ಅಂಕೋಲಾ: ಕಾಲೇಜಿಗೆ ತೆರಳಿದ್ದ ಡಿಪ್ಲೋಮಾ ವಿದ್ಯಾರ್ಥಿ ಮನೆಗೆ ಮರಳಿಲ್ಲ; ಅಪಹರಣದ ಶಂಕೆ, ದೂರು ದಾಖಲು..

News Desk
1 Min Read

ಅಂಕೋಲಾ: ತಾಲೂಕಿನ ಸುಂಕಸಾಳದ ಮರಾಠಿಕೊಪ್ಪ ಗ್ರಾಮದ ಡಿಪ್ಲೋಮಾ ವಿದ್ಯಾರ್ಥಿಯೋರ್ವ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದವನು ಇಂದಿನವರೆಗೂ ಮನೆಗೆ ವಾಪಸ್ಸಾಗದ ಘಟನೆ ನಡೆದಿದ್ದು, ಈ ಕುರಿತು ಆತನ ತಂದೆ ಅಪಹರಣದ ಶಂಕೆ ವ್ಯಕ್ತಪಡಿಸಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮರಾಠಿಕೊಪ್ಪದ ನಿವಾಸಿ ಮಂಜುನಾಥ ಪ್ರಕಾಶ ಗಾಂವ್ಕರ ಅವರ ಮಗನಾದ 17 ವರ್ಷದ ಕು. ರಾಘವೇಂದ್ರ ಗಾಂವ್ಕರ ಕಾರವಾರದ ಡಿಪ್ಲೋಮಾ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ದಿನಾಂಕ 03-01-2026 ರಂದು ಬೆಳಿಗ್ಗೆ 07:00 ಗಂಟೆಗೆ ಎಂದಿನಂತೆ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟವನು ಸಂಜೆಯಾದರೂ ಮನೆಗೆ ಬಂದಿರುವುದಿಲ್ಲ. ತಮ್ಮ ಮಗನನ್ನು ಯಾರೋ ಪುಸಲಾಯಿಸಿ ಅಪಹರಣ ಮಾಡಿರಬಹುದು ಎಂದು ಪಾಲಕರು ಸಂಶಯ ವ್ಯಕ್ತಪಡಿಸಿದ್ದು, ಈ ಕುರಿತು ಅಂಕೋಲಾ ಪೊಲೀಸರು ಬಿ.ಎನ್.ಎಸ್-2023 ರ ಕಲಂ 137(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿದ್ಯಾರ್ಥಿಯ ಚಹರೆ ಗುರುತಿನ ವಿವರ ನೋಡುವುದಾದರೆ, ಈತನು ಸುಮಾರು 5 ಅಡಿ 8 ಇಂಚು ಎತ್ತರವಿದ್ದು, ಎಣ್ಣಿಗೆಂಪು ಮೈಬಣ್ಣ, ಉದ್ದನೆಯ ಮುಖ ಹಾಗೂ ತೆಳ್ಳನೆಯ ಮೈಕಟ್ಟು ಹೊಂದಿದ್ದಾನೆ. ಅಲ್ಲದೆ ಈತನ ಎರಡೂ ಮೊಣಕಾಲಿನ ಮೇಲೆ ಹಳೆಯ ಗಾಯದ ಗುರುತುಗಳಿದ್ದು, ಕನ್ನಡ ಮತ್ತು ಕೊಂಕಣಿ ಭಾಷೆಯನ್ನು ಮಾತನಾಡುತ್ತಾನೆ. ಮನೆಯಿಂದ ಹೊರಡುವಾಗ ಈತನು ಹಸಿರು ಬಣ್ಣದ ಗೆರೆಯುಳ್ಳ ಬಿಳಿ ಬಣ್ಣದ ಶರ್ಟ್, ಹಸಿರು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಚಪ್ಪಲಿಯನ್ನು ಧರಿಸಿರುತ್ತಾನೆ.

ಈ ಚಹರೆಯುಳ್ಳ ಬಾಲಕನ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ಅಂಕೋಲಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: (08388) 220333 ಅಥವಾ ಮೊಬೈಲ್ ಸಂಖ್ಯೆಗಳಾದ 9480805250 / 9480805268 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

Share This Article