ಅಂಕೋಲಾದ ಬಾಳೆಗುಳಿಯಲ್ಲಿ ಇದ್ದು ಇಲ್ಲದಂತಾದ ಪ್ರಯಾಣಿಕರ ತಂಗುದಾಣ..

News Desk
1 Min Read

ಅಂಕೋಲಾ : ತಾಲುಕಿನ ಬಾಳೆಗುಳಿಯ ಕ್ರಾಸಿನಲ್ಲಿ ಪ್ರಯಾಣಿಕರಿಗೆ ಬಸ್ ತಂಗುದಾಣಗಳಿದ್ದೂ ಇಲ್ಲದಂತಾಗಿದೆ. ಬಯಲೇ ಜನರ ತಂಗುದಾಣವಾಗಿದ್ದು, ಬಿರು ಬಿಸಿಲಿನಲ್ಲಿ ಬಸ್ಸಿಗಾಗಿ ಇಲ್ಲಿ ಜನ ಕಾದು ಕುಳಿತು ಕೊಳ್ಳುವಂತಾಗಿದೆ.

ತಾಲೂಕಿನ ಬಾಳೆಗುಳಿಯು ಹುಬ್ಬಳ್ಳಿ-ಮಂಗಳೂರು-ಗೋವಾವನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿ ಗುರುತಿಸಿಕೊಂಡಿದ್ದು, ನಿತ್ಯವೂ ನೂರಾರು ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಾಳೆಗುಳಿಯ ರಾಷ್ಟ್ರೀಯ ಹೆದ್ದಾರಿಯಿಂದ ಕಾರವಾರ ಸೇರಿದಂತೆ ಪಕ್ಕದ ರಾಜ್ಯ ಗೋವಾಕ್ಕೆ ಪ್ರಯಾಣ ಬೆಳೆಸುತ್ತಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಹುತೇಕ ಎಲ್ಲಾ ಬಸ್ಸುಗಳು ಬಾಳೆಗುಳಿಯಲ್ಲಿ ನಿಲುಗಡೆ ಹೊಂದಿದ್ದು ಪ್ರಯಾಣಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

ಆದರೆ ವಿಶ್ರಾಂತಿಗಾಗಿ ರಸ್ತೆಯಂಚಿನ ಅಂಗಡಿಗಳಲ್ಲಿ ನಿಂತುಕೊಳ್ಳಬೇಕಾಗಿದೆ. ಈ ಕುರಿತು ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಕೈಗೊಳ್ಳದ ಕಾರ್ಯದಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ. ಬಸ್ ನಿಲುಗಡೆಯ ಬಹು ದೂರದಲ್ಲಿ ತಂಗುದಾಣವಿದ್ದು ಬಾಳೆಗುಳಿಯಲ್ಲಿ ಮೇಲ್ಸೇತುವೆ ನಿರ್ಮಿಸುವ ಮುನ್ನ ಈ ತಂಗುದಾಣ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ನಂತರದ ದಿನಗಳಲ್ಲಿ ಬಸ್ ನಿಲುಗಡೆ ಸ್ಥಳವನ್ನು ಬಾಳೆಗುಳಿ ಅಂಡರ್‌ಪಾಸ್ ರಸ್ತೆಯ ಸಮೀಪ ಸ್ಥಳಾಂತರಿಸಲಾಗಿದೆ.

ಹೀಗಾಗಿ ಈ ಹಿಂದೆ ಸೇವೆ ನೀಡುತ್ತಿದ್ದ ಬಾಳೆಗುಳಿ ತಂಗುದಾಣ ಪ್ರಯಾಣಿಕರ ಪಾಲಿಗೆ ಇದ್ದು ಇಲ್ಲದಂತಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿರುವ ಐಆರ್‌ಬಿ ಕಂಪನಿಯವರು ನೂತನ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡುವ ಭರವಸೆಯನ್ನು ಪ್ರಯಾಣಿಕರಿಗೆ ನೀಡಿದ್ದರು. ಆದರೆ ಈವರೆಗೂ ಆ ಕಾರ್ಯವನ್ನು ಕೈಗೆತ್ತಿಕೊಂಡಿಲ್ಲ. ಆದ್ದರಿಂದ ಪ್ರಯಾಣಿಕರು ಬಿಸಿಲು, ಮಳೆಯೆನ್ನದೆ ತಮ್ಮ ಮುಂದಿನ ಪ್ರಯಾಣ ಬೇಳೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಬಿಸಿಲು ಮಳೆಯಿಂದ ರಕ್ಷಣೆ ಹೇಗೆ?

ಬಾಳೆಗುಳಿ ತಿರುವಿನಲ್ಲಿ ತಂಗುದಾಣ ವಿಲ್ಲದಿರುವುದರಿಂದ ಪ್ರಯಾಣಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆ-ಬಿಸಿಲಿನಿಂದ ಬಳಲುವಂತಾಗಿದೆ. ಇಲ್ಲವೇ ಹತ್ತಿರದ ಅಂಗಡಿಗಳ ಮೊರೆ ಹೋಗುವಂತಾಗಿದೆ. ಹವಮಾನ ವೈಪರಿತ್ಯದಿಂದಾಗಿ ಡಾಂಬರ್ ರಸ್ತೆಗಳ ಬದಿಯಲ್ಲಿ ಬಸ್ಸಿಗಾಗಿ ಕಾಯುವುದು ಕಷ್ಟಕರವಾಗಿದೆ. ಪ್ರಯಾಣಿಕರ ಹಿತ ದೃಷ್ಠಿಯಿಂದ ತಂಗುದಾಣವನ್ನು ನಿರ್ಮಿಸಬಹುದಲ್ಲವೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Share This Article