ಅಂಕೋಲಾ ಪುರಸಭೆ: ಹೈಕೋರ್ಟ್ ತೀರ್ಪಿನ ಬಳಿಕ ಸ್ಥಿರತೆ — ಎಚ್. ಅಕ್ಷತಾ ಮತ್ತೆ ಅಧಿಕಾರದಲ್ಲಿ ಮುಂದುವರಿಕೆ, ಜನತೆಗೆ ಅಭಿವೃದ್ಧಿಯ ನಿರೀಕ್ಷೆ..

News Desk
3 Min Read

ಅಂಕೋಲಾ, ನವೆಂಬರ್ 3: ಅಂಕೋಲಾ ಪುರಸಭೆಯೊಳಗಿನ ರಾಜಕೀಯ ಗೊಂದಲ, ರಾಜೀನಾಮೆ ಗದ್ದಲ ಮತ್ತು ಕಾನೂನಾತ್ಮಕ ಹೋರಾಟಗಳ ನಡುವೆ ಇದೀಗ ಸ್ಥಿತಿ ನಿಧಾನವಾಗಿ ಸ್ಪಷ್ಟತೆಯ ಹಾದಿಯತ್ತ ಸಾಗುತ್ತಿದೆ. ಪೌರಾಡಳಿತ ಇಲಾಖೆಯಿಂದ ಅಮಾನತ್ತು ಆದೇಶ ಹೊರಬಿದ್ದ ಬಳಿಕ, ಹೈಕೋರ್ಟ್ ಧಾರವಾಡ ಪೀಠದಿಂದ ತಾತ್ಕಾಲಿಕ ತಡೆಯಾಜ್ಞೆ ದೊರೆತ ಪರಿಣಾಮ, ಮುಖ್ಯಾಧಿಕಾರಿ ಎಚ್. ಅಕ್ಷತಾ ಅವರು ಮತ್ತೆ ಅಧಿಕಾರದಲ್ಲಿರಲು ಅವಕಾಶ ಪಡೆದಿದ್ದಾರೆ. ಅವರು ಇಂದು (3 ನವೆಂಬರ್ 2025) ತಮ್ಮ ಎಂದಿನಂತೆ ಕಚೇರಿಗೆ ಹಾಜರಾಗಿ ನಿತ್ಯ ಕಾರ್ಯ ನಿರ್ವಹಣೆ ಮುಂದುವರಿಸಿದರು.

17 ಅಕ್ಟೋಬರ್ 2025 ರಂದು ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ ನಂತರ, ಕೆಲವು ಚುನಾಯಿತ ಪ್ರತಿನಿಧಿಗಳ ರಾಜೀನಾಮೆ ಎಚ್ಚರಿಕೆ ಹಾಗೂ ಗದ್ದಲದಿಂದ ಪುರಸಭೆಯ ವಾತಾವರಣ ಬಿಸಿ ಆಯಿತು. ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆಯೇ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿತ್ತು. 30 ಅಕ್ಟೋಬರ್ 2025 ರಂದು ಪುನಃ ಜಿಲ್ಲಾ ಆಡಳಿತವು ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ರವರ ಆದೇಶದಂತೆ ಮುಖ್ಯಾಧಿಕಾರಿ ಎಚ್. ಅಕ್ಷತಾ ಅವರಿಗೆ ಅಧಿಕೃತವಾಗಿ ಹುದ್ದೆ ವಹಿಸುವ ಅವಕಾಶ ನೀಡಿತು. ಅದಾದ ನಂತರ 31 ಅಕ್ಟೋಬರ್ 2025ರಂದು ಧಾರವಾಡ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಗೆ ಹಾಜರಾದರು..

31 ಅಕ್ಟೋಬರ್ 2025 ರಂದು ಧಾರವಾಡ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಆ ವಿಚಾರಣೆಯ ಬಳಿಕ ಹಿಂದಿನ ತಾತ್ಕಾಲಿಕ ತಡೆ ಮುಂದುವರಿಯುವಂತಾಗಿದ್ದು, ಮುಖ್ಯಾಧಿಕಾರಿ ಎಚ್. ಅಕ್ಷತಾ ಅವರು ತಮ್ಮ ಹುದ್ದೆಯಲ್ಲಿ ಕಾನೂನಾತ್ಮಕವಾಗಿ ಮುಂದುವರಿಯುತ್ತಿದ್ದಾರೆ. ಹೀಗಾಗಿ ಪೌರಾಡಳಿತ ಇಲಾಖೆಯಿಂದ ಹೊರಡಿಸಲಾದ ಅಮಾನತ್ತು ಸಹಿತ ವರ್ಗಾವಣೆ ಆದೇಶಗಳು ಪ್ರಸ್ತುತ ಸ್ಥಗಿತಗೊಂಡಂತಾಗಿವೆ.

