ಹನ್ನೆರಡು ತಾಲೂಕುಗಳು - ಒಂದು ಜಿಲ್ಲೆ ಆದರೂ ಸಹ ಉತ್ತರ ಕನ್ನಡ ಜಿಲ್ಲೆ ಜನರ ಭಾಗ್ಯದಲ್ಲಿಲ್ಲ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ..!!


09 Nov 2024, 08:47 pm, 585 reads

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಸೌಂದರ್ಯ ಗಳ ಬೀಡು, ಸಹ್ಯಾದ್ರಿ ಬೆಟ್ಟ ಹಾಗೂ ಅರಬ್ಬಿ ಸಮುದ್ರದ ನಡುವೆ ಕಣ್ಮನ ಸೆಳೆಯುವ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳು ಉದಾಹರಣೆಗೆ ಗೋಕರ್ಣ, ಮುರ್ಡೇಶ್ವರ, ಯಾಣ, ನದಿಬಾಗ ಬೀಚ್, ರವೀಂದ್ರ ಠಾಗೋರ್ ಬೀಚ್ ಮುಂತಾದವುಗಳು. ಇವೆಲ್ಲವುಗಳ ಬಗ್ಗೆ ಕೇಳಿದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದವರು ನಿಜವಾಗಿಯೂ ಅದೃಷ್ಟವಂತರು ಎನ್ನಬಹುದು. 

ಆದರೆ ಅಸಲಿಗೆ ಈ ಜಿಲ್ಲೆಯಲ್ಲಿನ ಜನರಿಗೆ ತುರ್ತು ಚಿಕಿತ್ಸೆಗೆ ಬೇಕು ಅಂದರೂ ಸಹ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಡ ಗತಿಯಿಲ್ಲ. ಹೌದು, ಬೈಕ್ ಇಂದ ಬಿದ್ದರೆ ಕೇವಲ ಒಂದು ಸಿಟಿ ಸ್ಕ್ಯಾನ್ ಗೂ ಸಹ 60-80 ಕೀ.ಮೀ ದೂರ ಹೋಗಬೇಕು..! 

ಸಹ್ಯಾದ್ರಿ ತಪ್ಪಲಿನಲ್ಲಿ ಸಾವಿರಾರು ಜಾತಿಯ ವಿಷ ಸರ್ಪಗಳು ಕಂಡುಬರುತ್ತದೆ .ಆಕಸ್ಮಿಕವಾಗಿ ಅವು ಕಚ್ಚಿದರೂ ಸಹ ಚಿಕಿತ್ಸೆಗೆ ಪಕ್ಕದ ಜಿಲ್ಲೆಯಾದ ಉಡುಪಿ, ದಕ್ಷಿಣ ಕನ್ನಡದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಗೆ ಹೋಗಬೇಕು, ಹಣೆಬರಹ ಗಟ್ಟಿ ಇದ್ದವರು ಮಾತ್ರ ಸಾವಿನ ದವಡೆಯಿಂದ ಪಾರಾಗುತ್ತಾರೆ. ಏಷ್ಟೋ ಜನರು ಪರ ಜಿಲ್ಲೆಯ ಆಸ್ಪತ್ರೆಗೆ ಸಾಗಿಸುವ ಮದ್ಯೆಯೆ ಜೀವ ಕಳೆದುಕೊಂಡಿರುವ ಘಟನೆಯೂ ಸಾಕಷ್ಟಿದೆ.

