ಅಂಕೋಲಾದಲ್ಲಿ ಜನಾನುರಾಗಿಯಾಗಿ ಕರ್ತವ್ಯ ನಿರ್ವಹಿಸಿದ PDO ಗಿರೀಶ್ ನಾಯಕ್ – ಸಾಧನೆಯ ಹಾದಿ ಮುಂದುವರಿಸಿ ಹೊನ್ನಾವರದ ಕರ್ವ ಹಾಗೂ ಇಡಗುಂಜಿ ಪಂಚಾಯತಗೆ ವರ್ಗಾವಣೆ..

News Desk
2 Min Read

ಅಂಕೋಲಾ: ಅಂಕೋಲಾದಲ್ಲಿ 15 ವರ್ಷಗಳ ಕಾಲ ಜನಾನುರಾಗಿ ಹಾಗೂ ನಿಷ್ಠೆಯಿಂದ ಪಂಚಾಯತ ಅಭಿವೃದ್ಧಿ ಅಧಿಕಾರಿ ಆಗಿ ಸೇವೆ ಸಲ್ಲಿಸಿದ ಗಿರೀಶ್ ನಾರಾಯಣ ನಾಯಕ್ ಅವರು, ಈಗ ಹೊನ್ನಾವರ ತಾಲೂಕಿನ ಕರ್ವ ಮತ್ತು ಇಡಗುಂಜಿ ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳಲ್ಲಿ ಜನಮನ ಗೆದ್ದಿದ್ದರಿಂದ, ಶೇಟಗೇರಿ ಪಂಚಾಯಿತಿನಲ್ಲಿ ನಿನ್ನೆ ಬೀಳ್ಕೊಡುಗೆ ಸಭೆಯಲ್ಲಿ “ಒಬ್ಬ ಅಧಿಕಾರಿ ಹೇಗಿರಬೇಕು ಎಂಬುದಕ್ಕೆ ಮಾದರಿ” ಎಂದು ಅವರ ದಕ್ಷತೆ ಬಗ್ಗೆ ಕೊಂಡಾಡಲಾಯಿತು.

ಮೂಲತಃ ಅಂಕೋಲಾ ತಾಲೂಕಿನ ಕೇಶವಳ್ಳಿ (ಅಚವೆ) ಗ್ರಾಮದವರಾದ ಗಿರೀಶ್ ನಾಯಕ್, 2007ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಪ್ರವೇಶಿಸಿದರು. 2010ರಲ್ಲಿ PDO ಹುದ್ದೆ ಸ್ವೀಕರಿಸಿ, ಡೊಂಗ್ರಿ ಹಾಗೂ ಸುಂಕಸಾಳ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಿದರು. ವಿಶೇಷವಾಗಿ ಡೊಂಗ್ರಿ ಪಂಚಾಯಿತಿಯಲ್ಲಿ ಸತತ 12 ವರ್ಷಗಳ ಸೇವೆಯ ಮೂಲಕ ಅಭಿವೃದ್ಧಿಯ ಹೊಸ ದಾರಿಯನ್ನು ತೆರೆದರು. 2017ರಲ್ಲಿ ಡೊಂಗ್ರಿ ಪಂಚಾಯಿತಿಗೆ ಗಾಂಧಿಗ್ರಾಮ ಪ್ರಶಸ್ತಿ ದೊರಕಿದ್ದು, ಅವರ ಕಾರ್ಯಶೀಲತೆಗೆ ದೊಡ್ಡ ಮೆಚ್ಚುಗೆ ತಂದಿತು.

ನಂತರ 2022ರಿಂದ 2025ರ ತನಕ ವಂದಿಗೆ ಹಾಗೂ ಶೇಟಗೇರಿ ಪಂಚಾಯಿತಿಗಳಲ್ಲಿ PDO ಆಗಿ ಸೇವೆ ಸಲ್ಲಿಸಿದರು. ಈ ಮೂರು ವರ್ಷಗಳ ಅವಧಿಯಲ್ಲಿ ಎರಡೂ ಪಂಚಾಯಿತಿಗಳು ಪ್ರಗತಿಯ ಹಾದಿಯಲ್ಲಿ ಮುನ್ನಡೆದವು. 2023ರಲ್ಲಿ ವಂದಿಗೆ ಪಂಚಾಯಿತಿಗೂ ಗಾಂಧಿಗ್ರಾಮ ಪ್ರಶಸ್ತಿ ದೊರಕಿತು. ಶೇಟಗೇರಿ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 9000 ಮಾನವ ದಿನ ಸೃಷ್ಟಿಸಿ 150% ಸಾಧನೆ ಮಾಡಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದುದು ವಿಶೇಷ. ತೆರಿಗೆ ವಸೂಲಾತಿಯಲ್ಲಿ 95% ಸಾಧನೆ, ಗ್ರಂಥಾಲಯ ನಿರ್ಮಾಣ, ಬೀದಿ ದೀಪಗಳ ನಿರ್ವಹಣೆ, ನೀರಿನ ಸಮಸ್ಯೆ ಪರಿಹಾರ ಮುಂತಾದ ಕ್ಷೇತ್ರಗಳಲ್ಲಿ ಶೇಟಗೇರಿ ಪಂಚಾಯಿತಿ ಮಾದರಿಯಾಯಿತು.

ಇಲ್ಲಿನ ನಾಗರಿಕರ ಚಿಂತನಶೀಲ ಪ್ರಶ್ನೆಗಳಿಗೆ ಧೈರ್ಯದಿಂದ ಸಮಾಧಾನ ನೀಡುತ್ತಾ, ಪಂಚಾಯಿತಿ ಪ್ರಗತಿಗೆ ಎಲ್ಲರನ್ನೂ ಒಗ್ಗೂಡಿಸಿ ಯಶಸ್ವಿ ಆಡಳಿತ ನಡೆಸಿದರು. PDO ಗಳು ಬರಲು ಹೆದರುವ ಸ್ಥಳವೆಂದು ಹೆಸರು ಪಡೆದಿದ್ದ ಶೇಟಗೇರಿಯಲ್ಲಿ, ಗಿರೀಶ್ ನಾಯಕ್ ಅವರ ಕಾಲದಲ್ಲಿ ನಂಬಿಕೆ ಮೂಡಿದ ಪಂಚಾಯಿತಿಯಾಗಿ ರೂಪುಗೊಂಡಿತು.

ಸೆಪ್ಟೆಂಬರ್ 30, 2025ರಂದು ಶೇಟಗೇರಿ ಪಂಚಾಯಿತಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಆಡಳಿತ ವರ್ಗ, ಸಾರ್ವಜನಿಕರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಮಾಹಿತಿ ಹಕ್ಕು ಕಾರ್ಯಕರ್ತ ಚೇತನ್ ನಾಯಕ್ ಮಾತನಾಡಿ – “ನಾವು ಹಲವು ಕಠಿಣ ಪ್ರಶ್ನೆಗಳನ್ನು ಕೇಳಿದರೂ ಗಿರೀಶ್ ಸರ್ ಅವನ್ನು ಕಾನೂನಾತ್ಮಕವಾಗಿ ಪರಿಹರಿಸಿ ಅಭಿವೃದ್ಧಿ ಸಾಧಿಸಿದರು. ಅವರು ದೂರದಲ್ಲಿದ್ದರೂ ಸಹ ಸದಾ ಸಮೀಪದಲ್ಲಿರುವಂತೆ ಜನರಿಗೆ ಭರವಸೆ ನೀಡಿದರು” ಎಂದು ಕೊಂಡಾಡಿದರು. ಈ ಮಾತು ಸಭೆಯಲ್ಲಿ ನಗೆ ಗಡಲಾಗಿ ಹರಡಿತು.

ಅಧ್ಯಕ್ಷರು ಹಾಗೂ ಗ್ರಾಮಸ್ಥರು ಭಾವನಾತ್ಮಕವಾಗಿ – “ಗಿರೀಶ್ ನಾಯಕ್ ಒಬ್ಬ ದಕ್ಷ ಅಧಿಕಾರಿ. ಅವರ ವರ್ಗಾವಣೆಯಿಂದ ನಮಗೆ ದುಃಖವಾಗಿದೆ.ಇಲ್ಲಿ ಇನ್ನೂ ಹೆಚ್ಚು ದಿನ ಉಳಿಯಬೇಕಿತ್ತು ಅನ್ನಿಸುವ ಭಾವನೆ ಮೂಡಿದೆ. ಆದರೆ ಮುಂದಿನ ದಿನಗಳಲ್ಲಿ ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸುತ್ತೇವೆ.” ಎಂದು ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಿರೀಶ್ ನಾಯಕ್ – “ಅಭಿವೃದ್ಧಿ ಸಾಧ್ಯವಾದದ್ದು ಪಂಚಾಯಿತಿಯ ಸದಸ್ಯರು, ಅಧಿಕಾರಿಗಳು ಮತ್ತು ನಾಗರಿಕರ ಶ್ರಮದಿಂದ. ಮಾಹಿತಿ ಹಕ್ಕು ಕಾರ್ಯಕರ್ತರು ಚಿಂತನಶೀಲ ಪ್ರಶ್ನೆಗಳನ್ನು ಕೇಳಿದ ಕಾರಣದಿಂದಲೇ ನಾವು ಇನ್ನಷ್ಟು ದಿಟ್ಟವಾಗಿ ಕೆಲಸ ಮಾಡಲಾಯಿತು” ಎಂದರು. ತಮ್ಮ ಸಾಧನೆಯ ಹಿಂದಿರುವ ಸಹಕಾರಿಯಾಗಿ ಪತ್ನಿ ಭಾರತಿ ನಾಯಕ್ ಅವರ ಪ್ರೋತ್ಸಾಹವನ್ನೂ ಕೃತಜ್ಞತೆಯಿಂದ ಸ್ಮರಿಸಿದರು. ಜೊತೆಗೆ ತನ್ನ ಸಾಧನೆಗೆ ಕೈಜೋಡಿಸಿರುವ ಪ್ರತಿಯೊಬ್ಬರನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.

Share This Article