ಇವೆಲ್ಲದರ ಮಧ್ಯೆ, ಪುರಸಭೆಯ ಚುನಾಯಿತ ಸದಸ್ಯರ ಅಧಿಕಾರಾವಧಿ ಕುರಿತು ವಿವಾದವೂ ಎದ್ದಿತ್ತು. ರಾಜ್ಯ ಚುನಾವಣಾ ಆಯೋಗದ ಪಟ್ಟಿ ಪ್ರಕಾರ ಸದಸ್ಯರ ಅವಧಿ 12 ಅಕ್ಟೋಬರ್ 2025 ರಂದು ಮುಗಿದಿದೆ ಎಂದು ಕೋಟೆವಾಡದ ಸಾಮಾಜಿಕ ಹೋರಾಟಗಾರ ಸಂಜೀವ ಪಾಂಡುರಂಗ ನಾಯ್ಕ ಅವರು ಈ ಬಗ್ಗೆ ಅಂಕೋಲಾ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಕಾನೂನು ಸ್ಪಷ್ಟನೆ ಕೇಳಿದ್ದರು.

ಆದರೆ ಕೆಲ ಸದಸ್ಯರು ಸಂಜೀವ ನಾಯ್ಕ ಅವರ ಮನವಿಯನ್ನು ತಪ್ಪಾಗಿ ಅರ್ಥಮಾಡಿಕೊಂಡು, ಅವರ ವಿರುದ್ಧ “ಅನುಚಿತ ವರ್ತನೆ ತೋರಿದ್ದಾರೆ ಹಾಗೂ ತಪ್ಪು ಮಾಹಿತಿ ನೀಡಿ ಅಧಿಕಾರಿಗಳಿಗೆ ದಾರಿ ತಪ್ಪಿಸುತ್ತಿದ್ದಾರೆ” ಎಂದು ದೂರು ಸಲ್ಲಿಸಿದರು. ಈ ಘಟನೆಯ ಹಿನ್ನೆಲೆಯಲ್ಲಿ ಸಂಜೀವ ನಾಯ್ಕ ಮತ್ತು ಕೆಲವು ಪುರಸಭೆ ಪ್ರತಿನಿಧಿಗಳ ನಡುವೆ ಪತ್ರದ ಮೂಲಕ ಪರಸ್ಪರ ಆರೋಪ–ಪ್ರತ್ಯಾರೋಪದ ಕಾಗದ ಯುದ್ಧ ಆರಂಭವಾಯಿತು.

ಸದಸ್ಯರು ಮಾಧ್ಯಮಗಳ ಮುಂದೆ ಮಾತನಾಡಿ, “ನಮ್ಮ ಅಧಿಕಾರಾವಧಿ ಪ್ರಥಮ ಸಭೆಯಿಂದ ಲೆಕ್ಕ ಹಾಕಬೇಕು, ಅದರ ಪ್ರಕಾರ 1 ನವೆಂಬರ್ 2025 ಕ್ಕೆ ಅಧಿಕಾರ ಮುಕ್ತಾಯಗೊಳ್ಳುತ್ತದೆ ” ಎಂದು ಹೇಳಿಕೆ ನೀಡಿದರು. ಆದರೆ ಕಾನೂನಾತ್ಮಕವಾಗಿ ಅವರ ಈ ವಿವರಣೆ ಅಂಗೀಕಾರಾರ್ಹ ವಾಗಲಿಲ್ಲ. ಜಿಲ್ಲಾಧಿಕಾರಿಗಳಿಂದ ಈ ವಿಷಯದ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಬಂದಿರದಿದ್ದರೂ, 3 ನವೆಂಬರ್ 2025ರ ವೇಳೆಗೆ ಈ ಕಾಗದ ಯುದ್ಧವೂ ತಣಿದು, ಪುರಸಭೆಯೊಳಗಿನ ವಾತಾವರಣ ನಿಧಾನವಾಗಿ ಶಾಂತಿಯ ಹಾದಿಯತ್ತ ತಿರುಗಿತು.