ಜಿಲ್ಲೆಯಲ್ಲಿ ಚತುಷ್ಪಥ ಹೆದ್ದಾರಿ ಪ್ರಾರಂಭವಾದಾಗಿನಿಂದ ಗಾಡಿಗಳ ವೇಗಕ್ಕೆ ಮಿತಿಯೇ ಇಲ್ಲದಾಗಿದೆ. ಹೀಗಿರುವಾಗ ಆಕಸ್ಮಿಕವಾಗಿ ದುರಂತಗಳು ನಡೆದರೆ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು ಸಹ ಅವರು ಬದುಕುವುದು ಕಷ್ಟ ಏಕೆಂದರೆ ಈಗಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾಗಿರುವ ಮೂಲಭೂತ ಸೌಕರ್ಯ ಹಾಗೂ ನುರಿತ ವೈದ್ಯರ ಕೊರತೆ ಇದೆ. ಸೂಕ್ತ ಓ.ಟಿ ಅಂದರೆ ಆಪರೇಷನ್ ಥಿಯೇಟರ್ ಇಲ್ಲ, ಆಪರೇಷನ್ ಮಾಡಲು ಬೇಕಾಗುವ ಯಂತ್ರೋಪಕರಣಗಳು ಇಲ್ಲ, ಮೇಲಾಗಿ ನುರಿತ ವೈದ್ಯರು ಸಹ ಇಲ್ಲ. ಹೀಗಿರುವಾಗ ಉತ್ತರ ಕನ್ನಡದ ಜನರು ಇಂತಹ ಕಣ್ಣಿಗೆ ಕಾಣುವ ಸ್ವರ್ಗದಲ್ಲಿ ಹುಟ್ಟಿಯೂ ಸಹ ನರಕ ಅನುಭವಿಸುತ್ತಿದ್ದಾರೆ. 


ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅನಿವಾರ್ಯ ಮತ್ತು ಅಗತ್ಯ..!

ಏನಿದು "ಗೋಲ್ಡನ್ ಅವರ್ಸ್"..?!

ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಗೆ ಒಂದೊಂದು ನಿಮಿಷವೂ ಅತ್ಯಮೂಲ್ಯವಾಗಿರುತ್ತದೆ. "ಗೋಲ್ಡನ್ ಅವರ್ಸ್" ಅಂದರೆ ಯಾವ ಅವಧಿ ಒಳಗಡೆ ರೋಗಿಗಳಿಗೆ/ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಬೇಕಾಗಿರುತ್ತದೆಯೋ ಅಂತಹ ಅವಧಿಗೆ ಗೋಲ್ಡನ್ ಅವರ್ಸ್ ಎಂದು ಕರೆಯುತ್ತಾರೆ, ಈ ಗೋಲ್ಡನ್ ಅವರ್ಸ್ ಕಳೆದ ನಂತರ ಆ ರೋಗಿಗೆ ಉಳಿಸುವುದು ಯಾವುದೇ ನುರಿತ ವೈದ್ಯರಿಂದಲೂ ಸಾದ್ಯವಿಲ್ಲ, ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ರೋಗಿಗೆ ತುರ್ತು ಚಿಕಿತ್ಸೆ ಬೇಕೆಂದರೂ ಆ ರೋಗಿ ನೆರೆ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಬೇಕೆಂದರೆ ಕನಿಷ್ಠ 4-5 ತಾಸು ಪ್ರಯಾಣ ಮಾಡಬೇಕು..! ಗಂಭೀರವಾಗಿ ಗಾಯಗೊಂಡಿದ್ದಾಗ ರೋಗಿ ಬದುಕಬೇಕೆಂದರೆ ಈ ಗೋಲ್ಡನ್ ಅವರ್ಸ್ ತುಂಬಾ ಕಡಿಮೆ ಇದ್ದಿರುತ್ತದೆ (ಅಬ್ಬಬ್ಬಾ ಎಂದರೂ ಒಂದು ತಾಸು) ಹೀಗಿರುವಾಗ ಯಾವ ರೋಗಿ ತಾನೇ 4-5 ತಾಸು ಪ್ರಯಾಣ ಮಾಡಿ ಜೀವಂತವಾಗಿ ಆಸ್ಪತ್ರೆ ತಲುಪುತ್ತಾನೆ...?! ಆದರೆ ಜಿಲ್ಲೆಯಲ್ಲಿಯೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದ್ದರೆ ಇಂತಹ ತುರ್ತು ಸಂದರ್ಭದಲ್ಲಿ ಎಷ್ಟೋ ಜನರ ಜೀವ ಉಳಿಸಬಹುದು. ಜನಪ್ರತಿನಿಧಿಗಳಿಗೆ ಆ ರೋಗಿ ಕೇವಲ ಒಂದು ವ್ಯಕ್ತಿ ಅಷ್ಟೇ ಆಗಿರಬಹುದು ಆದರೆ ಆ ಜೀವ ಎಷ್ಟೋ ಜೀವಗಳ ಆಸರೆ ಆಗಿದ್ದಿರಬಹುದು, ಮನೆ ನಡೆಸುವ ಯಜಮಾನ ಆಗಿರಬಹುದು, ಪುಟ್ಟ ಮಕ್ಕಳ ತಾಯಿ ಆಗಿರಬಹುದು, ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತ ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ ಆಗಿದ್ದಿರಬಹುದು ಅಲ್ಲವೇ..?! ಜನಪ್ರತಿನಿಧಿಗಳೇ ಒಂದು ಜೀವ ಹೋದ ನಂತರ ಅವರ ಮನೆಯವರ ಮುಂದೆ ಹೋಗಿ ಸಂತಾಪ ವ್ಯಕ್ತ ಪಡಿಸುವ ಬದಲು ಆ ಜೀವ ಉಳಿಸುವ ಪ್ರಯತ್ನ ಮಾಡಿ.


