ಅಂಕೋಲಾ: ಮಗನೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಅವಘಡ; ಬೈಕ್ ಗೆ ಆಟೋ ಡಿಕ್ಕಿಯಾಗಿ ವೃದ್ಧೆ ಸಾವು..

News Desk
1 Min Read

ಅಂಕೋಲಾ: ರಕ್ತ ಪರೀಕ್ಷೆಗಾಗಿ ಮಗನ ಜೊತೆ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರು ಆಟೋ ರಿಕ್ಷಾ ಡಿಕ್ಕಿಯಾದ ಪರಿಣಾಮ ಸಾವನ್ನಪ್ಪಿರುವ ದಾರುಣ ಘಟನೆ ಪಟ್ಟಣದ ಅಂಬಾರಕೊಡ್ಲ ತಿರುವಿನಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ತಾಲೂಕಿನ ಶಿರಕುಳಿ ಗ್ರಾಮದ ನಿವಾಸಿ ಲಲಿತಾ ನಾಯ್ಕ (74) ಮೃತಪಟ್ಟ ದುರ್ದೈವಿ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಶನಿವಾರ ಬೆಳಿಗ್ಗೆ 7.30ರ ಸುಮಾರಿಗೆ ಮಗ ರವಿ ನಾಯ್ಕ ಅವರ ಬೈಕ್ ಹಿಂಬದಿಯಲ್ಲಿ ಕುಳಿತು ಆಸ್ಪತ್ರೆಗೆ ಹೊರಟಿದ್ದರು. ಇವರ ಬೈಕ್ ಅಂಬಾರಕೊಡ್ಲ ಬಳಿಯ ತಿರುವಿನಲ್ಲಿ ಸಾಗುತ್ತಿದ್ದ ವೇಳೆ, ಎದುರಿನಿಂದ ಬಂದ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಲಲಿತಾ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಜ್ಞೆತಪ್ಪಿದ್ದರು. ಕೂಡಲೇ ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸಲಾಯಿತು. ಆದರೆ, ಗಾಯದ ಸ್ವರೂಪ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಜಿಲ್ಲಾಸ್ಪತ್ರೆಗೆ ಕರೆದೊಯ್ಯ ಲಾಗುತ್ತಿತ್ತು. ದುರದೃಷ್ಟವಶಾತ್, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಗೆ ತಲುಪುವ ಮುನ್ನವೇ ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ಈ ಅಪಘಾತದ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Share This Article
Leave a Comment