ಇದಾದ ನಂತರ 1 ನವೆಂಬರ್ ಶನಿವಾರ ಕನ್ನಡ ರಾಜ್ಯೋತ್ಸವ ಹಾಗೂ 2 ನವೆಂಬರ್ ರವಿವಾರ ರಜೆ ಇದ್ದ ಕಾರಣ ಕಚೇರಿ ಕೆಲಸಗಳು ತಾತ್ಕಾಲಿಕವಾಗಿ ನಿಂತಿದ್ದವು. ಆದರೆ ಇಂದು 3 ನವೆಂಬರ್ ಸೋಮವಾರ, ಎಚ್. ಅಕ್ಷತಾ ಅವರು ಕಚೇರಿಗೆ ಹಾಜರಾಗಿ ತಮ್ಮ ಕರ್ತವ್ಯವನ್ನು ಪೂರ್ಣ ಪ್ರಮಾಣದಲ್ಲಿ ಮುಂದುವರಿಸಿದ್ದಾರೆ. ಹಲವಾರು ರಾಜಕೀಯ ಮುಖಂಡರು, ಸಾಮಾಜಿಕ ಹೋರಾಟಗಾರರು ಮತ್ತು ಮಾಜಿ ಪುರಸಭೆ ಸದಸ್ಯರು. ಪಕ್ಷೇತರ ನಾಗರಿಕರು ಅಕ್ಷತಾ ಅವರನ್ನು ಭೇಟಿ ಮಾಡಿ, “ರಾಜಕೀಯ ಒತ್ತಡಗಳ ನಡುವೆಯೂ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ, ಈಗಾಗಲೇ ಈ ಸ್ವತ್ತು ಪ್ರಕ್ರಿಯೆ ಹಿಂದುಳಿದಿದೆ. ಅಂಕೋಲಾದಲ್ಲಿ ಸ್ವಚ್ಛತೆಗೆ ಹಿನ್ನಡೆಯಾಗಿದೆ. ಸಾಲು ಸಾಲು ಹಬ್ಬ ಉತ್ಸವಗಳು ಮುಂದಿನ ದಿನಗಳಲ್ಲಿ ಬರುವುದರಿಂದ ಪುರಸಭೆ ಅಭಿವೃದ್ಧಿಗೆ ವೇಗ ನೀಡಬೇಕು” ಎಂದು ಪ್ರೋತ್ಸಾಹಿಸಿದ್ದಾರೆ.

ಈ ಬೆಳವಣಿಗೆ ಅಂಕೋಲಾ ಪುರಸಭೆಗೆ ಒಂದು ಸ್ಪಷ್ಟ ಸಂದೇಶ ನೀಡಿದೆ — ಸ್ಥಾನ ಮತ್ತು ಅಧಿಕಾರ ಕಾಲಾವಧಿಗೆ ಬಾಧ್ಯ, ಆದರೆ ಕಾನೂನು ಮತ್ತು ಸತ್ಯ ಶಾಶ್ವತ. ಕೆಲವರು ಅಧಿಕಾರದ ಅವಧಿಯನ್ನು ತಪ್ಪಾಗಿ ಅರ್ಥಮಾಡಿಕೊಂಡರೂ, ನ್ಯಾಯಾಲಯ ತೋರಿಸಿದ ಮಾರ್ಗವೇ ಆಡಳಿತದ ನಿಜವಾದ ದಾರಿ ಎಂಬುದು ಈಗ ಸ್ಪಷ್ಟವಾಗಿದೆ. ಎಚ್. ಅಕ್ಷತಾ ಅವರ ಧೈರ್ಯ ಮತ್ತು ಹೈಕೋರ್ಟ್‌ನ ತೀರ್ಪು ಅಂಕೋಲಾದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕ ಆಡಳಿತಕ್ಕೆ ಹೊಸ ನೆಲೆ ನಿರ್ಮಿಸಿದೆ.

Share This Article