ಅಂಕೋಲಾ: ಅಂಕೋಲಾ ಪಟ್ಟಣದ ಕೋಟೆವಾಡ ಪ್ರದೇಶದಲ್ಲಿ ಆರಂಭವಾದ ಹುಚ್ಚುನಾಯಿ ಅಟ್ಟಹಾಸ ಇದೀಗ ಕೇವಲ ಒಂದೇ ಪ್ರದೇಶಕ್ಕೆ ಸೀಮಿತವಾಗದೆ, ಇಡೀ ಅಂಕೋಲಾ ತಾಲ್ಲೂಕಿನ ಸಾರ್ವಜನಿಕ ಸುರಕ್ಷತೆಗೆ ಸವಾಲಾಗಿ ಪರಿಣಮಿಸಿದೆ. ಕಳೆದ ಕೆಲ ದಿನಗಳಿಂದ ಕೋಟೆವಾಡದಲ್ಲಿ ಓಡಾಡುತ್ತಿದ್ದ ಹುಚ್ಚುನಾಯಿ ಅನೇಕ ನಾಯಿ ಮರಿಗಳನ್ನು ಕಚ್ಚಿ ಕೊಂದು ಹಾಕಿರುವ ಘಟನೆಗಳು ನಡೆದಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಉಂಟಾಗಿದೆ.
ಇದೇ ಹುಚ್ಚುನಾಯಿ ನಿನ್ನೆ ದಿನಾಂಕ 7-01-2026ರಂದು ಕೋಟೆವಾಡ ಸಮೀಪದ ಮಹಿಳೆಯೊಬ್ಬರಿಗೆ ಕಚ್ಚಿರುವ ಘಟನೆ ಇನ್ನಷ್ಟು ಗಂಭೀರ ಸ್ವರೂಪ ಪಡೆದಿದೆ. ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಅಂಕೋಲಾ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೈದ್ಯರು ಅಗತ್ಯ ಪ್ರಥಮೋಪಚಾರ ಹಾಗೂ ರೇಬೀಸ್ ವಿರೋಧಿ ಲಸಿಕೆಗಳನ್ನು ನೀಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಗಳು ವಿಷಯದ ಗಂಭೀರತೆಯನ್ನು ಅರಿತು ಪುರಸಭೆಗೆ ತಕ್ಷಣ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಆದರೆ, ಈ ಮಾಹಿತಿಯ ನಂತರವೂ ಪುರಸಭೆಯಿಂದ ನಿರೀಕ್ಷಿತ ಮಟ್ಟದ ಸ್ಪಂದನೆ ದೊರಕಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಹುಚ್ಚುನಾಯಿಯನ್ನು ತಕ್ಷಣ ಹಿಡಿದು ನಿಯಂತ್ರಿಸಬೇಕಾದ ಜವಾಬ್ದಾರಿಯನ್ನು ಪುರಸಭೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ, “ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ” ಎಂಬ ಧೋರಣೆಯ ಪ್ರತಿಕ್ರಿಯೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ ಎನ್ನಲಾಗಿದೆ.
ಈ ನಡುವೆಯೇ, ಹುಚ್ಚುನಾಯಿ ಕೋಟೆವಾಡ ಪ್ರದೇಶದಿಂದ ಬೇರೆಡೆಗೆ ಓಡಿ ಹೋಗಿರುವ ಮಾಹಿತಿ ಲಭ್ಯವಾಗಿದ್ದು, ಇನ್ನಷ್ಟು ಅನಾಹುತಗಳ ಸಂಭವದ ಭೀತಿ ಹೆಚ್ಚಾಗಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಈ ಪ್ರದೇಶದಲ್ಲಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಶಾಲೆಗೆ ತೆರಳುವ ಮಾರ್ಗಗಳಲ್ಲೇ ಬೀದಿ ನಾಯಿಗಳ ಸಂಚಾರ ಹೆಚ್ಚಿರುವುದು. ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಮಕ್ಕಳು ರಸ್ತೆಯಲ್ಲಿ ಸಂಚರಿಸುವಾಗ ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ಒಂದು ಘಟನೆ ಈಗಾಗಲೇ ನಡೆದಿರುವ ಹಿನ್ನೆಲೆಯಲ್ಲಿ, ಮಕ್ಕಳ ಸುರಕ್ಷತೆ ಕುರಿತು ಪೋಷಕರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೋಟೆವಾಡ ಮಾತ್ರವಲ್ಲದೆ, ಅಂಕೋಲಾ ಪಟ್ಟಣ ಮತ್ತು ತಾಲ್ಲೂಕಿನ ಹಲವು ಭಾಗಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ತಪ್ಪಿದಂತಾಗಿದೆ. ಪುರಸಭೆಯ ಮುಖ್ಯ ಕಚೇರಿ ಎದುರು ಹಾಗೂ ಮುಕ್ತಿ ಧಾಮದ ಆವರಣದಲ್ಲಿ 20ಕ್ಕೂ ಹೆಚ್ಚು ನಾಯಿಗಳು ನಿರಾಳವಾಗಿ ಮಲಗಿಕೊಂಡಿರುವ ದೃಶ್ಯಗಳು ಆಡಳಿತದ ವೈಫಲ್ಯವನ್ನು ತೋರಿಸುತ್ತವೆ ಎಂಬ ಸಾರ್ವಜನಿಕ ಆರೋಪಗಳು ಕೇಳಿಬರುತ್ತಿವೆ.
