ಅಂಕೋಲಾ : ಒಂದು ವಾರದ ಹಿಂದೆ ಶಿರಸಿಯ ಬಿಜೆಪಿಯ ಮುಖಂಡೆ ಶ್ರೀಮತಿ ಉಷಾ ಹೆಗಡೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆಯಾದ ಇವರು ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಕಾರ್ಯನಿರ್ವಹಿಸಿ ಎರಡು ಹುದ್ದೆ ಗೌರವ ಧನವನ್ನು ಪಡೆದುಕೊಂಡು ಸರ್ಕಾರಿ ಬೊಕ್ಕಸಕ್ಕೆ 88630 ರೂ ವಂಚಿಸಿದ ಬಗ್ಗೆ ಅವರ ವಿರುದ್ಧ ದೂರು ದಾಖಲಾಗಿತ್ತು.
ಅಂಗನವಾಡಿ ಕರ್ತವ್ಯಕ್ಕೆ ಹಾಜರಾಗದೇ ಇದ್ದರೂ ದಾಖಲೆಗಳಲ್ಲಿ ಹಾಜರಾಗಿರುವ ಬಗ್ಗೆ ಸಹಿ ಹಾಕಿದ್ದರು ಹಾಗೂ ನಕಲಿ ದಾಖಲೆಗಳನ್ನು ಸೃಷ್ಠಿಸಿದ ಬಗ್ಗೆ ಅವರ ವಿರುದ್ಧ ಇಬ್ರಾಹಿಂ ನಬಿಸಾಬ್ ಎಂಬಾತರು ಲೋಕಾಯುಕ್ತ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಿ ಒಂದು ವರ್ಷ ಕಾರಾಗೃಹ 5 ಸಾವಿರ ರೂಪಾಯಿ ದಂಡವನ್ನು ವಿಧಿಸಿತ್ತು . ಅದೇ ದಿನ ಉಷಾ ಹೆಗಡೆಯವರಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ ಎಂದು ಮಾಹಿತಿ ಬಂದಿದೆ.
ಈ ಮೇಲಿನ ಪ್ರಕರಣವು ರಾಜ್ಯಾದ್ಯಂತ ಸಂಚಲನ ಉಂಟುಮಾಡಿತ್ತು. ಈ ಘಟನೆಯ ಬೆನ್ನಲ್ಲೇ ಅಂಕೋಲಾ ತಾಲೂಕಿನ ಅಲಗೇರಿ ಪಂಚಾಯಿತಿಯಲ್ಲಿ ಕೂಡ ಅಕ್ಷರ ದಾಸೋಹದಡಿ ಕೆಲಸವನ್ನು ನಿರ್ವಹಿಸುತ್ತಾ ಗ್ರಾಮ ಪಂಚಾಯತಿಗೆ ಸ್ಪರ್ಧಿಸಿ ಚುನಾವಣೆ ಗೆದ್ದು ಸದಸ್ಯೆ ಯಾದ ನಂತರವು ಮಹಿಳೆ ಒಬ್ಬಳು ಅಕ್ಷರ ದಾಸೋಹ ಕೆಲಸಕ್ಕೆ ರಾಜೀನಾಮೆ ನೀಡದೇ, ಏಕಕಾಲದಲ್ಲಿ ಎರಡು ಹುದ್ದೆಯ ಗೌರವಧನವನ್ನು ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವ ಬಗ್ಗೆ ಅಲಗೇರಿ ಪಂಚಾಯಿತಿಯ ಸ್ಥಳೀಯರಿಂದ ತಡವಾಗಿ ಮಾಹಿತಿ ತಿಳಿದು ಬಂದಿದೆ.
ಏಕಕಾಲದಲ್ಲಿ 2 ಹುದ್ದೆಯ ಗೌರವಧನವನ್ನು ಪಡೆಯುತ್ತಿರುವ ಸದಸ್ಯೆ ಬಗ್ಗೆ ಚಕಾರ ಎತ್ತದ ಅಲಗೇರಿ ಪಂಚಾಯತದ & ಅಕ್ಷರ ದಾಸೋಹದ ಅಧಿಕಾರಿಗಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಥೆ ಏನು ?
ಕಳೆದ 2021 ರಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯೆಯಾಗಿ ಚುನಾಯಿತಿಗೊಂಡ ಆ ಮಹಿಳೆ ತಾನು ಹಿಂದೆ ಕೆಲಸ ಮಾಡುತ್ತಿರುವ ಅಕ್ಷರ ದಾಸೋಹ ಬಿಸಿ ಊಟ ಯೋಜನೆ ಯ ಸಿಬ್ಬಂದಿ ಕೆಲಸಕ್ಕೆ ರಾಜೀನಾಮೆ ನೀಡದೆ , ಸತತ 4 ನೇ ವರ್ಷದ ತನಕ ಎರಡು ಹುದ್ದೆಯ ಗೌರವಧನ ಪಡೆಯುತ್ತಾ ಸರ್ಕಾರಕ್ಕೆ ವಂಚನೆ ಮಾಡುತ್ತಾ ಬಂದರು ಅಲಗೇರಿಯ ಗ್ರಾಮ ಪಂಚಾಯಿತಿಯ ಆಡಳಿತ ಕಮಿಟಿ, ಅಕ್ಷರ ದಾಸೋಹ ಅಧಿಕಾರಿ ವರ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಾರದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅಕ್ಷರ ದಾಸೋಹ ಸಿಬ್ಬಂದಿಗಳು ಯಾವುದೇ ಗ್ರಾಮ ಪಂಚಾಯಿತಿ ಯಲ್ಲಿ ಚುನಾಯಿತರಾದರೆ ಅವರನ್ನು ತಕ್ಷಣ ಬಿಡುಗಡೆಗೊಳಿಸುವ ಬಗ್ಗೆ ಸರ್ಕಾರದ ಆದೇಶವಿದ್ದರೂ. ಅಲಗೇರಿ ಗ್ರಾಮ ಪಂಚಾಯತ್ ಸದಸ್ಯೆಯು ಪಂಚಾಯಿತಿಯಿಂದ ಗೌರವಧನದ ಜೊತೆಗೆ ಬಿಸಿ ಊಟ ಯೋಜನೆಯ ಗೌರವಧನ ಪಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಶಾಮಿಲ್ ಆಗಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕಾಡ ತೊಡಗಿದೆ..
