ಅಂಕೋಲಾ : ಸಮಾಜದ ದುರ್ಬಲ ವರ್ಗದ ಜನರಿಗೆ ಅನ್ಯಾಯವಾದಾಗ ಅವರ ನೆರವಿಗೆ ಧಾವಿಸುವರು ಯಾರು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಚಿತ ಕಾನೂನು ನೆರವು ನೀಡಿ, ತ್ವರಿತ ಗತಿಯಲ್ಲಿ ಕಾನೂನು ಸೇವಾ ಪ್ರಾಧಿಕಾರವು ನ್ಯಾಯ ದೊರಕಿಸುತ್ತಿದ್ದು, ಜನಸಾಮಾನ್ಯರ ಸಂತಸಕ್ಕೆ ಕಾರಣವಾಗಿದೆ.
ಅಂಕೋಲಾ ತಾಲೂಕಿನ ಪುರಸಭೆ ವ್ಯಾಪ್ತಿಯ ಶಿರಕುಳಿಯಲ್ಲಿ 64 ವರ್ಷದ ಜ್ಯೋತಿ ಜಯರಾಮ ಶೆಟ್ಟಿ ವಯೋ ವೃದ್ಧ ಮಹಿಳೆಯ ಮಲಗುವ ಕೋಣೆಯ ಕಿಟಕಿಗೆ ಪಕ್ಕದ ಮನೆಯ ಅಪ್ಪ ಮಗ ಬಂದು ತಗಡನ್ನು ಹೊಡೆದು ಗಾಳಿ ಬೆಳಕು ಬರದಿರುವ ಹಾಗೆ ಮಾಡಿ ತೊಂದರೆ ಕೊಡುತ್ತಿದ್ದ ಪ್ರಕರಣ ಪೊಲೀಸ್ ಠಾಣೆ ಹಾಗೂ ಪುರಸಭೆ ಮೆಟ್ಟಿಲೇರಿ ನಂತರ ಅಲ್ಲಿ ನ್ಯಾಯ ಸಿಗದೇ ಕೊನೆಗೆ ಅನಿವಾರ್ಯವಾಗಿ ತಾಲೂಕು ಕಾನೂನು ಸೇವಾ ಸಮಿತಿಯ ಮೆಟ್ಟಿಲೇರಿ ನ್ಯಾಯಾಲಯದ ಆದೇಶದಂತೆ ವೃದ್ದೆಯ ಮನೆಯ ಕಿಟಕಿಗೆ ಹಾಕಿದ ತಗಡನ್ನು ನಂತರ ಸೀರೆಯನ್ನು ತೆಗೆಸಿದ ನಂತರ ಪ್ರಕರಣ ಇತ್ಯರ್ಥವಾಗಿದೆ.
ಸದರಿ ಕಿಟಕಿಗೆ ಹಾಕಿದ ತಗಡಿನ ಪ್ರಕರಣವನ್ನು ಕೈಗೆತ್ತಿಕೊಂಡ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಮಾನ್ಯ ನ್ಯಾಯಾಧೀಶೆ ಸುಪ್ರಿಯಾ ಬೆಲ್ಲದ್ ರವರು ಸೇವಾ ಸಮಿತಿಯ ವಕೀಲರನ್ನು ನೇಮಕ ಮಾಡಿ ವೃದ್ದೆಯ ಮನೆಯ ಕಿಟಕಿಗೆ ಹಾಕಿರುವ ತಗಡನ್ನು ಹಾಕಿರುವ ಸ್ಥಳಕ್ಕೆ ತೆರಳಿ ಸಂಪೂರ್ಣವಾದ ಪ್ರಾಥಮಿಕ ವರದಿಯನ್ನು ನೀಡುವಂತೆ ಸೂಚಿಸಿದ್ದಾರೆ .
ನ್ಯಾಯಾಧೀಶರ ಆಜ್ಞೆಯ ಮೇರೆಗೆ ಸ್ಥಳಕ್ಕೆ ತೆರಳಿದ ವಕೀಲರು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಮಾನ್ಯ ನ್ಯಾಯಾಧೀಶರಿಗೆ ವರದಿಯನ್ನು ಸಲ್ಲಿಸಿದ್ದಾರೆ.
ಸದರಿ ವರದಿಯನ್ನು ಪರಿಶೀಲಿಸಿದ ನ್ಯಾಯಾಧೀಶರು ವೃದ್ದೆಯ ಮನೆಯ ಕಿಟಕಿಗೆ ಹಾಕಿರುವ ತಗಡನ್ನು ತೆಗೆಸುವಂತೆ ಎದುರುದಾರಿಗೆ ಸೂಚನೆ ನೀಡಿದ್ದಾರೆ.
ತಗಡನ್ನು ತೆಗೆದು ಕಿಟಕಿಗೆ ಸೀರೆಯನ್ನು ಬಿಗಿದು ಮತ್ತೆ ವೃದ್ದೆಗೆ ತೊಂದರೆ ನೀಡಿದ ಎದುರುದಾರರು.
ನ್ಯಾಯಾಲಯದ ಮೆಟ್ಟಿಲೇರಿದ ನಂತರ ಮಾನ್ಯ ನ್ಯಾಯಾಧೀಶರು ತಗಡನ್ನು ತೆಗೆಯುವಂತೆ ತಗಡನ್ನು ಹಾಕಿದ ಎದುರುದಾರರಿಗೆ ಸೂಚನೆ ನೀಡಿದಾಗ ಎದುರುದಾರರು ತಗಡನ್ನು ತೆಗೆದರು. ಮುಂದುವರೆದು ಅದೇ ಜಾಗದಲ್ಲಿ ಮತ್ತೆ ಸೀರೆಯನ್ನು ಬಿಗಿದು ಗಾಳಿ ಬೆಳಕು ಬರದೇ ಇರುವ ಹಾಗೆ ತೊಂದರೆ ನೀಡಲು ಮುಂದಾದರು.
ಪಕ್ಕದ ಮನೆಯ ನಿವಾಸಿಗಳು ತಗಡನ್ನು ತೆಗೆದು ಕಿಟಕಿಗೆ ಸೀರೆಯನ್ನು ಬಿಗಿದಿರುವ ಕುರಿತು ಜ್ಯೋತಿ ಜಯರಾಮ್ ಶೆಟ್ಟಿ ಮತ್ತೆ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರಲ್ಲಿ ಅಳಲನ್ನು ತೋಡಿಕೊಂಡರು. ನ್ಯಾಯಾಧೀಶರು ವೃದ್ದೆಯ ಕಿಟಕಿಗೆ ಹಾಕಿರುವ ಸೀರೆಯನ್ನು ಮುಂದಿನ ವಿಚಾರಣೆಯೊಳಗಾಗಿ ತೆಗೆಯುವಂತೆ ಎದುರುದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.
ನಿನ್ನೆ ದಿನಾಂಕ 7-11-2024 ರಂದು ಮಾನ್ಯ ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ಪ್ರಕರಣ ವಿಚಾರಣೆ ನಡೆಸಿದಾಗ ಜ್ಯೋತಿ ಜಯರಾಮ ಶೆಟ್ಟಿ ಯು ಹಾಜರಾಗಿ ತನ್ನ ಮನೆ ಕಿಟಕಿಗೆ ಹಾಕಿರುವ ತಗಡನ್ನು ಮತ್ತು ಸೀರೆಯನ್ನು ಎದುರುದಾರರು ತೆಗೆದಿರುವ ಕುರಿತು ಮಾಹಿತಿ ನೀಡಿದರು. ಈ ಮೂಲಕ ಜ್ಯೋತಿ ಜಯರಾಮ ಶೆಟ್ಟಿಗೆ 10₹ ಕರ್ಚಿಲ್ಲದೆ ಮಾನ್ಯ ತಾಲೂಕು ಕಾನೂನು ಸೇವಾ ಸಮಿತಿಯಿಂದ ನ್ಯಾಯ ದೊರಕಿತು.
ಎದುರುದಾರರ ಅನಧಿಕೃತ ಕೆಲಸಕ್ಕೆ ಕಾನೂನು ಪಂಡಿತರೊಬ್ಬರು ಪರೋಕ್ಷವಾಗಿ ಬೆಂಬಲಕ್ಕೆ ನಿಂತು, ಚಾಣಾಕ್ಷತನದಿಂದ ಪಿತೂರಿ ನಡೆಸಿ ಕೊನೆಯಲ್ಲಿ ನಗೆ ಪಾಟಲಿಗಿಡಾದರು. ಅಂತೂ ಕೊನೆಯಲ್ಲಿ ಜ್ಯೋತಿ ಜಯರಾಮ್ ಶೆಟ್ಟಿಯ ಪ್ರಾಮಾಣಿಕ ಹೋರಾಟಕ್ಕೆ ಜಯ ದೊರೆತಿದೆ.
ಜ್ಯೋತಿ ಜಯರಾಮ ಶೆಟ್ಟಿಯ ಮನೆಯ ಕಿಟಕಿಗೆ ಹಾಕಿದ ತಗಡನ್ನು ತೆಗೆಸಿದ ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯಕ್ಕೆ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಅಂಕೋಲಾ ಘಟಕದ ಎಲ್ಲಾ ಸದಸ್ಯರು
ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ವರದಿ: ಕಿರಣ ಚಂದ್ರಹಾಸ ಗಾಂವಕರ
ಜಾಹೀರಾತುಗಾಗಿ ಸಂಪರ್ಕಿಸಿ - 8310433297