ದಶಕಗಳ ಬೇಡಿಕೆಗೆ ಅಂತ್ಯ ಎಂದು...?.!

ಜನಪ್ರತಿನಿಧಿಗಳು ಚುನಾವಣೆ ಬಂದಾಗ ನಮ್ಮನ್ನು ಗೆಲ್ಲಿಸಿದರೆ ರಸ್ತೆ ಮಾಡಿಕೊಡುತ್ತೇವೆ, ಮನೆ ಕಟ್ಟಿಸಿ ಕೊಡುತ್ತೇವೆ, ಉದ್ಯೋಗ ಕೊಡಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. 

ಆದರೆ ಜನರಿಗೆ ಬದುಕಲು ಅನ್ನ, ಗಾಳಿ, ನೀರು, ಬಟ್ಟೆ, ಮನೆ ಎಷ್ಟು ಮುಖ್ಯವೋ ಹಾಗೆಯೇ ತುರ್ತು ಚಿಕಿತ್ಸೆ ಬೇಕಾದಾಗ ಸುಸ್ಸಜ್ಜಿತ ವಾದ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಡ ಅಷ್ಟೇ ಅತ್ಯಗತ್ಯ ಎನ್ನುವುದು ಮರೆತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜನಗಳು ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಶಕಗಳಿಂದ ಬೇಡಿಕೆ ಇಡುತ್ತ ಬಂದರೂ ಸಹ ಕೇಳು ಕೇಳದಂತೆ ಕೂತಿದ್ದಾರೆ ಜಿಲ್ಲೆಯ ಸಚಿವರು - ಶಾಸಕರು ಹಾಗೂ ಸಂಸದರು. 

ಜನರ ಬೇಡಿಕೆಗಳನ್ನು ಜನಪ್ರತಿನಿಧಿಗಳು ಈಡೇರಿಸದೇ ಇನ್ಯಾರು ಈಡೇರಿಸುತ್ತಾರೆ..??!! ಜನಪ್ರತಿನಿಧಿಗಳ ತುರ್ತು ಚಿಕಿತ್ಸಾ ಕೇಂದ್ರ ಯಾವುದು..?! 

