ಕಾರವಾರ (ಮೇ 4): ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮುಕ್ತಂಹುಸೇನ ಕರಡಿಗುಡ್ಡ ಅವರ ಆತ್ಮಹತ್ಯೆಯನ್ನು ಖಂಡಿಸಿ ಹಾಗೂ ಪ್ರಕರಣದ ಸಮಗ್ರ ತನಿಖೆ ಆಗ್ರಹಿಸಿ, ಕರ್ನಾಟಕ ರಾಜ್ಯ ಪಂಚಾಯತ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಗಿರೀಶ್ ನಾಯಕ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿಗೆ ಮನವಿ ಸಲ್ಲಿಸಲಾಯಿತು.
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಬರೆದ ಈ ಮನವಿಯನ್ನು ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿಗಳಾದ ಅಲ್ಲಾ ಬಕ್ಷ್ ಮತ್ತು ಪ್ರಕಾಶ್ ಹಾಲಮ್ಮನವರ್ ಅವರಿಗೆ ಅಧಿಕಾರಿಗಳು ಒಗ್ಗೂಡಿ ಹಸ್ತಾಂತರಿಸಿದರು.

ಕೆಲಸದ ಒತ್ತಡ ಮತ್ತು ಆರ್ಥಿಕ ಮುಗ್ಗಟ್ಟಿಗೆ ಬಲಿಯಾದ ಅಧಿಕಾರಿ
ಇತ್ತೀಚೆಗೆ ಅಸೂಟಿ ಹಾಗೂ ಕೊತಬಾಲ 2 ಗ್ರಾಮ ಪಂಚಾಯತಿಗಳಲ್ಲಿ ಹೆಚ್ಚುವರಿ ಪ್ರಭಾರ ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದ 46 ವರ್ಷದ ಮುಕ್ತಂಹುಸೇನ ಕರಡಿಗುಡ್ಡ ಅವರು ಅತಿಯಾದ ಕೆಲಸದ ಒತ್ತಡ ಹಾಗೂ ಹಿಂದಿನ ಪ್ರಕರಣವೊಂದರ ಮೇಲಿದ್ದ ಲೋಕಾಯುಕ್ತ ತನಿಖೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದೆ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅಮಾನತುಗೊಂಡಿದ್ದ ಅವರಿಗೆ ಕಳೆದ 8 ರಿಂದ 9 ತಿಂಗಳುಗಳಿಂದ ವೇತನ ಪಾವತಿಯಾಗಿರಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದಾಗಿ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಪತ್ನಿ ಉದ್ಯೋಗ ಅರಸಿ ಬೆಂಗಳೂರಿಗೆ ತೆರಳುವ ಸ್ಥಿತಿ ಬಂದಿತ್ತು. ಸಣ್ಣ ಮಕ್ಕಳ ಭವಿಷ್ಯ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಅವರು ಅನುಭವಿಸಿದ ಮಾನಸಿಕ ಯಾತನೆ ಈ ದುರಂತಕ್ಕೆ ಕಾರಣವಾಗಿದೆ ಎಂದು ಸಂಘವು ತೀವ್ರ ಕಳವಳ ವ್ಯಕ್ತಪಡಿಸಿದೆ.
ಸಂಘದ ಪ್ರಮುಖ ಬೇಡಿಕೆಗಳು: ಮುಕ್ತಂಹುಸೇನ ಅವರ ಸಾವಿನ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು ಮತ್ತು ಅವರ ಕುಟುಂಬಕ್ಕೆ ಸಿಗಬೇಕಾದ ಬಾಕಿ ವೇತನ ಹಾಗೂ ಆರ್ಥಿಕ ಸೌಲಭ್ಯಗಳನ್ನು ತಕ್ಷಣವೇ ಬಿಡುಗಡೆ ಮಾಡಿ, ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಒಂದೇ ಹುದ್ದೆಯಲ್ಲಿ 10 ರಿಂದ 15 ವರ್ಷಗಳಿಂದ ಇರುವ ಆಯುಕ್ತಾಲಯ, ಜಿ.ಪಂ. ಮತ್ತು ತಾ.ಪಂ. ಕಚೇರಿ ಸಿಬ್ಬಂದಿಗಳಿಗೆ ಕಡ್ಡಾಯ ವರ್ಗಾವಣೆ ನಿಯಮ ಜಾರಿಗೊಳಿಸಬೇಕು. ಒಬ್ಬರೇ ಅಧಿಕಾರಿಗೆ 2 ಪಂಚಾಯತಿಗಳ ಹೆಚ್ಚುವರಿ ಹೊರೆ ನೀಡಬಾರದು ಮತ್ತು ಒತ್ತಡ ರಹಿತ ಕೆಲಸದ ವಾತಾವರಣ ಸೃಷ್ಟಿಸಬೇಕು. ಸಣ್ಣಪುಟ್ಟ ಕಾರಣಗಳಿಗೆ ಏಕಾಏಕಿ ಅಮಾನತು ಮಾಡುವುದನ್ನು ನಿಲ್ಲಿಸಿ, ವಿಚಾರಣೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಘವು ಆಗ್ರಹಿಸಿದೆ.

ಮನವಿ ಸಲ್ಲಿಕೆ ವೇಳೆ ಹಾಜರಿದ್ದ ಪ್ರಮುಖರು:
ಈ ಮನವಿಯನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಅಲ್ಲಾ ಬಕ್ಷ ಹಾಗೂ ಪ್ರಕಾಶ ಹಾಲಮ್ಮನವರ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ), ನೌಕರರ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್, ಪಿಡಿಒ ಸಂಘದ ಅಧ್ಯಕ್ಷ ಗಿರೀಶ್ ನಾಯಕ್, ತಾಲೂಕು ಅಧ್ಯಕ್ಷರಾದ ಸಂದೀಪ್ ಗೌಡ, ಮಹಾದೇವ್ ಗೌಡ, ಹರ್ಷ ರಾಥೋಡ್, ಭೀಮ ನಾಯ್ಕ್ ಮತ್ತು ವೆಂಕಟೇಶ್ ಕಾಂಬಳೆ ಉಪಸ್ಥಿತರಿದ್ದರು. ಅಲ್ಲದೆ ಸಂಘದ ಗೌರವಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷರಾದ ರಿಯಾಜ್ ಮತ್ತು ಪವಿತ್ರ ತಾರ್ಕರ್, ಸಂಘಟನಾ ಕಾರ್ಯದರ್ಶಿಗಳಾದ ಗಿರೀಶ್ ತಳವಾರ್ ಮತ್ತು ಸೀತಾ ಮೇತ್ರಿ, ಪ್ರಧಾನ ಕಾರ್ಯದರ್ಶಿ ನಜೀರ್ ಸಾಬ್ ಅಕ್ಕಿ, ರಾಜ್ಯ ಪರಿಷತ್ ಸದಸ್ಯ ಅಣ್ಣಪ್ಪ ಮುಕ್ರಿ ಸೇರಿದಂತೆ ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ವಿಕಾಸ ವಾಹಿನಿ ವರದಿ

