ಯಮಪುರಿಗೆ ನೇರವಾಗಿ ಟಿಕೆಟ್ ಪಡೆಯಲು ಅಂಕೋಲಾ ತಾಲೂಕಿನ ತೆಂಕಣಕೇರಿ -ಪೂಜಗೇರಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದ ರಸ್ತೆಗೆ ಬನ್ನಿ


09 Aug 2024, 03:44 pm, 701 reads

ಅಂಕೋಲಾ : (ಆ.9) ಅಂಕೋಲಾ ತಾಲೂಕಿನಿಂದ ಮಂಜಗುಣಿಗೆ ಸಾಗುವ ಲೋಕೋಪಯೋಗಿ ಇಲಾಖೆಯ ರಸ್ತೆಯು ತೆಂಕಣಕೇರಿ ಮತ್ತು ಪೂಜಗೇರಿ ಗ್ರಾಮಗಳ ಮಧ್ಯದಲ್ಲಿ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆಯ ಸ್ಥಿತಿಯು ಹೆಚ್ಚು ಅಪಾಯಕಾರಿಯಾಗಿದೆ. ರಸ್ತೆಯ ಮಧ್ಯೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣ ಆಗುತ್ತಿದೆ.

ರಸ್ತೆ ನಿರ್ವಹಣೆ ಮತ್ತು ದುರಸ್ತಿ ಹೊಣೆ ಹೊತ್ತಿರುವ ಅಂಕೋಲಾದ ಲೋಕೋಪಯೋಗಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮೊನ್ನೆ ಮೊನ್ನೆ ಒಬ್ಬ ಬೈಕ್ ಸವಾರ ಈ ಹೊಂಡ ಮಯ ರಸ್ತೆಯಲ್ಲಿ ಬಿದ್ದು ನೇರವಾಗಿ ಲೋಕೋಪಯೋಗಿ ಇಲಾಖೆಗೆ ತೆರಳಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಹೋದ ವರ್ಷ ಮಾಡಿದ ರಸ್ತೆ ಅಷ್ಟು ಬೇಗ ಹಾಳಾಗಲು ಕಾರಣವೇನು?

ಹೋದ ವರ್ಷ ಮಾಡಿದ ಈ ಡಾಂಬರ ರಸ್ತೆ ವರ್ಷದೊಳಗೆ ಅದೋಗತಿಗೆ ಬಂದಿದೆ. ಹೋದ ವರ್ಷ ಹೊಸ ರಸ್ತೆ ಎಂದು ಹಳೆಯ ರಸ್ತೆಯನ್ನೇ ದುರಸ್ತಿ ಮಾಡಿ ಹೋಗಿದ್ದಾರೆಯೋ ಎಂದು ಅನುಮಾನಗಳು ದಟ್ಟವಾಗಿ ಪ್ರಶ್ನೆ ಕಾಡ ತೊಡಗಿದೆ.

ಶಾಲೆ ಮಕ್ಕಳು, ಪಾದಾಚಾರಿಗಳು ನಡೆಯಲಾಗದ ಸ್ಥಿತಿಯಲ್ಲಿ ರಸ್ತೆಯ ದುಸ್ಥಿತಿ

ಈ ರಸ್ತೆಯಿಂದ ಪ್ರತಿನಿತ್ಯ ಸಾವಿರಾರು ಮಕ್ಕಳು, ಕಾಲೇಜ್ ವಿದ್ಯಾರ್ಥಿಗಳು, ವಯಸ್ಸಾದವರು ಸಾಗುತ್ತಾರೆ. ಬೈಕ್ ಮೇಲೆ ಹೋದರಂತೂ ಮುಗಿಯಿತು ಗುಂಡಿಯನ್ನು ತಪ್ಪಿಸಲು ಹೋಗಿ ಬೈಕ್

ಸವಾರರು ಕೈ ಕಾಲು ಮುರಿದುಕೊಂಡು ಆಸ್ಪತ್ರೆಗೆ ಸೇರುವ ಪರಿಸ್ಥಿತಿಯು ಎದುರಾಗಿದೆ. ಪಾದಾಚಾರಿಗಳು ಕೂಡ ನಡೆಯಲಾಗದ ಸ್ಥಿತಿಯಲ್ಲಿ ರಸ್ತೆಯ ಹೆಜ್ಜೆ ಹೆಜ್ಜೆಗೂ ಗುಂಡಿಗಳು ಹೆಚ್ಚಾಗಿವೆ.

