ಬೇಲೆಕೇರಿ ಅಕ್ರಮವಾಗಿ ಅದಿರು ಸಾಗಣೆ ಪ್ರಕರಣ | ಕಾರವಾರ - ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್‌ ಗೆ ಒಟ್ಟು 6 ಪ್ರಕರಣದಲ್ಲಿ15 ವರ್ಷ ಕಠಿಣ ಶಿಕ್ಷೆ ಪ್ರಕಟ : ಶಾಸಕ ಸ್ಥಾನ ಅನರ್ಹತೆ ಭೀತಿ : ಹೈಕೋರ್ಟ್ ತಡೆ ನೀಡಿದರೆ ಸೈಲ್ ಬಚಾವ್...


27 Oct 2024, 10:16 am, 545 reads

ಬೆಂಗಳೂರು: ಉಪ ಚುನಾವಣೆ ಕಣ ರಂಗೇರುತ್ತಿರುವ ಹೊತ್ತಲ್ಲೇ ಕಾಂಗ್ರೆಸ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾ ಲಯ ಶಾಕ್ ನೀಡಿದ್ದು, ಕಾರವಾರ ಶಾಸಕ ಸತೀಶ್ ಸೈಲ್‌ಗೆ 6 ಪ್ರಕರಣದಲ್ಲಿ ಒಟ್ಟು 15 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಅಂದಿನ ಬಂದರು ಸಂರಕ್ಷಣಾಧಿಕಾರಿಯಾಗಿದ್ದ ಮಹೇಶ್ ಬಿಳಿಯ ಸೇರಿ ಒಟ್ಟು 7 ಜನರನ್ನು ದೋಷಿಗಳು ಎಂದು ಗುರುವಾರ ಹೇಳಿದ್ದ ನ್ಯಾಯಾಲಯ, ಶನಿವಾರ ತೀರ್ಪು ಪ್ರಕಟಿಸಿದೆ. ಅಪರಾಧಿಗಳಿಗೆ ವಂಚನೆ ಪ್ರಕರಣದಲ್ಲಿ 7 ವರ್ಷ, ಒಳಸಂಚು ಪ್ರಕರಣದಲ್ಲಿ 5 ವರ್ಷ. ಮತ್ತು ಕಳ್ಳತನ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈಗಾಗಲೇ ಜೈಲಿನಲ್ಲಿ ಕಳೆದಿರುವ ಶಿಕ್ಷೆ ಪ್ರಮಾಣವನ್ನು ಹೊರತುಪಡಿಸಿ, ಉಳಿದ ಶಿಕ್ಷೆಯನ್ನು ಅಪರಾಧಿಗಳು ಅನುಭವಿಸಬೇಕಿದೆ. 

ಕೋಟಿ ರೂ. ದಂಡ ವಿಧಿಸಿದ ನ್ಯಾಯಾಲಯ. 

ಅಂಕೋಲಾದ ಅಕ್ರಮ ಬೆಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಈ ಹಗರಣದ ಒಟ್ಟು ಆರು ಪ್ರಕರಣಗಳಲ್ಲಿ ನ್ಯಾಯಾಲಯ 44 ಕೋಟಿ ರೂ. ದಂಡ ವಿಧಿಸಿದೆ. ಶಾಸಕ ಸತೀಶ್ ಸೈಲ್, ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್ನ ಮಾಲಿಕ ಖಾರದಪುಡಿ ಮಹೇಶ್, ಮಲ್ಲಿಕಾರ್ಜುನ ಶಿಪ್ಪಿಂಗ್ ಸಂಸ್ಥೆ ಈ ದಂಡದ ಮೊತ್ತವನ್ನು ಪಾವತಿಸಬೇಕಿದೆ.


ಶಾಸಕ ಸ್ಥಾನ ಅನರ್ಹತೆ ಭೀತಿ 

ಜನಪ್ರತಿನಿಧಿಯಾದವರ ವಿರುದ್ಧ ಯಾವುದೇ ನ್ಯಾಯಾಲಯ ಅಪರಾಧ, ಭ್ರಷ್ಟಾಚಾರ ಪ್ರಕರಣಗಳಲ್ಲಿ 2 ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆ ವಿಧಿಸಿದರೆ ಸ್ಥಾನ ರದ್ದಾಗುವುದರಿಂದ ಸತೀಶ್ ಸೈಲ್ ಅವರಿಗೂ ಶಾಸಕ ಸ್ಥಾನ ಅನರ್ಹತೆ ಭೀತಿ ಎದುರಾಗಿದೆ. 

ಹೈಕೋರ್ಟ್ ತಡೆ ನೀಡಿದರೆ ಸೈಲ್ ಬಚಾವ್

ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದಾಗಿದ್ದು, ಹೈಕೋರ್ಟ್ ಹಂತವಾಗಿ ಕೈಗೆತ್ತಿಕೊಂಡು ಆದೇಶಕ್ಕೆ ತಡೆ ನೀಡಿದರೆ ಸತೀಶ್ ಸೈಲ್ ಶಾಸಕ ಸ್ಥಾನ ಉಳಿಯುವ ಸಾಧ್ಯತೆಯಿದೆ. ಆದರೆ ಹೈಕೋರ್ಟ್ ಕೂಡ ಈ ಆದೇಶವನ್ನೇ ಎತ್ತಿ ಹಿಡಿದರೆ ಕಾರವಾರಕ್ಕೆ ಉಪ ಚುನಾವಣೆ ನಡೆಯುವುದು ನಿಶ್ಚಿತ ಎನ್ನಲಾಗುತ್ತಿದೆ..


ವರದಿ: ಕಿರಣ ಚಂದ್ರಹಾಸ ಗಾಂವಕರ 





ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: