ಕಾರವಾರದ ಕಾಳಿ ಸೇತುವೆ ಕುಸಿತ : ಅಂದು ರಾತ್ರಿ ಚಿತ್ತಾಕುಲ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿನಯ ಕಾಣಕೋಣಕರ ಬರದೇ ಇದ್ದಿದ್ರೆ, ನಾಲ್ಕೈದು ಲಾರಿ, ಕಾರು ನದಿಯಲ್ಲಿ ಬೀಳುತ್ತಿತ್ತು, ತಪ್ಪಿದ ಭಾರಿ ದುರಂತ..!


09 Aug 2024, 01:16 am, 688 reads

ಕಾರವಾರ: ಆಗಸ್ಟ್ 7 ರಾತ್ರಿ ಸುಮಾರು 12:50ರ ಸುಮಾರಿಗೆ ಗೋವಾ ಹಾಗೂ ಕಾರವಾರದ ಸಂಪರ್ಕಿಸುವ ಕಾಳಿ ನದಿಯ ಸೇತುವೆ ಏಕಏಕಿ ಕುಸಿದಿದ್ದು, ಒಮ್ಮೆಲೆ ಜೋರಾದ ಸಪ್ಪಳ ಬಂದಿದೆ. ಸೇತುವೆಯು ಕುಸಿದಿದೆ ಎಂಬ ಅರಿವೇ ಇಲ್ಲದೆ ಸೇತುವೆಯ ಮೇಲೆ ಯಾವುದಾದರೂ ವಾಹನಗಳ ಅಪಘಾತವಾಗಿರಬಹುದೆಂದು ಊಹಿಸಿಕೊಂಡು ಮೀನುಗಾರ ಸಮುದಾಯದ ವ್ಯಕ್ತಿ ಒಬ್ಬರು ತಮ್ಮ ಪರಿಚಿತ ಚಿತ್ತಾಕುಲ ಪೊಲೀಸ್ ಠಾಣೆಯ ವಿನಯ ಕಾಣಕೋಣಕರವರಿಗೆ ರಾತ್ರಿ 12:50ಕ್ಕೆ ಕರೆ ಮಾಡಿದ್ದಾರೆ.


ಚಿತ್ತಾಕುಲ ಪೊಲೀಸ್ ಠಾಣೆಯ ಕಾನ್ಸ್ಟೇಬಲ ಕರೆ ಬಂದ ತಕ್ಷಣ ಮನೆಯಲ್ಲಿ ಉಟ್ಟ ಬಟ್ಟೆಯಲ್ಲಿ ಸ್ಕೂಟಿ ಮೇಲೆ ತೆರಳಿದರು ಮುಂದೆನಾಯ್ತು..?

ವಿನಯ ರವರು ಕಾಳಿ ಸೇತುವೆ ಹತ್ತಿರ ಬಂದಾಗ ಲಾರಿ ಒಂದು ಚಾಲನೆ ಸ್ಥಿತಿಯಲ್ಲಿತ್ತು, ಲಾರಿ ಹೈಡ್ಲೈಟ್ ಬೆಳಕಿನಿಂದ ಸೇತುವೆ ಮುರಿದು ಬಿದ್ದಿದ್ದನ್ನು ಗಮನಿಸಿದ ಪೊಲೀಸ ಪೇದೆ ತಕ್ಷಣ ಆ ಲಾರಿ ಚಾಲಕನಿಗೆ ಹಿಂದಕ್ಕೆ ಹೋಗುವಂತೆ ಕೂಗ ತೊಡಗಿದರು ಅ ಲಾರಿ ಚಾಲಕನು ತಮ್ಮ ಜೊತೆ ಬಂದಿದ್ದ ಮುಂದಿನ ಲಾರಿ ನದಿಗೆ ಬಿದ್ದಿದೆ, ನನ್ನ ಗೆಳೆಯನ ಪ್ರಾಣ ಉಳಿಸಿಕೊಡಿ ಎಂದು ಗೋಗೆರೆಯುತ್ತಿದ್ದ.

ಅಷ್ಟೊತ್ತಿಗಾಗಲೇ ಆ ಲಾರಿ ಹಿಂದೆ 3 ಲಾರಿಗಳು ಹಾಗೂ ಒಂದು ಕುಟುಂಬ ಸಮೇತ ಇರುವ ಕಾರೊಂದು ಬರುತ್ತಿತ್ತು, ವಿನಯ ರವರು ಏನಾದರೂ ಆಗಲಿ ಈ ಅನಾಹುತವನ್ನು ತಪ್ಪಿಸಲೇಬೇಕು ಎಂದು ಸಂಕಲ್ಪ ತೊಟ್ಟು ತಮ್ಮ ಸ್ಕೂಟಿಯನ್ನು ಪುನಹ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿ ವಾಹನಗಳು ಯಾವುದು ಬರದಂತೆ ವಾಹನಗಳು ಹಿಂದಕ್ಕೆ ಹೋಗುವಂತೆ ಸೂಚಿಸಿದರು, ಮತ್ತೆ ಏನಾದರೂ ವಾಹನಗಳು ಬರುವುದೆಂಬ ಆತಂಕದಲ್ಲಿದ್ದ ಇವರು ತಮ್ಮ ಸ್ಕೂಟಿಯನ್ನು ಸೇತುವೆಯ ಪ್ರಾರಂಭದ ಮಧ್ಯದಲ್ಲಿ ಅಡ್ಡಲಾಗಿ ಇಟ್ಟುಕೊಂಡು ಯಾವುದೇ ವಾಹನಗಳು ಬರದಂತೆ ತಡೆದರು. ಹಾಗೂ ತಾವು ಕೆಲಸ ಮಾಡುತ್ತಿರುವ ಚಿತ್ತಾಕುಲ ಪೊಲೀಸ್ ಠಾಣೆಯ ಪಿ.ಎಸ್.ಐ ಮಹಾಂತೇಶ ವಾಲ್ಮೀಕಿ ಅವರಿಗೆ ಕರೆ ಮಾಡಿ ಆದ ಅನಾಹುತದ ಬಗ್ಗೆ ವಿವರಿಸಿದರು. ಕಂಟ್ರೋಲ್ ರೂಮ್ ಗೆ ಕರೆ ಮಾಡಿದರು, ಸ್ಟೇಷನ್ ಗೆ ಕರೆ ಮಾಡಿದರು, 108 ಕ್ಕೆ ಕರೆ ಮಾಡಿದರು, ಹೀಗೆ ಆ ಭಯಾನಕ ಪರಿಸ್ಥಿತಿಯಲ್ಲೂ ಕೂಡ ಧೃತಿಗೆಡದೆ ತಮ್ಮೆಲ್ಲಾ ಅಧಿಕಾರಿಗಳಿಗೆ ವಿಷಯವನ್ನು ಮುಟ್ಟಿಸಿದರು. ಕೂಡಲೇ ಪೊಲೀಸ್ ಪೇದೆಯ ಕರೆಗೆ ಸ್ಪಂದಿಸಿ ಕೆಲವೇ ನಿಮಿಷಗಳಲ್ಲಿ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬಂದರು. ಸೇತುವೆ ಕುಸಿತ ಆದ ಸಂದರ್ಭದಲ್ಲಿ ಆಗಲೇ ಕಾರವಾರ ಕಡೆ ಹೋಗುತ್ತಿದ್ದ ಒಂದು ಲಾರಿ ಕಾಳಿ ನದಿಯಲ್ಲಿ ಬಿದ್ದಿದ್ದು ಪೋಲಿಸ್ ಇಲಾಖೆ ಸ್ಥಳೀಯ ಮೀನುಗಾರರ ಸಹಾಯದಿಂದ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಲಾರಿ ಚಾಲಕನ ರಕ್ಷಣೆಯನ್ನು ಮಾಡಲಾಯಿತು.

ಚಿತ್ತಾಕುಲ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಯ ಸಮಯ ಪ್ರಜ್ಞೆಯಿಂದ ಅನೇಕ ಜೀವಗಳು ಉಳಿದುಕೊಂಡವು.

ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಮಂತ್ರಿ ಗಣ್ಯರಿಂದ ಪೊಲೀಸ್ ಪೇದೆಯ ಸಮಯ ಪ್ರಜ್ಞೆಗೆ ಬಹುಪರಾಕ್..

ಪೊಲೀಸ್ ಪೇದೆಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವನ್ನು ತಪ್ಪಿದ ವಿಷಯವನ್ನು ತಿಳಿದುಕೊಂಡ ಮೀನುಗಾರ ಸಚಿವ ಮಂಕಾಳು ವೈದ್ಯ, ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಶ್ರೀ ನಾರಾಯಣ ಎಂ. ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅಗಸ್ಟ್ 15 ರಂದು ಪೊಲೀಸ್ ಪೇದೆ ವಿನಯ್ ಕಾಣಕೋಣಕರ, ಪಿಎಸ್ಐ ಮಹಾಂತೇಶ ಹಾಗೂ ರಕ್ಷಣೆಯಲ್ಲಿ ಭಾಗವಹಿಸಿದ ಸ್ಥಳೀಯ ಮೀನುಗಾರರನ್ನು ಗೌರವಿಸಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ.

ಕಾರವಾರದವರೇ ಆದ ಮೇಲಿನ ಮಕ್ಕೇರಿ ಗ್ರಾಮದ ವಿನಯ ಶಶಿಕಾಂತ ಕಾಣಕೋಣಕರ ಇವರು ಪ್ರಸ್ತುತ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ಇವರು ಎಸ್‌.ಪಿ ಸ್ಕೋಡ್ ನಲ್ಲಿ 3 ವರ್ಷ, ಹೆಸ್ಕಾಂ ಜಾಗೃತ ದಳದಲ್ಲಿ 7 ವರ್ಷ ಕೆಲಸ ಮಾಡಿದ ನೈಪುಣ್ಯತೆ ಇದೆ.

ಇವರ ಈ ಒಂದು ಸಾಹಸದ ಕೆಲಸಕ್ಕೆ ಇವರಿಗೆ ಶೌರ್ಯ ಪ್ರಶಸ್ತಿ ನೀಡುವಂತಾಗಲಿ ಎಂಬುದು ಹುಟ್ಟೂರಿನ ಹಾಗೂ ಸಮಸ್ತ ಕರ್ನಾಟಕ ಜನತೆಯ ಆಶಯವಾಗಿದೆ.

ವರದಿ :

ಕಿರಣ ಚಂದ್ರಹಾಸ ಗಾಂವಕರ 

ಅಂಕೋಲಾ

ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: