ಅಂಕೋಲಾ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಉತ್ತರ ಕನ್ನಡ ವಿಭಾಗದ ಡಿವೈಎಸ್ಪಿ ಗಿರೀಶ್ ರವರ ನೇತೃತ್ವದಲ್ಲಿ ದಿನಾಂಕ 6-11-2024 ರಂದು ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆ ಹಾಗೂ ದೂರುಗಳ ಸರಮಾಲೆಯೇ ಹರಿಯಿತು.
ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಯ ಹದಗೆಟ್ಟಿರುವ ಬಗ್ಗೆ, ಪುಟ್ ಪಾತ್ ಅತಿಕ್ರಮಣ ಸಮಸ್ಯೆ, ಪಟ್ಟಣದ ಪ್ರಮುಖ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ ಸಿಸಿ ಟಿವಿ ಕ್ಯಾಮರಗಳ ಬಗ್ಗೆ ಸೇರಿದಂತೆ ಇತರ ಅನೇಕ ಗಂಭೀರ ಸಮಸ್ಯೆಗಳನ್ನು ಸಾರ್ವಜನಿಕರು ಡಿವೈಎಸ್ಪಿ ಗಿರೀಶ್ ಅವರ ಗಮನಕ್ಕೆ ತಂದರು. ಇದಲ್ಲದೆ ತಾಲೂಕಿನಾದ್ಯಂತ ಗಾಂಜಾ ಮಾರಾಟ ಹೆಚ್ಚಾಗುತ್ತಿದ್ದು ,ಯುವಜನರು ಚಟಕ್ಕೆ ಬೀಳುತ್ತಿದ್ದಾರೆ ಎಂದು ಸಾಮಾಜಿಕ ಚಿಂತಕರು ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ಗಿರೀಶ್ ರವರು ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಯವರ ಮಾರ್ಗದರ್ಶನದಲ್ಲಿ ಹಾಗೂ ಸಾರ್ವಜನಿಕರಾದ ತಮ್ಮೆಲ್ಲರ ಸಹಕಾರದಲ್ಲಿ ಕಾನೂನು ಸುವ್ಯವಸ್ಥೆಗೆ ಹಂತಂತವಾಗಿ ಕ್ರಮಗಳನ್ನು ಕೈಗೊಳ್ಳುತ್ತಾ ಹೋಗೋಣ.ಇದಕ್ಕೆ ಇಲಾಖೆಯ ಜೊತೆ ಸಾರ್ವಜನಿಕರ ಸಹಭಾಗಿತ್ವ ಮತ್ತು ಸಹಕಾರವು ಅವಶ್ಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಕೋಲಾ ಪೋಲೀಸ್ ಠಾಣಾ ಸಿಬ್ಬಂದಿಗಳು, ಹಿರಿಯ ವಕೀಲರು, ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಪತ್ರಿಕ ವರದಿಗಾರರು, ಸಾಮಾಜಿಕ ಚಿಂತನೆಯುಳ್ಳ ಸಾರ್ವಜನಿಕರು ಉಪಸ್ಥಿತರಿದ್ದರು.
ಅಂಕೋಲಾದಲ್ಲಿ ಡಿವೈಎಸ್ಪಿ ಗಿರೀಶ್ ರವರ ಜನ ಸಂಪರ್ಕ ಸಭೆ ನಡೆದ ನಂತರ ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ತಮ್ಮ ಮೇಲಾಧಿಕಾರಿಗಳ ಆದೇಶದಂತೆ ಅಂಕೋಲಾದಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಬೈಕ್ ಸವಾರರು ಹೆಲ್ಮೆಟನ್ನು ಧರಿಸುವಂತೆ ದಿನಾಂಕ 7-11-2024 ರಂದು ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ಹೆಲ್ಮೆಟ್ ಕಡ್ಡಾಯದ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದಾರೆ . ಈ ಮೂಲಕ ಮೇಲಾಧಿಕಾರಿಗಳ ಆದೇಶವನ್ನು ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರ್ಯರೂಪಕ್ಕೆ ತರಲು ಸಜ್ಜಾಗಿ ನಿಂತಿದ್ದಾರೆ.
ಡಿವೈಎಸ್ಪಿ ನೇತೃತ್ವದಲ್ಲಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನಡೆದ ಜನಸಂಪರ್ಕ ಸಭೆ ಅಂಕೋಲಾದ ಪಟ್ಟಣ ಪ್ರದೇಶದಲ್ಲಿ ಉಂಟಾಗುತ್ತಿರುವ ಸಾರ್ವಜನಿಕ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಮುಕ್ತಿ ದೊರಕಲಿದೆಯೇ ಎಂದು ಕಾದು ನೋಡಬೇಕಾಗಿದೆ.
ವಿಕಾಸ ವಾಹಿನಿ ವರದಿ
ಜಾಹೀರಾತುಗಳಿಗಾಗಿ ಸಂಪರ್ಕಿಸಿ -8310433297