ಜನಪ್ರತಿನಿಧಿಗಳು ಸ್ವಾತಂತ್ರ್ಯ ದಿನಕ್ಕೋ, ಗಣತಂತ್ರ ದಿನಕ್ಕೋ , ತಮ್ಮ ತಮ್ಮ ಹುಟ್ಟು ಹಬ್ಬಕ್ಕೋ , ಆಗೋ-ಈಗೋ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಾರೆ ಆದರಿಂದ ಅಲ್ಲಿರುವ ಅನುಕೂಲಗಳ ಬಗ್ಗೆ ಅನಾನುಕೂಲಗಳ ಬಗ್ಗೆ ಅವರು ಕೇವಲ ಊಹಿಸಿಕೊಳ್ಳಬಹುದು ಬಿಟ್ಟರೆ, ವಾಸ್ತ್ಯವ್ಯದಿಂದ ಜನಪ್ರತಿನಿಧಿಗಳು ದೂರಾನೇ ಇದ್ದಾರೆ. 

ಏಕೆಂದರೆ ಜನಪ್ರತಿನಿಧಿಗಳಿಗೆ ಅಥವಾ ಅವರ ಮನೆಯವರಿಗೆ, ಆತ್ಮೀಯರಿಗೆ ಏನಾದರೂ ತುರ್ತು ಚಿಕಿತ್ಸೆಯ ಅಗತ್ಯ ಬಂದರೆ ಅಮೆರಿಕಾನೋ, ಆಸ್ಟ್ರೇಲಿಯನೋ, ಸಿಂಗಪುರೋ, ಲಂಡನ್ ನೋ ಅಂತ ಹಾರುತ್ತಾರೆ.

ಜನಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದಲ್ಲಿರುವ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದಾಗಲೇ ಬಹುಶಃ ಜನಪ್ರತಿನಿಧಿಗಳಿಗೆ ಜನಗಳ ಸಮಸ್ಯೆಯ ಅರಿವು ಉಂಟಾಗುತ್ತದೆ...!

ತಮ್ಮ ತಮ್ಮ ಜೀವದ ಕಾಳಜಿ ತೋರುವ ಜನಪ್ರತಿನಿಧಿಗಳು ತಮ್ಮನ್ನು ಆರಿಸಿ ಗೆಲ್ಲಿಸಿದಂತ ಜನಗಳ ಜೀವದ ಕಾಳಜಿ ಮಾಡುವುದು ಯಾವಾಗ..??!! 

ಜೀವ ಎನ್ನುವುದು ಅಮೂಲ್ಯವಾದದ್ದು, ಒಮ್ಮೆ ಹೋದರೆ ಆ ದುಃಖ, ಆ ಜೀವವನ್ನು ಕಳೆದುಕೊಂಡ ಮನೆಯವರಿಗೆ ಮಾತ್ರ ಗೊತ್ತಾಗುತ್ತದೆ. ಜನರಲ್ಲಿಯೂ ಜನಪ್ರತಿನಿಧಿಗಳಲ್ಲಿಯೂ ಇರುವುದು ಒಂದೇ ಜೀವ. ಆದರಿಂದ ಸಚಿವರು ಹಾಗೂ ಆಯಾ ಕ್ಷೇತ್ರದ ಶಾಸಕರುಗಳು ತಮ್ಮ ತಮ್ಮ ಜನರ ಕಲ್ಯಾಣಕ್ಕೆ ರಸ್ತೆ, ಮನೆ, ಅನ್ನಕ್ಕೆ ಅಷ್ಟೇ ಅಲ್ಲದೆ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೂ ಪ್ರಾಮುಖ್ಯತೆಯನ್ನು ಕೊಡಬೇಕಾಗಿದೆ. 

ಜನರಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಜಿಲ್ಲೆಯಲ್ಲಿ ಎಲ್ಲ ತಾಲೂಕಿನ ಜನರಿಗೂ ಸುಲಭವಾಗಿ ತಲುಪುವಂತಹ ಪ್ರದೇಶದಲ್ಲಿ ಮಾಡಿಕೊಡಬೇಕಾಗಿದೆ.


ವರದಿ: ಸುಪ್ರಿಯಾ ವಿಷ್ಣು ನಾಯ್ಕ





ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: