ಅಂಕೋಲಾ : ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಯನ್ನು 2023 ಜೂನ್ 11ರಿಂದ ಜಾರಿಗೆ ತಂದಿದ್ದು, 2025ರ ಹೊತ್ತಿಗೆ ಯಶಸ್ವಿಯಾಗಿ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಯೋಜನೆ ಪ್ರಕಾರ, ಮಾನ್ಯ ಆಧಾರ್ ಕಾರ್ಡ್ ತೋರಿಸಿದ ಯಾವುದೇ ಮಹಿಳೆಗೆ ಉಚಿತ ಟಿಕೆಟ್ ನೀಡುವುದು ಸಾರಿಗೆ ಸಂಸ್ಥೆಗಳ ಕಾನೂನುಬದ್ದ ಕರ್ತವ್ಯ. ಆಧಾರ್ ಕಾರ್ಡ್ ಹಾರ್ಡ್ ಕಾಪಿ ಜೊತೆಗೆ, ಮೊಬೈಲ್ನಲ್ಲಿ ಇರುವ ಡಿಜಿಟಲ್ ಆಧಾರ್ (mAadhaar, PDF ಅಥವಾ ಚಿತ್ರ) ಸಹ ಸಮಾನವಾಗಿ ಮಾನ್ಯವಾಗಿದೆ. ಆದಾಗ್ಯೂ, ಯಲ್ಲಾಪುರ ಘಟಕದ ಒಂದು ಬಸ್ ಚಾಲಕನ ವರ್ತನೆ ಈ ನಿಯಮವನ್ನು ಮೀರಿ ವಿವಾದಕ್ಕೆ ಕಾರಣವಾಗಿದೆ.
ಘಟನೆ : 09-08-2025 ರಂದು ವಾಯುವ್ಯ ಸಾರಿಗೆ ಸಂಸ್ಥೆಯ ಯಲ್ಲಾಪುರ ಘಟಕಕ್ಕೆ ಸೇರಿದ KA-31-F-1653 ಸಂಖ್ಯೆ ಬಸ್ (ಕಾರವಾರ–ಹುಬ್ಬಳ್ಳಿ ಮಾರ್ಗ) ಕಾರವಾರ ಬಸ್ ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆಗೆ ಅಂಕೋಲಾಕ್ಕೆ ಹೊರಟಿತ್ತು. ಮಹಿಳಾ ಪ್ರಯಾಣಿಕರು ಬಸ್ಸಿಗೆ ಹತ್ತಿದಾಗ, ಉಚಿತ ಟಿಕೆಟ್ ಪಡೆಯಲು ಮೊಬೈಲ್ನಲ್ಲಿ ಆಧಾರ್ ಕಾರ್ಡ್ ತೋರಿಸಿದರು. ಆದರೆ, ಚಾಲಕ- ಕಮ್- ನಿರ್ವಾಹಕ ಸದರಿ ವ್ಯಕ್ತಿ “ಮೊಬೈಲ್ ಆಧಾರ್ ಮಾನ್ಯವಲ್ಲ, ಹಾರ್ಡ್ ಕಾಪಿ ಇಲ್ಲದಿದ್ದರೆ ಫ್ರೀ ಟಿಕೆಟ್ ಸಿಗುವುದಿಲ್ಲ. ಹಣ ಕೊಟ್ಟು ಹೋಗಿ, ಇಲ್ಲದಿದ್ದರೆ ಬೇರೆ ಬಸ್ನಲ್ಲಿ ಹೋಗಿ” ಎಂದು ಹೇಳಿ ಅನುಚಿತವಾಗಿ ವರ್ತಿಸಿ ಉಚಿತ ಟಿಕೆಟ್ ನೀಡಲು ನಿರಾಕರಿಸಿದರು.
ಪ್ರಯಾಣಿಕರು “ನಾನು ಕರ್ನಾಟಕ ರಾಜ್ಯದ ಹಲವು ಕಡೆಗಳಲ್ಲಿ ಮೊಬೈಲ್ ಆಧಾರ್ ತೋರಿಸಿ ಉಚಿತ ಟಿಕೆಟ್ ಪಡೆದುಕೊಂಡಿದ್ದೇನೆ” ಎಂದು ತಿಳಿಸಿದರೂ, ಚಾಲಕ “ನನಗೆ ಮೂರೂ ತಿಂಗಳ ಹಿಂದೆ ಸುತ್ತೋಲೆ ಬಂದಿದೆ, ಹಾರ್ಡ್ ಕಾಪಿ ಇದ್ದರೆ ಮಾತ್ರ ಫ್ರೀ ಟಿಕೆಟ್. ಮೊಬೈಲ್ ಆಧಾರ್ ಮಾನ್ಯವಲ್ಲ” ಎಂದು ಪುನಃ ಒತ್ತಾಯಿಸಿದರು. ಇದರಿಂದ ಪ್ರಯಾಣಿಕರು ₹61 ಹಣ ನೀಡಿ ಟಿಕೆಟ್ ತೆಗೆದುಕೊಂಡರು.
ಮಾಧ್ಯಮ ವಿಚಾರಣೆ: ಈ ಘಟನೆ ಕುರಿತು ಮಹಿಳೆ ಅಂಕೋಲಾದ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ಮುಟ್ಟಿಸಿದರು. ಆ ಸಮಯಕ್ಕೆ ಬಸ್ ಅಂಕೋಲಾ ಬಸ್ ನಿಲ್ದಾಣಕ್ಕೆ ತಲುಪಿಲ್ಲ ಎಂದು ಖಚಿತ ಪಡಿಸಿಕೊಂಡ ಮಾಧ್ಯಮದವರು ಅಂಕೋಲಾ ಬಸ್ ನಿಲ್ದಾಣದಲ್ಲಿ ಬಸ್ ತಲುಪುವದನ್ನು ಕಾದು ಬಸ್ ನಿಲ್ದಾಣಕ್ಕೆ ಬಂದ ವೇಳೆಗೆ ಹೋಗಿ ವಿಚಾರಿಸಿದಾಗ, ಚಾಲಕ ಮತ್ತೆ ಉದ್ದಟತನ ತೋರಿಸಿದ್ರು, ಅವರದೇ ಸಂಸ್ಥೆಯ ಸಹೋದ್ಯೋಗಿ ನಿರ್ವಾಹಕರು “ಮೊಬೈಲ್ ಆಧಾರ್ ಸಹ ಮಾನ್ಯ” ಎಂದು ತಿಳಿಸಿದರೂ ಅವರ ಮಾತು ಕೇಳಲಿಲ್ಲ. “ಆದೇಶದ ಪ್ರತಿಯನ್ನು ತಂದು ತೋರಿಸಿ” ಎಂದು ಬಿರುಸಾಗಿ ಅವರನ್ನೇ ಪ್ರಶ್ನಿಸಿದರು.
ಚಾಲಕನನ್ನು ಕುರಿತು ಮಾಧ್ಯಮದವರು ನೀವು ನಿಯಮ ಭಾಹಿರವಾಗಿ ಮಾತನಾಡುವುದು ಸರಿಯಲ್ಲ. ನಿಮ್ಮ ಬಳಿ ದಾಖಲೆ ಇದ್ದರೆ ನೀಡಿ ಮೊಬೈಲ್ ಆಧಾರ್ ಕಾರ್ಡ್ ತೋರಿಸಿದರೆ ಟಿಕೆಟ್ ನೀಡಲು ಬರುವುದಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ ಈ ಬಗ್ಗೆ ಘಟಕ ವ್ಯವಸ್ಥಾಪಕರಿಗೆ ತಿಳಿಸುತ್ತೇವೆ ಎಂದು ಹೇಳಿದಾಗ ಚಾಲಕನು ಸಿಡಿಮೀಡಿಗೊಂಡು “ನೀವು ಘಟಕ ವ್ಯವಸ್ಥಾಪಕರಿಗಾದರೂ ಹೇಳಿ, ಡಿಸಿಗೆ ಹೇಳಿ, ಎಂಡಿಗೆ ಹೇಳಿ — ನಾನು ಮೊಬೈಲ್ ಆಧಾರ್ ತೋರಿಸಿದವರಿಗೆ ಉಚಿತ ಟಿಕೆಟ್ ಕೊಡುವುದಿಲ್ಲ” ಎಂದು ಪುನಃ ಘೋಷಿಸಿದರು.
ಇದಲ್ಲದೆ, ಅಂಕೋಲಾ ಘಟಕದ ಸಂಚಾರ ನಿಯಂತ್ರಕರ ಬಳಿ ವಾಹನ ಎಂಟ್ರಿ ಮಾಡದೇ, ಅಂಕೋಲಾದಲ್ಲಿ ಟಿಕೆಟ್ ಪಡೆದುಕೊಂಡ ಪ್ರಯಾಣಿಕರನ್ನು ಇಳಿಸಿ, ಬಸ್ ನೇರವಾಗಿ ಯಲ್ಲಾಪುರಕ್ಕೆ ತೆರಳಿದ ಘಟನೆ ಕೂಡ ವರದಿಯಾಗಿದೆ.

ಅಧಿಕಾರಿಗಳ ಪ್ರತಿಕ್ರಿಯೆ : ಯಲ್ಲಾಪುರ ಘಟಕ ವ್ಯವಸ್ಥಾಪಕರಿಗೆ ನಡೆದಿರುವ ಘಟನಾವಳಿಗಳ ಬಗ್ಗೆ ದೂರವಾಣಿ ಮೂಲಕ ಸಂಪೂರ್ಣವಾಗಿ ಮಾಹಿತಿ ನೀಡಿದಾಗ, ಅವರು “ಮೊಬೈಲ್ ಆಧಾರ್ ತೋರಿಸಿದರೂ ಉಚಿತ ಟಿಕೆಟ್ ನೀಡಲೇಬೇಕು. ನಿರಾಕರಿಸುವಂತಿಲ್ಲ. ಆ ನೊಂದ ಮಹಿಳೆ ಏನಾದರೂ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸ್ಪಷ್ಟನೆ ನೀಡಿದರು.
ಪ್ರಯಾಣಿಕರ ಆಕ್ರೋಶ : ನೊಂದ ಮಹಿಳಾ ಪ್ರಯಾಣಿಕರು “ನನ್ನ ಬಳಿ ಹಣ ಇತ್ತು, ಟಿಕೆಟ್ ಕೊಂಡು ಬಂದೆ. ಆದರೆ ಹಣ ಇರದಿದ್ದರೆ ಅರ್ಧ ದಾರಿಯಲ್ಲಿ ಇಳಿಯಬೇಕಾಗುತ್ತಿತ್ತು. ನನ್ನ ತರಹ ಮತ್ತಾರಿಗೂ ಈ ಅನುಭವ ಬರಬಾರದು” ಎಂದು ಹೇಳಿ, ಚಾಲಕನ ವಿರುದ್ಧ ಅಧಿಕೃತ ದೂರು ನೀಡುವುದಾಗಿ ತಿಳಿಸಿದರು. ಅವರು ಸಾರಿಗೆ ಸಂಸ್ಥೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಘಟನೆಯ ವಿಡಿಯೋ ಸಾಕ್ಷ್ಯ ಆಧರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಾನೂನು ಸ್ಪಷ್ಟನೆ : ಶಕ್ತಿ ಯೋಜನೆ ನಿಯಮಾವಳಿ ಪ್ರಕಾರ, ಮಾನ್ಯ ಆಧಾರ್ ಕಾರ್ಡ್ — ಹಾರ್ಡ್ ಕಾಪಿ ಅಥವಾ ಡಿಜಿಟಲ್ ರೂಪ — ಎರಡೂ ಮಾನ್ಯವಾಗಿದೆ. ಸಾರಿಗೆ ಸಂಸ್ಥೆಯ ಯಾವುದೇ ಚಾಲಕ/ನಿರ್ವಾಹಕರು ಇದನ್ನು ನಿರಾಕರಿಸುವುದು ನಿಯಮ ಉಲ್ಲಂಘನೆ. ಇದು ಸಾರ್ವಜನಿಕ ಸೇವೆಯಲ್ಲಿ ನಿರ್ಲಕ್ಷ್ಯ ಮತ್ತು ಮಹಿಳೆಯರ ಹಕ್ಕಿನ ಉಲ್ಲಂಘನೆ ಎಂದು ಪರಿಗಣಿಸಬಹುದಾಗಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ್