ಕರ್ನಾಟಕ ಲೋಕಾಯುಕ್ತಕ್ಕೆ ಪ್ರಕರಣ ದಾಖಲಿಸಲು ಮುಂದಾದ ಸಾಮಾಜಿಕ ಕಾರ್ಯಕರ್ತರು.
ಅಲಗೇರಿ ಪಂಚಾಯ್ತಿಯ ಸದಸ್ಯೆಯು ಏಕ ಕಾಲದಲ್ಲಿ ಎರಡು ಕಡೆ ಗೌರವ ಧನ 4 ವರ್ಷಗಳಿಂದ ನಿರಾತಂಕವಾಗಿ ಪಡೆಯುತ್ತಾ ಬಂದಿದ್ದು . ಲಕ್ಷಾಂತರ ರೂಪಾಯಿ ವಂಚನೆ ಪ್ರಕರಣ ನಡೆದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ವಕ್ರದಸ್ಟಿ ಸದಸ್ಯೆಯ ಮೇಲೆ ಬಿದ್ದು ಶನಿದೆಸೆ ಪ್ರಾರಂಭವಾಗಿದೆ. ಈ ಭಾರಿ ಗ್ರಾಮ ಪಂಚಾಯತಿ ಸದಸ್ಯೆ ಯನ್ನು ಗಜಾನನ ಪರಮಾತ್ಮನೇ ಬಂದರು ಕಾಪಾಡೋದು ಅನುಮಾನವಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯ ಅತಿಥಿ ಉಪನ್ಯಾಸಕರಾಗಿ ಕೆಲಸವನ್ನು ನಿರ್ವಹಿಸಬಹುದೇ?
1993 ಕರ್ನಾಟಕ ಆಕ್ಟ್ 14] ಪಂಚಾಯತ್ ರಾಜ್ 12 (ಜಿ) ಪ್ರಕಾರ ರಾಜ್ಯ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಯಾವುದೇ ಸ್ಥಳೀಯ ಅಥವಾ ಯಾವುದೇ ಇತರ ಪ್ರಾಧಿಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಸದಸ್ಯರಾಗಲು ಅರ್ನಹರಾಗುತ್ತಾರೆ ಎಂಬುದಾಗಿ ಸ್ಪಷ್ಟಪಡಿಸಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾದ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ ಹೊರಡಿಸಲಾದ ಜ್ಞಾಪನದಲ್ಲಿನ ನೀಡಲಾದ ಸೂಚನೆಗಳನ್ನು ಕ್ಷೇತ್ರ ಮಟ್ಟದಲ್ಲಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ/ ಜಿಲ್ಲಾ ಉಪನಿರ್ದೇಶಕರು ಈ ಕುರಿತು ಗಮನಿಸದೇ ಅನಾವಶ್ಯಕವಾಗಿ ಪತ್ರ ವ್ಯವಹರಿಸಿರುವುದನ್ನು ತೀವ್ರವಾಗಿ ಪರಿಗಣಿಸಿದೆ.
ರಾಜ್ಯದ ಸರ್ಕಾರಿ ಪ್ರಾಥಮಿಕ/ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಸಂಬಂಧ ನೀಡಲಾದ ಷರತ್ತುಗಳನ್ನು ಪಾಲಿಸಿ ಮಾತ್ರ ನೇಮಕ ಮಾಡಿಕೊಳ್ಳಲು ತಿಳಿಸಿದೆ. ತಪ್ಪಿದಲ್ಲಿ ಷರತ್ತುಗಳನ್ನು ಪಾಲಿಸದ ಸಂಬಂಧಪಟ್ಟ ಶಾಲಾ ಮುಖ್ಯ ಶಿಕ್ಷಕರ ಸಹಿತ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕರ ಮೇಲೆ ಚಾಲ್ತಿ ನಿಯಮಗಳಂತೆ ಕ್ರಮಕೈಗೊಳ್ಳದ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಿದ ಪ್ರಕರಣಗಳು ನಮ್ಮ ರಾಜ್ಯಲ್ಲಿಯೇ ನಡೆದಿದೆ.
ಇದೇ ರೀತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಏಕಕಾಲದಲ್ಲಿ ಎರಡು ಕಡೆ ಗೌರವಧನ ಪಡೆಯುತ್ತಿರುವರಿಗೂ ಈ ನಿಯಮ ಅನ್ವಯವಾಗಲಿದೆಯೇ ಎಂದು ಕಾನೂನಾತ್ಮಕತೆ ಕುರಿತು ಪ್ರಶ್ನೆ ಮೂಡಿದೆ..
ವರದಿ: ಕಿರಣ ಚಂದ್ರಹಾಸ ಗಾಂವಕರ