥಿ ಪ್ರತೀಕ್ ಗಣೇಶ ನಾಯ್ಕ ಮತ್ತು ವಿವಿಧ ಸಮುದಾಯದ ಪ್ರಮುಖರು ಮತ್ತು ರಾಜು ತಾಂಡೇಲ್ ಅಭಿಮಾನಿಗಳು ಕೆರೆಗೆ ಮೀನನ್ನು ಬಿಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಮತ್ತು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ದಿ ಸಂಘದ ಮಾರುತಿ ಹರಿಕಂತ್ರ : ರಾಜು ತಾಂಡೇಲ್ ಸಮಾಜದ ಬಗ್ಗೆ ದೂರ ದೃಷ್ಟಿ ಉಳ್ಳವರಾಗಿದ್ದರು. ಮೀನುಗಾರಿಕೆಯ ಮೂಲಕವೇ ಉನ್ನತ ಸ್ಥಾನಕ್ಕೇರಿ ಸಮಾಜದಲ್ಲಿ ಗುರುತಿಸಿಕೊಂಡಿದ್ದವರು. ಹಾಗಾಗಿ ಕೆರೆಗೆ ಮೀನು ಬಿಡುವ ಮೂಲಕ ಅವರ ನಿಧನದ ನಂತರವೂ ಮೀನಿನೊಂದಿಗೆ ಅವರ ನೆನಪು ಮಾಸದಿರಲಿ ಎನ್ನುವ ಉದ್ದೇಶಕ್ಕೆ ಈ ರೀತಿ ವಿನೂತನವಾಗಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ ಎಂದರು.
ಪುರಸಭೆಯ ಸ್ಥಳೀಯ ವಾರ್ಡ್ ಸದಸ್ಯೆ ರೇಖಾ ಗಾಂವಕರ, ನಿವೃತ್ತ ಉಪ ತಹಶೀಲ್ದಾರ ಸುರೇಶ್ ಹರಿಕಂತ್ರ, ನಿವ್ರತ್ತ ಉಪನ್ಯಾಸಕ ರಾಮಾ ಶಿರೂರು, ಮೀನುಗಾರ ಪ್ರಮುಖ ಹೂವಾ ಖಂಡೇಕರ, ಗುತ್ತಿಗೆದಾರರಾದ ನಾಗೇಶ ನಾಯ್ಕ, ಗಣೇಶ ನಾಯ್ಕ, ಉಪೇಂದ್ರ ನಾಯ್ಕ, ಆಟೋ ಯೂನಿಯನ್ ಅಧ್ಯಕ್ಷ ಸಂಜೀವ ಬಲೆಗಾರ, ಸಂಜಯ್ ಬೊಬ್ರುಕರ್, ಸಂದೀಪ ಹರಿಕಂತ್ರ, ಶರತ್ ನಾಯ್ಕ, ಪವನ ನಾಯ್ಕ, ನಾಗೇಂದ್ರ ನಾಯ್ಕ, ಪ್ರಸನ್ನ ನಾಯ್ಕ, ಸುಹಾಸ್ ನಾಯ್ಕ ಮತ್ತಿತರರು ಇದ್ದರು. ಶಿಕ್ಷಕ ಜಿ ಆರ್ ತಾಂಡೇಲ್ ವಂದಿಸಿದರು.