ಕುಮಟಾ: ಇಲ್ಲಿನ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕಾದ ಪೊಲೀಸ್ ಅಧಿಕಾರಿಯೊಬ್ಬರು ದರ್ಪ ತೋರುತ್ತಿರುವುದು ಮತ್ತು ಕಾನೂನು ಬಾಹಿರವಾಗಿ ದಂಡ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕುಮಟಾ ಪಿಎಸ್ಐ ಖಾದರ್ ಭಾಷಾ ಅವರ ವರ್ತನೆಯನ್ನು ಖಂಡಿಸಿ, ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಡಿಐಜಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಕೆಪಿಸಿಸಿ ಮುಖಂಡ ಮಂಜುನಾಥ ಎಲ್. ನಾಯ್ಕ ಎಚ್ಚರಿಸಿದ್ದಾರೆ.
ಕುಮಟಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ನಾಯ್ಕ, ಮೇ 8ರಂದು ಧಾರೇಶ್ವರದ ಅಕ್ಷಯ ನಾಯ್ಕ ಎಂಬ ಯುವಕ ಹೆಗಡೆ ಕ್ರಾಸ್ನಿಂದ ಮನೆಗೆ ತೆರಳುತ್ತಿದ್ದಾಗ ಗಿಬ್ ಸರ್ಕಲ್ ಬಳಿ ಪಿಎಸ್ಐ ಖಾದರ್ ಭಾಷಾ ತಡೆದಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಎದುರೇ ಅಕ್ಷಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅತ್ಯಂತ ಅವಮಾನಕಾರಿಯಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸಂತ್ರಸ್ತ ಅಕ್ಷಯ ನಾಯ್ಕ ಹೇಳಿಕೆ: ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ತೊಂದರೆಗೊಳಗಾದ ಯುವಕ ಅಕ್ಷಯ ನಾಯ್ಕ ಮಾತನಾಡಿ ಘಟನೆಯನ್ನು ವಿವರಿಸಿದರು. “ಮೇ 8ರ ಸಂಜೆ ನಾನು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಪಿಎಸ್ಐ ನನ್ನನ್ನು ತಡೆದು ಸಾರ್ವಜನಿಕರ ಎದುರು ಅಸಭ್ಯವಾಗಿ ನಿಂದಿಸಿದರು. ನಾನು ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ವಿಧಿಸುವುದು ಕಾನೂನುಬದ್ಧ, ಅದಕ್ಕೆ ನನ್ನ ಅಭ್ಯಂತರವಿರಲಿಲ್ಲ. ಆದರೆ, ಯಾವುದೇ ಸಾಕ್ಷ್ಯವಿಲ್ಲದೆ ‘ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ’ ಎಂಬ ಸುಳ್ಳು ಆರೋಪ ಹೊರಿಸಿ ಒಟ್ಟು 3000 ರೂ. ದಂಡ ವಿಧಿಸಿದರು. ಇದರಲ್ಲಿ 1000 ರೂ. ನಗದಾಗಿ ಪಡೆದು ಯಾವುದೇ ಅಧಿಕೃತ ರಸೀದಿ ನೀಡಲಿಲ್ಲ. ಉಳಿದ 2000 ರೂ.ಗಳನ್ನು ಫೋನ್ ಪೇ ಮೂಲಕ ಒತ್ತಾಯಪೂರ್ವಕವಾಗಿ ಪಡಕೊಂಡು ಕೇವಲ ಆ ಮೊತ್ತಕ್ಕೆ ಮಾತ್ರ ರಸೀದಿ ನೀಡಿದ್ದಾರೆ. ಇದು ಅಧಿಕಾರಿಯ ಅಕ್ರಮ ವಸೂಲಿ ಮತ್ತು ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತದೆ,” ಎಂದು ಅವರು ನೋವು ತೋಡಿಕೊಂಡರು.
ಮಂಜುನಾಥ ನಾಯ್ಕ ಅವರು ಮಾತು ಮುಂದುವರೆಸಿ, “ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನ, ಬಾಡಿ ಕ್ಯಾಮರಾಗಳನ್ನು ನೀಡಿದ್ದರೂ, ವಾಹನ ತಪಾಸಣೆ ವೇಳೆ ಅವುಗಳನ್ನು ಬಳಸದೆ ಹೆದ್ದಾರಿಯಲ್ಲಿ ಬೈಕ್ ಸವಾರರನ್ನು ಬಲವಂತವಾಗಿ ಎಳೆದಾಡುವುದು ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಪೊಲೀಸ್ ಮ್ಯಾನುವಲ್ ಪ್ರಕಾರ ಸಾರ್ವಜನಿಕರೊಂದಿಗೆ ಗೌರವದಿಂದ ವರ್ತಿಸಬೇಕು. ಮೊಬೈಲ್, ಕೀ ಕಸಿಯುವುದು ಸರಿಯಲ್ಲ. ಅಕ್ಷಯ ತಪ್ಪು ಮಾಡಿರುವುದಕ್ಕೆ ಸಾಕ್ಷ್ಯ ನೀಡಿದರೆ ನಾವು ಕ್ಷಮೆ ಯಾಚಿಸಲು ಸಿದ್ಧ, ಇಲ್ಲವಾದರೆ ತಪ್ಪು ಮಾಡಿದ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮವಾಗಬೇಕು ಎಂದು ಒತ್ತಾಯಿಸಿದರು.”
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರಾದ ಹರೀಶ್ ಶೆಟ್ಟಿ,- “ಕುಮಟಾ ಪಟ್ಟಣದ ಶಾಂತಿಯುತ ವಾತಾವರಣ ಮತ್ತು ವಿವಿಧ ಸಮುದಾಯಗಳ ನಡುವಿನ ಸಾಮರಸ್ಯವು ಹೊಸದಾಗಿ ಬಂದಿರುವ ಅಧಿಕಾರಿಯ ದರ್ಪದಿಂದ ಕದಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಗೋಕರ್ಣದಲ್ಲಿದ್ದಾಗಲೂ ಇದೇ ಅಧಿಕಾರಿ ತಮ್ಮದೇ ಇಲಾಖೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಅದೇ ದರ್ಪವನ್ನು ಇಲ್ಲಿಯೂ ಮುಂದುವರೆಸಿ, ಯುವಕರನ್ನು ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸುತ್ತಿರುವುದು ತೀವ್ರ ಖಂಡನೀಯ. ಇಂತಹ ವರ್ತನೆಗಳು ಸೂಕ್ಷ್ಮ ಮನಸ್ಸಿನ ಯುವಕರನ್ನು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳಿಗೆ ದೂಡುವ ಅಪಾಯವಿರುತ್ತದೆ. ಪೊಲೀಸ್ ಇಲಾಖೆಯು ಜನರಿಗೆ ರಕ್ಷಣೆ ನೀಡುವ ಮೂಲಕ ವಿಶ್ವಾಸ ಗಳಿಸಬೇಕೇ ಹೊರತು, ಭಯದ ವಾತಾವರಣ ಸೃಷ್ಟಿಸಬಾರದು ಎಂದು ಅವರು ಹೇಳಿದರು”.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಗಜು ನಾಯ್ಕ ಅಳ್ವೆಕೋಡಿ, ಸಂದೇಶ ಶೆಟ್ಟಿ, ಸುರೇಶ ಹರಿಕಂತ್ರ, ಈಶ್ವರ ಮುಕ್ತಿ, ಗೋಪಾಲ ನಾಯ್ಕ ಮೂರೂರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.