ರಸ್ತೆಯನ್ನು ದುರಸ್ತಿ ಮಾಡುವುದಾಗಿ ದೊಡ್ಡ ದೊಡ್ಡ ಕಲ್ಲನ್ನು ರಸ್ತೆ ಬದಿಯಲ್ಲಿ ಹಾಕಿದ್ದು ಯಾಕೆ?



ಕಳೆದ ಕೆಲವು ದಿನಗಳ ಹಿಂದೆ ಪತ್ರಕರ್ತರು ಸದರಿ ಸಮಸ್ಯೆಯ ಬಗ್ಗೆ ತಮ್ಮ ತಮ್ಮ ಪತ್ರಿಕೆಯಲ್ಲಿ ಹದಗೆಟ್ಟ ರಸ್ತೆಯ ಬಗ್ಗೆ ವರದಿ ಮಾಡಿದ್ದರು. ಅಂದು ನೆಪ ಮಾತ್ರಕ್ಕೆ ಬಂದ ಅಧಿಕಾರಿಗಳು ಜಲ್ಲಿ ಕಲ್ಲುಗಳನ್ನು, ಬಿಳಿಯ ಸ್ವಲ್ಪ ದೊಡ್ಡ ಪ್ರಮಾಣದ ಕಲ್ಲುಗಳನ್ನು ರಸ್ತೆಯ ಪಕ್ಕದಲ್ಲಿ ಇರಿಸಿದ್ದರು. ಕೆಲವು ಕಡೆ ರಸ್ತೆಯಲ್ಲಿ ಬಿದ್ದಿರುವ ಹೊಂಡಕ್ಕೆ ಜಲ್ಲಿ ಕಲ್ಲುಗಳನ್ನು ಹಾಕಿ ತೇಪೆ ಹಚ್ಚುವ ನಾಟಕವನ್ನು ಮಾಡಿದ್ದರು. ಇದೀಗ ತೇಪೆ ಹಚ್ಚಿದ ಭಾಗ ಉಳಿದಿಲ್ಲ. ದೊಡ್ಡ ದೊಡ್ಡ ಬಿಳಿಯ ಕಲ್ಲುಗಳು ರಸ್ತೆಯ ಪಕ್ಕ ಹಾಗೆ ಇದ್ದು ಆ ಕಲ್ಲನ್ನು ರಸ್ತೆ ಬದಿಯಲ್ಲಿ ಕಾಂಪೌಂಡ್ ಮಾಡಲು ತಂದಿದ್ದಾರಿಯೋ ಏನೋ ಎಂದು ಜನಸಾಮಾನ್ಯರು ವ್ಯಂಗ್ಯ ಮಾಡಿದ್ದಾರೆ.

ಕಳಪೆ ರಸ್ತೆ ಮಾಡಿದರೆ ಲೋಕೋಪಯೋಗಿ ಇಲಾಖೆಯ ಟೆಂಡರ್ ಪಡೆದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ..!

ತೆಂಕಣಕೇರಿಯಿಂದ ಪೂಜಗೇರಿ ಗ್ರಾಮದ ಮಧ್ಯದಲ್ಲಿ 1 ಕಿಲೋಮಿಟರ್ ನಷ್ಟು ರಸ್ತೆ ಮಾತ್ರ ಸಂಪೂರ್ಣ ಹದಗೆಟ್ಟಿದ್ದು, ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ರಸ್ತೆ ಹದಗೆಟ್ಟಾಗ ಅದನ್ನು ಸರಿಯಾಗಿ ದುರಸ್ತಿ ಮಾಡುವಲ್ಲಿ ಲೋಕೋಪಯೋಗಿ ಇಲಾಖೆ ಟೆಂಡರ್ ಪಡೆದ ಗುತ್ತಿಗೆದಾರನೂ ಕೂಡ ವಿಫಲನಾಗಿದ್ದಾನೆ. ಕೊಡಲೇ ಸದರಿ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಅನಿವಾರ್ಯತೆ ಅವಶ್ಯಕತೆ ತುಂಬಾ ಇದೆ.

ಶಿಥಿಲಾವಸ್ಥೆಯಲ್ಲಿರುವ ಪೂಜಗೇರಿ ಸೇತುವೆ..!

ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುವ ಪೂಜಗೇರಿಯ ಚಿಕ್ಕ ಸೇತುವೆ ಶಿಥಿಲಾವಸ್ಥೆಲ್ಲಿದೆ ಈ ಸೇತುವೆ ಯಾವಾಗಾದರೂ ಬೀಳಬಹುದು ಎಂದು ಸಾರ್ವಜನಿಕರು ಆತಂಕದಲ್ಲಿದ್ದಾರೆ. ಈ ಸೇತುವೆಯೊಳಗೆ ಬಸ್ ಬಂದಾಗ ಅಕ್ಕ ಪಕ್ಕದಲ್ಲಿ ಪ್ರಯಾಣಿಕರು ನಿಲ್ಲುವ ಸ್ಥಿತಿ ಇಲ್ಲ ಒಂದು ವೇಳೆ ಇದ್ದರೆ ಯಮಪುರಿಗೆ ನೇರವಾಗಿ ಟಿಕೆಟ್ ಪಡೆಯಬಹುದು. ಪ್ರಾಣ ಹೋಗುವ ಮುನ್ನವೇ ಸೇತುವೆಯನ್ನು ದುರಸ್ತಿ ಮಾಡಬೇಕಾಗಿದೆ.ಒಂದು ವೇಳೆ ಸೇತುವೆ ಕುಸಿದು ಪ್ರಾಣಾ ಹಾನಿ ಉಂಟಾಗಿ ಸರ್ಕಾರದಿಂದ ಪರಿಹಾರ ನೀಡುವ ಬದಲು ಕೂಡಲೇ ಎಚ್ಚೆತ್ತು ಕೊಂಡು ಸೇತುವೆಯನ್ನು ಪರಿಶೀಲಿಸಿ ದುರಸ್ತಿ ಅಥವಾ ಹೊಸದಾಗಿ ನಿರ್ಮಿಸಲು ಕೂಡಲೆ ಸೂಕ್ತ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ.


ಜನಪ್ರತಿನಿಧಿಗಳೇ ಎಲ್ಲಿದ್ದೀರಾ?

ತೆಂಕಣಕೇರಿ - ಪುಜಗೇರಿ ರಸ್ತೆ ತೀರಾ ಹದಗೆಟ್ಟಿದ್ದು ಇಲ್ಲಿನ ಜನಪ್ರತಿನಿಧಿಗಳು ಯಾರು ಎಂದು ದುರ್ಬಿನ್ ಹಾಕಿ ಹುಡುಕುವ ಪ್ರಸಂಗ ಬಂದಿದೆ. ಸಂಬಂಧಿಸಿದ ಜನಪ್ರತಿನಿಧಿಗಳು ಎಲೆಕ್ಷನ್ ಟೈಮಲ್ಲಿ ಮಾತ್ರ ಮುಖ ತೋರಿಸುವದು ಬಿಟ್ಟರೆ ಇನ್ನುಳಿದ ದಿನಗಳಲ್ಲಿ ಸಿಗದು ಸಿಗೋದು ಅಪರೂಪ ಎನಿಸುತ್ತದೆ. ಜನಸಾಮಾನ್ಯರು ಪರದಾಡುವ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜನಸಾಮಾನ್ಯರನ್ನು ಪ್ರತಿನಿಧಿಸುವ ಜನ ಪ್ರತಿನಿಧಿಗಳು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿ ಕಾಮಗಾರಿಯನ್ನು ಕೂಡಲೇ ನಡೆಸಬೇಕಾದ ಸನ್ನಿವೇಶ ಇದೆ.

ಶಾಲೆ ಮಕ್ಕಳು, ಪಾದಾಚಾರಿಗಳು, ವಯೋವೃದ್ದರೂ, ಬೈಕ್ ಸವಾರಾರು, ಲಘು ಗಾತ್ರದ ವಾಹನಗಳು, ಬೃಹ ಗಾತ್ರದ ವಾಹನಗಳು, ಸಾವಿರಾರು ಸಂಖ್ಯೆಯಲ್ಲಿ ಓಡಾಡುತ್ತಿದ್ದು ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತುರ್ತಾಗಿ ಹೊಂಡ ಬಿದ್ದಿರುವ ರಸ್ತೆಯಲ್ಲಿ ಸರಿಯಾಗಿ ದುರಸ್ತಿ ಕಾರ್ಯಗಳ ನಡೆಸಿ, ಮಳೆಗಾಲ ನಿಂತ ಮೇಲೆ ಸಿಮೆಂಟ್ ರಸ್ತೆಯನ್ನು ನಿರ್ಮಿಸಬೇಕೆಂದು ಈ ರಸ್ತೆಯಿಂದ ಓಡಾಡುವ ಸಾವಿರಾರು ಪ್ರಯಾಣಿಕರ ಆಗ್ರಹವಾಗಿರುತ್ತದೆ.


ವರದಿ :

ಕಿರಣ ಚಂದ್ರಹಾಸ ಗಾಂವಕರ 

ಅಂಕೋಲಾ


ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: