ಅಂಕೋಲಾ: ಗೋಕರ್ಣ ಕಡೆಗೆ ದೂರದ ಬಾಡಿಗೆಗಾಗಿ ಪ್ರಯಾಣಿಕರೊಂದಿಗೆ ಹೊರಟಿದ್ದ ಆಟೋ ರಿಕ್ಷಾವನ್ನು, ಅಂಕೋಲ ಗಜಾನನ ಟ್ಯಾಕ್ಸಿ ಸಂಘದ ಸದಸ್ಯರು ದಾರಿ ಮಧ್ಯದಲ್ಲೇ ತಡೆದು ಹಿಡಿದು ಎಚ್ಚರಿಕೆ ನೀಡಿದ ಘಟನೆ ಗುರುವಾರ ನಡೆದಿದೆ. ಇನ್ನೊಂದು ಗಂಭೀರವಾದ ವಿಷಯ ಅದೇ ಆಟೋ ರಿಕ್ಷಾದಲ್ಲಿ ಅಪ್ರಾಪ್ತ ಯುವಕ ಪ್ರಯಾಣಿಕರನ್ನು ಗೋಕರ್ಣಕ್ಕೆ ಕುಳ್ಳಿರಿಸಿ ವೇಗವಾಗಿ ಚಲಿಸಿಕೊಂಡು ಹೋಗಿದ್ದ ಎಂದು ಆತಂಕಕಾರಿ ವಿಷಯ ತಿಳಿದು ಬಂದಿದೆ.

ಸರ್ಕಾರದ ನಿಯಮಾನುಸಾರ ಆಟೋ ರಿಕ್ಷಾಗಳು ಗರಿಷ್ಠ 7 ಕಿ.ಮೀ ವ್ಯಾಪ್ತಿಯೊಳಗೆ ಮಾತ್ರ ಬಾಡಿಗೆ ಹೊಡೆಯಲು ಅನುಮತಿ ಇದ್ದರೂ, ಕಳೆದ ಕೆಲ ತಿಂಗಳುಗಳಿಂದ ಅಂಕೋಲದಿಂದ ಗೋಕರ್ಣ, ಕುಮಟಾ, ಹೊನ್ನಾವರ, ಭಟ್ಕಳ ಸೇರಿದಂತೆ ದೂರದ ಮಾರ್ಗಗಳಿಗೂ ರಿಕ್ಷಾದವರು ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವುದು ಇದರಿಂದ ಟ್ಯಾಕ್ಸಿ ಚಾಲಕರ ಜೀವನೋಪಾಯಕ್ಕೆ ದೊಡ್ಡ ಹೊಡೆತವಾಗಿದೆ ಪರಿಣಮಿಸಿದೆ.ಯೆಲ್ಲೋ ಬೋರ್ಡ್, ಟ್ಯಾಕ್ಸ್, ಫಿಟ್ನೆಸ್, ಇನ್ಸೂರೆನ್ಸ್ ಸೇರಿದಂತೆ ವರ್ಷಕ್ಕೆ ಲಕ್ಷಾಂತರ ವೆಚ್ಚ ಮಾಡುತ್ತಿದ್ದ ಟ್ಯಾಕ್ಸಿ ಮಾಲೀಕರು ದಿನವಿಡೀ ಪ್ರಯಾಣಿಕರಿಗಾಗಿ ಕಾಯಬೇಕಾದರೆ, ನಿಯಮ ಉಲ್ಲಂಘಿಸುವ ಆಟೋಗಳು ದೂರದ ಬಾಡಿಗೆಯನ್ನು ಕಸಿದುಕೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ಕಾನೂನು ಪಾಲಿಸುವವರಿಗೇ ನಷ್ಟ ಬಿದ್ದಿರುವುದನ್ನು ಅವರು ಗಂಭೀರವಾಗಿ ಪ್ರಶ್ನಿಸಿದ್ದಾರೆ.
ಈ ಘಟನೆ ಸಂದರ್ಭದಲ್ಲಿ ಮಾತನಾಡಿದ ಗಜಾನನ ಟ್ಯಾಕ್ಸಿ ಸಂಘದ ಸದಸ್ಯರು, “ನಾವು ಹಿಂದೆ RTO ಮತ್ತು ಪೊಲೀಸ್ ಠಾಣೆಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಈ ಬಗ್ಗೆ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದರಿಂದ ಈಗ ಸಮಸ್ಯೆ ಹೆಚ್ಚಾಗಿದೆ. ಆಡಳಿತ ಇನ್ನೂ ಮೌನವಾಗಿ ಕುಳಿತುಕೊಂಡರೆ, ಮುಂದಿನ ದಿನಗಳಲ್ಲಿ ನಮ್ಮ ಕ್ರಮ ಗಟ್ಟಿಯಾಗಿರುತ್ತದೆ” ಎಂದು ಎಚ್ಚರಿಕೆ ನೀಡಿದರು.
ದೂರದ ಬಾಡಿಗೆಯನ್ನು ನಂಬಿ ಬದುಕು ನಡೆಸುತ್ತಿದ್ದ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣ ಕಾರ್ಯಾಚರಣೆ ಅವಶ್ಯಕವಾಗಿದೆ ಎಂದು ಶ್ರೀ ಗಜಾನನ ಟ್ಯಾಕ್ಸಿ ಸಂಘ ಆರ್ ಟಿ ಓ. &ಪೋಲಿಸ್ ಇಲಾಖೆಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ವಿಕಾಸ ವಾಹಿನಿ ಮೂಲಕ ಕ್ರಮ ಕೈಗೊಳ್ಳಲು ಆಗ್ರಹಿಸಿದೆ.
ವರದಿ: ಕಿರಣ ಗಾಂವಕರ

