ಹೈಕೋರ್ಟ್ ಪೀಠದ ವ್ಯಾಪ್ತಿ ಬದಲಾವಣೆಗೆ ಆಕ್ಷೇಪ: ‘ಉತ್ತರ ಕನ್ನಡ ಜಿಲ್ಲೆ’ಯನ್ನು ಧಾರವಾಡ ಪೀಠದಲ್ಲೇ ಮುಂದುವರಿಸಲು ಅಂಕೋಲಾದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಕೆ..

News Desk
2 Min Read

ಪ್ರಸ್ತಾವಿತ ಮಂಗಳೂರು ಸಂಚಾರಿ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸುವ ರಾಜ್ಯ ಸರ್ಕಾರದ ಸಂಭಾವ್ಯ ನಡೆಯನ್ನು ತೀವ್ರವಾಗಿ ವಿರೋಧಿಸಿ, ಅಂಕೋಲಾ ತಾಲೂಕಿನ ವಕೀಲರು, ಬುದ್ಧಿಜೀವಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಶನಿವಾರ ಉಪ ತಹಶೀಲ್ದಾರ್ ಗಿರೀಶ್ ಜಾಂಬಳಿಕರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಜನರ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ನೂತನ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಭೌಗೋಳಿಕವಾಗಿ ಅಂತರ ಹೊಂದಿರುವ ಹಾಗೂ ಪ್ರಸ್ತುತ ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವ ಪ್ರಸ್ತಾಪಕ್ಕೆ ತಾಲೂಕಿನ ಸಮಾನ ಮನಸ್ಕರು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಧಾರವಾಡವೇ ನಮಗೆ ಅನುಕೂಲ:“ಉತ್ತರ ಕನ್ನಡ ಜಿಲ್ಲೆಯ ಕಕ್ಷಿದಾರರು ಮತ್ತು ವಕೀಲರು ಈ ಹಿಂದಿನಿಂದಲೂ ಧಾರವಾಡ ಹೈಕೋರ್ಟ್ ಸಂಚಾರಿ ಪೀಠದ ವ್ಯಾಪ್ತಿಯಲ್ಲೇ ಇದ್ದು, ಇದು ನಮಗೆ ಭೌಗೋಳಿಕವಾಗಿ ಹತ್ತಿರವಾಗಿದೆ. ಅಂಕೋಲಾದಿಂದ ಧಾರವಾಡಕ್ಕೆ ಕೇವಲ 150 ಕಿ.ಮೀ ದೂರವಿದ್ದು, ಪ್ರಯಾಣ ಸುಲಭವಾಗಿದೆ. ಆದರೆ ಮಂಗಳೂರಿಗೆ 275 ಕಿ.ಮೀ ದೂರವಿದ್ದು, ಅಲ್ಲಿಗೆ ಹೈಕೋರ್ಟ್ ಕಲಾಪಗಳಿಗೆ ತೆರಳುವುದು ಜನಸಾಮಾನ್ಯರಿಗೆ ತೀವ್ರ ಆರ್ಥಿಕ ಹೊರೆ ಹಾಗೂ ಸಮಯದ ನಷ್ಟವನ್ನು ಉಂಟುಮಾಡಲಿದೆ. ಅಲ್ಲದೆ, ಶೀಘ್ರದಲ್ಲೇ ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗವೂ ಆರಂಭವಾಗಲಿರುವುದರಿಂದ ಧಾರವಾಡದ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ. ಹೀಗಾಗಿ, ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು,” ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.

ತಾಲೂಕು ಆಡಳಿತದ ಮೂಲಕ ಮನವಿ ಸಲ್ಲಿಸುತ್ತಿರುವುದು

ಕಾರವಾರದಲ್ಲಿ ಪೀಠ ಸ್ಥಾಪಿಸಿ- ಹೋರಾಟದ ಎಚ್ಚರಿಕೆ:

ಒಂದು ವೇಳೆ ಉತ್ತರ ಕನ್ನಡ ಜಿಲ್ಲೆಯನ್ನೊಳ ಗೊಂಡಂತೆ ಪ್ರತ್ಯೇಕ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸುವ ಉದ್ದೇಶವಿದ್ದಲ್ಲಿ, ಅದನ್ನು ಭೌಗೋಳಿಕವಾಗಿ ಮಧ್ಯವರ್ತಿ ಸ್ಥಳವಾದ ಜಿಲ್ಲಾ ಕೇಂದ್ರ ‘ಕಾರವಾರ’ದಲ್ಲಿಯೇ ಸ್ಥಾಪಿಸಬೇಕು. ಇದನ್ನು ನಿರ್ಲಕ್ಷಿಸಿ ಮಂಗಳೂರಿಗೆ ಸೇರ್ಪಡೆ ಮಾಡಿದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.

ತಾಲೂಕಾಡಳಿತದ ಪರವಾಗಿ ಉಪ ತಹಶೀಲ್ದಾರ್ ಗಿರೀಶ ಜಾಂಬಳಿಕರ್ ಅವರು ಮನವಿ ಪತ್ರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಉಮೇಶ ನಾಯ್ಕ ಅವರು ಮನವಿ ಪತ್ರವನ್ನು ವಾಚಿಸಿದರು. ಪ್ರಮುಖ ವಕೀಲರಾದ ನಾಗನಂದ ಬಂಟ್, ಕಸಾಪ ಅಂಕೋಲಾ ತಾಲೂಕು ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ್,ಪ್ರಸಿದ್ಧ ನಾಟಿ ವೈದ್ಯರಾದ ಹನುಮಂತ ಗೌಡ ಹಾಗೂ ರೋಟರಿ ಕ್ಲಬ್ ಅಂಕೋಲಾ ಅಧ್ಯಕ್ಷರಾದ ಸತೀಶ್ ಕುಮಾರ್ ಎನ್. ಮಹಾಲೆಯವರು ಉಪಸ್ಥಿತರಿದ್ದರು.

Share This Article
Leave a Comment