ಜನಸಂಚಾರ ಹೆಚ್ಚಿರುವ ಈ ಪ್ರದೇಶಗಳಲ್ಲಿ ನಾಯಿಗಳ ವಿಸ್ತರಣೆ ನಡೆಯುತ್ತಿದ್ದರೂ, ಸ್ಥಳಾಂತರ ಮತ್ತು ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಸಮಗ್ರ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಜನರ ಅಸಮಾಧಾನವಾಗಿದೆ.

ಹುಚ್ಚುನಾಯಿಯನ್ನು ಹೀಗೇ ಕೊಂದು ಹಾಕಲು ಕಾನೂನು ಅವಕಾಶ ಇಲ್ಲ ಎಂಬುದು ಸತ್ಯ. ಆದರೆ ಜನರ ಜೀವಕ್ಕೆ ತಕ್ಷಣದ ಅಪಾಯ ಉಂಟಾಗುವ ಸಂದರ್ಭಗಳಲ್ಲಿ, ಪಶುವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮಾನವೀಯ ವಿಧಾನದಲ್ಲಿ (euthanasia) ಕ್ರಮ ಕೈಗೊಳ್ಳಲು ಕಾನೂನು ಅವಕಾಶ ಇದೆ. ಇದನ್ನು ಕೈಗೊಳ್ಳದೆ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಕಾನೂನುಬದ್ಧವಾಗಿಯೂ, ನೈತಿಕವಾಗಿಯೂ ಪ್ರಶ್ನಾರ್ಹವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ನಾಯಿಗಳ ನಿಯಂತ್ರಣವು ಒಂದು ಪ್ರದೇಶದ ಸಮಸ್ಯೆಯಲ್ಲ, ಅಂಕೋಲಾ ತಾಲ್ಲೂಕು ಮಟ್ಟದ ಗಂಭೀರ ಸಾರ್ವಜನಿಕ ಸುರಕ್ಷತಾ ವಿಷಯ ಎಂಬುದು ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿ ಹಾಗೂ ಸರ್ಕಾರದ ನಿಯಮಾವಳಿಗಳಂತೆ ಬೀದಿ ನಾಯಿಗಳ ಹಿಡಿತ, ಲಸಿಕೆ, ಸ್ಥಳಾಂತರ ಮತ್ತು ನಿಗಾ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.“ಒಬ್ಬ ಮಹಿಳೆಗೆ ನಾಯಿ ಕಚ್ಚಿದರೂ ಆಡಳಿತ ಎಚ್ಚೆತ್ತುಕೊಳ್ಳದಿದ್ದರೆ, ಶಾಲಾ ಮಕ್ಕಳಿಗೆ ಏನಾದರೂ ಅನಾಹುತವಾದರೆ ಅದರ ಹೊಣೆ ಯಾರು?” ಎಂಬ ಪ್ರಶ್ನೆ ಈಗ ಅಂಕೋಲಾ ತಾಲ್ಲೂಕಿನಾದ್ಯಂತ ಪ್ರತಿಧ್ವನಿಸುತ್ತಿದೆ. ಜಿ
ಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಹಸ್ತಕ್ಷೇಪ ಮಾಡಿ, ಹುಚ್ಚುನಾಯಿ ಹಾಗೂ ಬೀದಿ ನಾಯಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬುದು ಸಾರ್ವಜನಿಕರ ಬಲವಾದ ಆಗ್ರಹವಾಗಿದೆ.
ವರದಿ: ಕಿರಣ ಗಾಂವಕರ

